Advertisement
ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆ ಅನ್ವಯ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 2ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಸರಕಾರ ಇಂತಹ ಪ್ರಕರಣಗಳ ಸಂತ್ರಸ್ತರಿಗೆ ನೀಡಲಾ ಗುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂಬಂಧ, ಪ್ರತೀ ವರ್ಷ ಪರಿಷ್ಕರಿಸುವ ಬಗೆಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
ಒಂದೆಡೆಯಿಂದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಾನೂನನ್ನು ಬಿಗಿಗೊಳಿಸಿ ಭಾರೀ ಪ್ರಮಾಣದ ದಂಡವನ್ನು ವಿಧಿಸಿ ಹೊಸ ಕಾನೂನನ್ನು ಜಾರಿಗೊಳಿಸಲು ಮುಂದಾದಾಗ ಟ್ರಕ್ ಚಾಲಕರು ಪ್ರತಿಭಟನೆ ನಡೆಸಿ ಈ ಕಾನೂನಿನ ಜಾರಿಗೆ ತಡೆ ಒಡ್ಡಿದ್ದರು. ಈಗ ಸುಪ್ರೀಂ ಕೋರ್ಟ್ ನೀಡಿರುವ ಈ ಆದೇಶದಿಂದ ಸರಕಾರದ ಹೊಸ ಕಾನೂನಿಗೆ ಮತ್ತಷ್ಟು ಬಲ ಬಂದಂತಾಗಿದ್ದು, ಟ್ರಕ್ ಚಾಲಕ ಸಂಘಟನೆಗಳ ಮುಂದಿನ ನಡೆಯ ಕುರಿತಂತೆ ಸಹಜವಾಗಿಯೇ ಕುತೂಹಲ ಮೂಡಿದೆ. ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಸರಕಾರ ಹೆಚ್ಚಿಸಿದ್ದೇ ಆದಲ್ಲಿ ಆ ಮೊತ್ತವನ್ನು ಸರಕಾರ ಭರಿಸಬೇಕಾಗುತ್ತದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಹೀಗಾಗಿ ಕೇಂದ್ರ ಸರಕಾರ ತನ್ನ ಮೇಲೆ ಬೀಳಲಿರುವ ಹೆಚ್ಚುವರಿ ಹೊರೆಯನ್ನು ತಪ್ಪಿತಸ್ಥರ ಹೆಗಲಿಗೆ ವರ್ಗಾಯಿಸಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಹಿಟ್ ಆ್ಯಂಡ್ ರನ್ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಅತ್ಯಂತ ಪ್ರಾಮುಖ್ಯವನ್ನು ಪಡೆದುಕೊಂಡಿದೆಯಲ್ಲದೆ ತನ್ಮೂಲಕ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿಯೂ ನೆರವಾಗಲಿದೆ.