Advertisement

Arrested: ಹಿಟ್‌ ಆ್ಯಂಡ್‌ ರನ್‌ ಕೇಸ್‌; 4 ತಿಂಗಳ ಬಳಿಕ ಆರೋಪಿಗಳ ಸೆರೆ

01:36 PM May 28, 2024 | Team Udayavani |

ಬೆಂಗಳೂರು: ನಗರದ ಮಾಳಗಾಳ ಸೇತುವೆ ಬಳಿ 4 ತಿಂಗಳ ಹಿಂದೆ ನಡೆದಿದ್ದ ಹಿಟ್‌ ಆ್ಯಂಡ್‌ ರನ್‌ ರಸ್ತೆ ಅಪಘಾತದಲ್ಲಿ ತಲೆಮರೆಸಿ ಕೊಂಡಿದ್ದ ಇಬ್ಬರು ಆರೋಪಿಗಳನ್ನು ವಾಹನದ ಮೇಲಿನ ಹಸುವಿನ ಚಿತ್ರದ ಸುಳಿವಿನ ಆಧಾರದಲ್ಲಿ ಸಿನಿಮೀಯ ಶೈಲಿಯಲ್ಲಿ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮಂಡ್ಯದ ತೂಬಿನಕೆರೆ ನಿವಾಸಿ, ವಾಹನ ಚಾಲಕ ಸುನೀಲ್‌, ವಾಹನ ಮಾಲೀಕ ಸಂದೀಪ್‌ ಹಾಗೂ ಮದ್ಯದ ಅಮಲಿನಲ್ಲಿ ಬೈಕ್‌ ಚಲಾಯಿಸಿದ ಮೃತನ ಸ್ನೇಹಿತ ಟಿಕಾರಾಜ್‌ ಎಂಬುವರನ್ನು ಬಂಧಿಸಲಾಗಿದೆ.

ಏನಿದು ಘಟನೆ?: ನೇಪಾಳ ಮೂಲದ ಟಿಕಾರಾಜ್‌ ಮತ್ತು ದಿನೇಶ್‌ 2024ರ ಜ.14ರಂದು ನಸುಕಿನ 2 ಗಂಟೆ ಸುಮಾರಿಗೆ ನಾಗರಬಾವಿ ಹೊರವರ್ತುಲ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದರು. ಮಾಳಗಾಳ ಸೇತುವೆ ಮೇಲೆ ಮದ್ಯದ ಅಮಲಿನಲ್ಲಿದ್ದ ಟಿಕಾರಾಜ್‌ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಬೈಕ್‌ನಿಂದ ಇಬ್ಬರು ಕೆಳಗೆ ಬಿದ್ದಿದ್ದು, ಬಲಭಾಗಕ್ಕೆ ದಿನೇಶ್‌ ಬಿದ್ದಿದ್ದ. ಅದೇ ವೇಳೆ ಐಚರ್‌ ವಾಹನವೊಂದು ಅತೀ ವೇಗವಾಗಿ ಬಂದು ದಿನೇಶ್‌ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಅದನ್ನು ಕಂಡು ಆಘಾತಕ್ಕೊಳಗಾದ ಟಿಕಾರಾಜ್‌ 20 ಅಡಿ ಎತ್ತರದ ಮೇಲು ಸೇತುವೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ನಂತರ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಎಸ್‌ .ಟಿ.ಯೋಗೇಶ್‌ ನೇತೃತ್ವದ ತಂಡ ಟಿಕಾರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿತ್ತು. ಆಗ ಈತ ಮದ್ಯಪಾನ ಮಾಡಿರುವುದು ಖಚಿತ ವಾಗಿತ್ತು.

ಬಳಿಕ ಆರೋಪಿಗಳ ಪತ್ತೆಗಾಗಿ ಇನ್‌ಸ್ಪೆಕ್ಟರ್‌ ಎಸ್‌ .ಟಿ.ಯೋಗೇಶ್‌ ನೇತೃತ್ವದ ಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ನಿರಂತರ ತನಿಖೆ ನಡೆಸಿ ತಾಂತ್ರಿಕ ಸಾಕ್ಷ್ಯಾಗಳು ಹಾಗೂ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರ ಮಾಹಿತಿ, ಟೋಲ್‌ಗ‌ಳಲ್ಲಿರುವ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಐಚರ್‌ ವಾಹನ ಚಾಲಕ ಮತ್ತು ಮಾಲೀಕನನ್ನು ಮಂಡ್ಯದ ತೂಬಿನಕೆರೆ ಗ್ರಾಮದಲ್ಲಿ ಬಂಧಿ ಸಲಾಗಿದೆ. ಆ ನಂತರ ಮದ್ಯದ ಅಮಲಿನಲ್ಲಿ ಬೈಕ್‌ ಚಾಲನೆ ಮಾಡಿದ ಟಿಕಾರಾಜ್‌ನನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ವಾಹನದಲ್ಲಿ ಹಸುವಿನ ಫೋಟೋ ಸುಳಿವು: ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಕೃತ್ಯ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿ, ರಕ್ತದ ಕಲೆ ಇರುವ ಹೆಲ್ಮೆಟ್‌ ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಆರಂಭದಲ್ಲಿ ಘಟನೆಗೆ ನಿಖರ ಕುರುಹುಗಳು ಪತ್ತೆಯಾಗಿರಲಿಲ್ಲ. ಬಳಿಕ ಹೊರ ವರ್ತುಲ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಹಸುವಿನ ಚಿತ್ರ ಇರುವ ವಾಹನದ ಬಗ್ಗೆ ಅನುಮಾನ ಮೂಡಿತ್ತು. ಬಳಿಕ ವಾಹನ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ ಪರಿಶೀಲಿಸಿದಾಗ ಮಂಡ್ಯದ ತೂಬನಕೆರೆಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಪಂಚಮುಖೀ ಪೀಡ್ಸ್‌ ಕಂಪನಿಗೆ ಸೇರಿದ ವಾಹನವೆಂದು ಗೊತ್ತಾಗಿದೆ. ನಂತರ ವಾಹನವನ್ನು ವಶಕ್ಕೆ ಪಡೆದು ಅದರ ಚಕ್ರಗಳ ಲೂಮಿನಾರ್‌ ಪರೀಕ್ಷೆ ನಡೆಸಿದಾಗ ಚಕ್ರಗಳಲ್ಲಿ ರಕ್ತದ ಕಲೆಗಳು ಹಾಗೂ ಮಾಂಸದ ತುಂಡುಗಳು ಇರುವುದು ಪತ್ತೆಯಾಗಿತ್ತು. ನಂತರ ಎಫ್ಎಸ್‌ಎಲ್‌ ಗೆ ಕಳುಹಿಸಿ ರಕ್ತದ ಮಾದರಿ ಪರೀಕ್ಷಿಸಿದ ಮೃತ ದಿನೇಶ್‌ ರಕ್ತದ ಗುಂಪು ಒಂದೇ ಎಂಬುದು ಖಚಿತವಾಗಿದೆ. ಆ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಐಚರ್‌ ವಾಹನ ಚಾಲಕ ಸುನೀಲ್‌ ಮತ್ತು ಮಾಲೀಕ ಸಂದೀಪ್‌ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಉಪವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್‌ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next