Advertisement

ವಿಜಯಪುರ ಟೆಕ್ಕಿಗಳಿಂದ HIV ಸೋಂಕಿತರಿಗೆ ಆ್ಯಪ್ ಶೋಧ: ರಾಜ್ಯದ 4.75ಲಕ್ಷ ಸೋಂಕಿತರಿಗೆ ಅನುಕೂಲ

09:23 AM Dec 01, 2020 | Mithun PG |

ವಿಜಯಪುರ: ದೇಶದ ಎಚ್‍ಐವಿ ಸೋಂಕಿತರು ಹಾಗೂ ಏಡ್ಸ್ ರೋಗಿಗಳ ಆರೋಗ್ಯ ಸುರಕ್ಷತೆಗಾಗಿ ಬಸವನಾಡಿನ ಯುವ ಜೋಡಿಯೊಂದು ಸಾಫ್ಟ್ ವೇರ್-ಸ್ಮಾರ್ಟ್ ಕಾರ್ಡ್ ರೂಪಿಸಿ, ಆ್ಯಪ್ ಸಿದ್ಧಪಡಿಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಸಮ್ಮತಿ ಸಿಕ್ಕರೆ ಒಂದೆಡೆ ಸೋಂಕಿತ-ರೋಗಿಗಳು ವಲಸೆ ಹೋದರೂ ಮಾತ್ರೆ ಪಡೆಯಲು ಅನುಕೂಲವಾಗಲಿದೆ. ಇದಲ್ಲದೇ ಸರ್ಕಾರಕ್ಕೆ ಸೋಂಕಿತರ ದಾಖಲೆ ನಿರ್ವಹಣೆಗೆ ವಾರ್ಷಿಕವಾಗಿ ಮಾಡುವ ಐದಾರು ಕೋಟಿ ರೂ. ಉಳಿತಾಯವಾಗಲಿದೆ.

Advertisement

ಕೃಷ್ಣಾ ತೀರದ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಜಗದೀಶ ಗಂಜ್ಯಾಳ, ಭೀಮಾ ತೀರದ ಚಿಂತಕರ ನೆಲೆಯ ಚಡಚಣ ಮೂಲದ ಜುಲ್ಫೀಕರ ನೇಗಿನಾಳ ಇಬ್ಬರು ಸತತ ವರ್ಷಗಳ ಕಾಲ ನಡೆಸಿದ ಸುಮಾರು 4-5 ಲಕ್ಷ ರೂ. ಖರ್ಚು ಮಾಡಿಕೊಂಡು ಮಾಡಿದ ಶೋಧ ಫಲ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾರ್ಟಪ್ ಪರಿಕಲ್ಪನೆಯಲ್ಲಿ ಸ್ವಂತ ಹಣದಲ್ಲಿ ಈ ಯುವ ಟೆಕ್ಕಿ ಜೋಡಿ ರೂಪಿಸಿದ ಆ್ಯಪ್ ಸರ್ಕಾರದ ಗಮನಕ್ಕೂ ಬಂದಿದೆ.

ಜಗದೀಶ-ಜುಲ್ಫೀಕರ ಜೋಡಿ ರೂಪಿಸಿರುವ ಈ ಆ್ಯಪ್‍ನಲ್ಲಿ ಸೋಂಕಿತ-ರೋಗಿಯ ಸಮಗ್ರ ದಾಖಲೆ ಇರಲಿದ್ದು, ಸೋಂಕಿತರಿಗೆ ಸಂಕೇತ ದಾಖಲೆ ಇರುವ ಸ್ಮಾರ್ಟ್ ಕಾರ್ಡ ನೀಡಲಾಗುತ್ತದೆ. ಇದರಿಂದ ಸೋಂಕಿತರ ಗೌಪ್ಯತೆ ರಕ್ಷಣೆ ಆಗಲಿದ್ದು, ರೋಗಿಗಳು ಮೂಲ ಸ್ಥಳದಿಂದ ರಾಜ್ಯದ ಯಾವುದೇ ಮೂಲೆಗೆ ವಲಸೆ ಹೋದರೂ ನಿಯಮಿತವಾಗಿ ಉದ್ಯೋಗದ ಸ್ಥಳದಲ್ಲೇ ಮಾತ್ರೆ ಪಡೆಯಲು ಸಹಕಾರಿ ಆಗಲಿದೆ. ರೋಗಿಯ ಕಾಲಕಾಲದ ಸ್ಥಿತಿಗತಿಯನ್ನು ಅರಿಯಲು ಈ ಆ್ಯಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಸದರಿ ಸ್ಮಾರ್ಟ್ ಕಾರ್ಡ್ ಗೆ ರೋಗಿಯ ಆಧಾರ್, ಬ್ಯಾಂಕ್ ಹಾಗೂ ಪಡಿತರ ಚೀಟಿ ಸೇರಿದಂತೆ ವಿವಿಧ ಖಾತೆ ಲಿಂಕ್ ಮಾಡಲು ಅವಕಾಶವಿದೆ. ಸದರಿ ಕಾರ್ಡ್ ಚಿಕಿತ್ಸೆ ನೀಡುವ ವೈದ್ಯರು ಹಾಗೂ ರೋಗಿಗೆ ಮಾತ್ರ ಮಾಹಿತಿ ಕಾಣುವಂತೆ ಸ್ಮಾರ್ಟ್ ಕಾರ್ಡ್‍ದಾರರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: ನಿವಾರ್ ಬೆನ್ನಲ್ಲೇ ‘ಬುರೆವಿ’ ಚಂಡಮಾರುತ ಭೀತಿ: ಕೇರಳದ 4ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

Advertisement

ಈಗಿರುವ ವ್ಯವಸ್ಥೆಯಲ್ಲಿ ರೋಗಿಗಳ ದಾಖಲೆ ನಿರ್ವಹಿಸಲು ಕಾಗದದ ದಾಖಲೆ ಬಳಸುತ್ತಿದ್ದು, ಮಾತ್ರೆ ಮುಗಿದಲ್ಲಿ ಗುಳೇ ಹೋಗುವ ಬಡ ಸೋಂಕಿತ ರೋಗಿಗೆ ಬೇರೆ ಸ್ಥಳದಲ್ಲಿ ಮಾತ್ರೆ ಪಡೆಯಲು ಸಮಸ್ಯೆ ಆಗುತ್ತಿದೆ. ಅದರಲ್ಲೂ ಬಹುತೇಕರು ಬಡ ಸೋಂಕಿತರು ಮಾತ್ರೆ ಪಡೆಯಲು ಹೆಚ್ಚಿನ ವೆಚ್ಚ ಮಾಡಲಾಗದೇ ಅರ್ಧಕ್ಕೆ ಮಾತ್ರೆ ಸೇವನೆ ಬಿಟ್ಟಿದ್ದಾರೆ. ಕಾಗದದ ದಾಖಲೆ ನಿರ್ವಹಣೆಗೆ ಸರ್ಕಾರಕ್ಕೆ ಸಿಬ್ಬಂದಿ ಹಾಗೂ ಆರ್ಥಿಕ ಹೆಚ್ಚಿನ ಹೊರೆ ಬೀಳಲಿದೆ. ಈ ಸುರಕ್ಷಿತ ಆ್ಯಪ್ ಇರುವ ಸ್ಮಾರ್ಟ್ ಕಾರ್ಡ್ ಬಳಸಿದಲ್ಲಿ ಸರ್ಕಾರಕ್ಕೆ ಹೊರೆ ಕಡಿಮೆ ಆಗಲಿದೆ. ರಾಜ್ಯದಲ್ಲಿ ಸದ್ಯ 4.74 ಲಕ್ಷ ಎಚ್‍ಐವಿ-ಏಡ್ಸ್ ಸೋಂಕಿತರಿಗೆ ಇದರ ಪ್ರಯೋಜನ ಹೆಚ್ಚಿದೆ ಎಂದು ಆ್ಯಪ್ ರೂಪಿಸಿರುವ ಜಗದೀಶ-ಜುಲ್ಫೀಕರ ಜೋಡಿ ಹೇಳುತ್ತದೆ.

ಇದನ್ನೂ ಓದಿ:  ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

ಈ ವಿಶಿಷ್ಟ ಶೋಧವನ್ನು ವೀಕ್ಷಿಸಿರುವ ರಾಜ್ಯದ ಏಡ್ಸ್ ಪ್ರಿವೆನ್ಸೆಶನ್ ಸೋಸೈಟಿ ಹಾಗೂ ಎಆರ್‍ ಐ ಕೇಂದ್ರದ ಅಧಿಕಾರಿ ಸಿಬ್ಬಂದಿಗೆ ವಿಜಯಪುರ ಟೆಕ್ಕಿಗಳ ಶೋಧ ಸಂತೃಪ್ತಿ ತಂದಿದೆ. ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ವರದಿ ಸಲ್ಲಿಸಿದ್ದು, ಈಗಿನ ಆರೋಗ್ಯ ಸಚಿವ ಡಾ.ಸುಧಾಕರ್  ಅವರಿಗೂ ತಲುಪಿದ್ದರೂ ಸ್ಪಂದನೆ ಸಿಕ್ಕಿಲ್ಲ. ಆದರೆ ಸದರಿ ಆ್ಯಪ್ ನೆರೆ ರಾಜ್ಯಗಳಾದ ಮಹಾರಾಷ್ಡ್ರ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳಿಗೂ ತಲುಪಿದ್ದು, ಅನುಷ್ಠಾನದ ಮಾತುಕತೆ ನಡೆದಿದೆ. ಒಂದೊಮ್ಮೆ ಈ ಯುವಕರ ಶೋಧ ದಕ್ಷಿಣ ಭಾರತದ ರಾಜ್ಯಗಳ ಸರ್ಕಾರಗಳಿಗೆ ಒಪ್ಪಿತವಾದಲ್ಲಿ ದೇಶವ್ಯಾಪಿ ಹರಡುವ ಸಾಧ್ಯತೆಯೂ ಇಲ್ಲದಿಲ್ಲ.

ಆರೋಗ್ಯ ಇಲಾಖೆಯಲ್ಲಿದ್ದ ನಮ್ಮ ತಂದೆ ಅಬ್ದುಲ್ ಗಫೂರ್ ಅವರ ಬಳಿ ಮಾತ್ರೆ ಪಡೆಯಲು ಬರುವ ಎಚ್‍ಐವಿ ಸೋಂಕಿತರ ಪರದಾಟ ನೋಡಿದ್ದೆ. ಇದನ್ನು ಸರಳೀಕರಿಸಿ ರೋಗಿಗಳಿಗೆ ನೆಲೆಸಿದ ಸ್ಥಳದಲ್ಲೇ ಸುರಕ್ಷಿತವಾಗಿ ಮಾತ್ರೆ ಸಿಗುವಂತೆ ಹಾಗೂ ಸರ್ಕಾರಕ್ಕೆ ಪೇಪರ್ ಲೆಸ್ ಹಾಗೂ ಆರ್ಥಿಕ ವೆಚ್ಚ ಕಡಿತ ಮಾಡುವ ಸದಾಶಯದಿಂದ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವ ಆ್ಯಪ್-ಸ್ಮಾರ್ಟ್ ಕಾರ್ಡ್ ರೂಪಿಸಿದ್ದೇವೆ. 

-ಜುಲ್ಫೀಕರ ನೇಗಿನಾಳ , ಮುಖ್ಯಸ್ಥ

ಸಿ.ವಿರಾಮನ್ ಟೆಕ್ನಾಲಜೀಸ್

ಆರ್ಥಿಕವಾಗಿ ನಾವೇನೂ ಸಬಲರಲ್ಲ. ಆದರೆ ನಮ್ಮಲ್ಲಿರುವ ಜ್ಞಾನದ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೆಕೆಂಬ ಹಂಬಲದಿಂದ ಎಚ್‍ಐವಿ-ಏಡ್ಸ್ ಸೋಂಕಿತರ ಹಿತದೃಷ್ಟಿಯಿಂದ ಆ್ಯಪ್-ಸ್ಮಾರ್ಟ ಕಾರ್ಡ್ ರೂಪಿಸಿದ್ದೇವೆ. ಸರ್ಕಾರ ಇದನ್ನು ಒಪ್ಪಿಕೊಂಡರೂ ನಮಗೇನು ಕೋಟಿ ಹಣ ಕೊಡುವುದು ಬೇಡ, ಮಾಡಿದ ವೆಚ್ಚ ನೀಡಿದರೂ ಸಾಕು, ಹಸಿವು ಮರೆತು ಮಾಡಿದ ನಮ್ಮ ಪರಿಶ್ರಮ ಸಾರ್ಥಕತೆ ಪಡೆಯಲಿದೆ.

-ಜಗದೀಶ ಗಂಜ್ಯಾಳ

ಎಚ್‍ಐವಿ ಸೋಂಕಿತರ ಸಾಫ್ಟ್ ವೇರ್ ಶೋಧಕ

 

ವರದಿ- ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next