ಶ್ರೀನಗರ್ : ಕಾಶ್ಮೀರದ ಮೋಸ್ಟ್ ವಾಂಟೆಡ್ ಟೆರರಿಸ್ಟ್, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ರಿಯಾಝ್ ನೈಕೂ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ಗುರುವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಪುಲ್ವಾಮ ಜಿಲ್ಲೆಯ ಬೈಗ್ ಪುರಾ ಎಂಬಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನೈಕೂ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಎನ್ ಕೌಂಟರ್ ಗೆ ಬಲಿಯಾದ ಎರಡನೇ ಉಗ್ರ ನೈಕೂ ಎಂದು ವರದಿ ತಿಳಿಸಿದೆ.
ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಮೂರು ಪ್ರತ್ಯೇಕ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಡೆಯುತ್ತಿತ್ತು. ಪಾಂಪೋರಾ ಪ್ರದೇಶದ ಶಾರ್ಷಾಲಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮತ್ತೆ ಇಬ್ಬರು ಉಗ್ರರು ಬಲಿಯಾಗಿರುವುದಾಗಿ ವರದಿ ವಿವರಿಸಿದೆ.
ಭಯೋತ್ಪಾದಕ ರಿಜಾಯ್ ವಿರುದ್ಧದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಣಿವೆ ಪ್ರದೇಶದ ಎಲ್ಲಾ ಹತ್ತು ಜಿಲ್ಲೆಗಳ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಬೆಳಗ್ಗೆ 9ಗಂಟೆಗೆ ಕಾರ್ಯಾಚರಣೆ ಆರಂಭವಾಗಿತ್ತು. ರಿಯಾಝ್ ನೈಕೂ ಮೋಸ್ಟ್ ವಾಂಟೆಡ್ ಉಗ್ರ ಆಗಿದ್ದು, ಆತನ ತಲೆಗೆ 12 ಲಕ್ಷ ರೂಪಾಯಿ ಬಹುಮಾನ ಸರ್ಕಾರ ಘೋಷಿಸಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಅಧಿಕಾರ ವಹಿಸಿಕೊಂಡ ನಂತರ ನೈಕೂ ಭಾರತವನ್ನು ಗುರಿಯಾಗಿರಿಸಿಕೊಂಡಿದ್ದ ಎಂದು ವರದಿ ವಿವರಿಸಿದೆ.
2016ರ ಜುಲೈನಲ್ಲಿ ನಡೆದಿದ್ದ ಎನ್ ಕೌಂಟರ್ ನಲ್ಲಿ ಜಮ್ಮು ಕಾಶ್ಮೀರದ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯನ್ನು ಹತ್ಯೆಗೈದ ನಂತರ ರಿಯಾಝ್ ನೈಕೂ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಆಗಿದ್ದ ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್ ಪಿ ವೈದ್ ತಿಳಿಸಿದ್ದಾರೆ.