ಒಮ್ಮೆ ಪಶ್ಚಿಮ ಬಂಗಾಲದ ನಂದಿಗ್ರಾಮಕ್ಕೆ ಹೋಗಿ ಬರೋಣ. ಈಗ ಇಡೀ ಭಾರತದ ಕಣ್ಣೆಲ್ಲ ಇರುವುದು ನಂದಿಗ್ರಾಮದ ಮೇಲೆಯೇ. ಚುನಾವಣೆಯ ಬಿಸಿ ಬೆಂಕಿಯಾಗಿ ಮಾರ್ಪಡುತ್ತಿರುವ ಹೊತ್ತಿದು. ತಂತ್ರ-ಪ್ರ ತಿತಂತ್ರ-ಕುತಂತ್ರಗಳೆಲ್ಲವೂ ವೇದಿಕೆ ಪಡೆಯುತ್ತಿರುವ ಹೊತ್ತೂ ಸಹ. ಎರಡು ದಿನಗಳ ಹಿಂದಷ್ಟೇ ಮಮತಾ ಬ್ಯಾನರ್ಜಿ ಚುನಾವಣ ಪ್ರಚಾರ ಮಾಡುತ್ತಿರುವಾಗ ಯಾರೋ ಅಪರಿಚಿತರು ಬಂದು ಹಲ್ಲೆ ನಡೆಸಿದರು ಎಂದು ದೂರಿದ್ದಾರೆ. ಕಾಲು ನೋವಿನ ಕಾರಣ ಸದ್ಯ ಬಹಿರಂಗ ಪ್ರಚಾರ ಸ್ಥಗಿತಗೊಳಿಸಿದ್ದಾರೆ. ಶುಕ್ರವಾರ ಮಮತಾ ಬ್ಯಾನರ್ಜಿಯ ಬಂಟ, ಆದರೆ ಈಗ ಬಿಜೆಪಿ ಅಭ್ಯರ್ಥಿ, ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ನಾಮಪತ್ರ ಸಲ್ಲಿಸಿದ್ದಾರೆ.
ನಂದಿಗ್ರಾಮ ವಿಧಾನಸಭೆ ಕ್ಷೇತ್ರಕ್ಕಿಂತ ಮೊದಲು ನಂದಿಗ್ರಾಮ. ಇದು ಇರುವುದು ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ. ತಮ್ಲಕ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಈ ತಮ್ಲಕ್ ಕ್ಷೇತ್ರ ಹಾಗೂ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ತೃಣಮೂಲ ಕಾಂಗ್ರೆಸ್ ತೆಕ್ಕೆಯಲ್ಲೇ ಇರುವಂಥದ್ದು ಎನ್ನುವುದಕ್ಕಿಂತ ಒಂದು ಅರ್ಥದಲ್ಲಿ ಈ ಅಧಿಕಾರಿಗಳ ಕುಟುಂಬದ ಲೆಕ್ಕದಲ್ಲೇ ಇರುವಂಥದ್ದು. ಗ್ರಾಮದ ಚಿತ್ರಣಕ್ಕಿಂತ ಮೊದಲು ನಂದಿಯ ಚಿತ್ರಣ.
ಎರಡು ಲೋಕಸಭಾ ಕ್ಷೇತ್ರ ಹಾಗೂ 16 ವಿಧಾನಸಭಾ ಕ್ಷೇತ್ರಗಳು. ಈ ಪೈಕಿ ತಮ್ಲಕ್ ಲೋಕಸಭಾ ಕ್ಷೇತ್ರ ಮತ್ತು ಕಾಂತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈಗ್ರಾ, ಕಾಂತಿ ದಕ್ಷಿಣ್ ಕೇತ್ರಗಳಿಂದ ಈ ಸುವೇಂದು ಅಧಿಕಾರಿಯ ಅಪ್ಪ ಸಿಸಿರ್ ಕುಮಾರ್ ಅಧಿಕಾರಿ ಶಾಸಕರಾಗಿದ್ದರು. ಕಾಂತಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಡಾ| ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದರು. ಮೊದಲು ಕಾಂಗ್ರೆಸ್. 2001ರಲ್ಲಿ ತೃಣಮೂಲ ಕಾಂಗ್ರೆಸ್ ಕಡೆ ನಡೆದು ಶಾಸಕರಾದರು. 2006 ರಲ್ಲಿ ಅಪ್ಪ ಮಗ ಸುವೇಂದುವಿಗೆ ಕ್ಷೇತ್ರ ಬಿಟ್ಟುಕೊಟ್ಟರು. ಸುವೇಂದು ಗೆದ್ದು ಶಾಸಕರಾದರು. 2009 ರ ಲೋಕಸಭೆ ಚುನಾವಣೆ. ಅಪ್ಪ ಕಾಂತಿ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಮಗ ವಿಧಾನಸಭೆಗೆ ರಾಜೀ ನಾಮೆ ಕೊಟ್ಟು ತಮ್ಲಕ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಇಷ್ಟಕ್ಕೇ ಪುರಾಣ ಮುಗಿಯಲಿಲ್ಲ.
ಸುವೇಂದು ರಾಜೀನಾಮೆಯಿಂದ ಖಾಲಿಯಾದ ಕಾಂತಿ ದಕ್ಷಿಣ್ ವಿಧಾನಸಭೆ ಕ್ಷೇತ್ರಕ್ಕೆ ಅವರ ತಮ್ಮ ದಿಬ್ಯೇಂದು ಅಧಿಕಾರಿ ಶಾಸಕರಾಗಿ ಆಯ್ಕೆಯಾದರು. ಅದೇ ತೃಣಮೂಲ ಕಾಂಗ್ರೆಸ್‌ನಿಂದ. 2014ರಲ್ಲಿ ಮತ್ತೆ ಸುವೇಂದು ಗೆದ್ದರು ತಮ್ಲಕ್ ಲೋಕಸಭಾ ಕ್ಷೇತ್ರ ದಿಂದ. 2016 ಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಸಾರಿಗೆ ಸಚಿವರೂ ಆದರು. ಈ 2016 ಕ್ಕೆ ತೆರವಾದ ತಮ್ಲಕ್ ಲೋಕಸಭಾ ಕ್ಷೇತ್ರಕ್ಕೆ ಮತ್ತೆ ದಿಬ್ಯೇಂದು ಅಧಿಕಾರಿ ಸ್ಪರ್ಧಿಸಿ ಸಂಸದರಾದರು. 2019ರಲ್ಲೂ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಮತ್ತೂಬ್ಬ ಸೋದರ ಸೌಮೇಂದು ಅಧಿಕಾರಿ ಕಾಂತೈ ಪುರಸಭೆಗೆ ಅಧ್ಯಕ್ಷರಾಗಿದ್ದಾರೆ. ಒಟ್ಟೂ ಎರಡು ಲೋಕಸಭಾ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳ ಮಧ್ಯೆ ಅಧಿಕಾರಿ ಕುಟುಂಬ ಗಿರಕಿ ಹೊಡೆಯುತ್ತಿದೆ.
ಕ್ಷೇತ್ರದ ರಾಜಕೀಯ ಪರಿಚಯದ ಪ್ರಕಾರ 2009ರ ಬಳಿಕ ಈ ಕ್ಷೇತ್ರ ತೃಣಮೂಲ ಕಾಂಗ್ರೆಸ್‌ನ ಪಾಲಾಗಿದೆ. ಅದಕ್ಕಿಂತ ಮೊದಲು ಸಿಪಿಐ ಹಾಗೂ ಕಾಂಗ್ರೆಸ್ ನಡುವೆ ಬದಲಾಗುತ್ತಿತ್ತು. 1978 ರಲ್ಲಿ ಮಾತ್ರ ಜನತಾ ಪಕ್ಷದ ತೆಕ್ಕೆಗೆ ಬಿದ್ದಿತ್ತು. 2007ರಲ್ಲಿ ನಡೆದ ನಂದಿಗ್ರಾಮದ ಭೂ ಸ್ವಾಧೀನ ವಿರೋಧಿ ಚಳವಳಿ ತೃಣಮೂಲ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಿತ್ತು.
ಅಂದಹಾಗೆ ಈ ಸುವೇಂದು ಅಧಿಕಾರಿ 1995ರಲ್ಲಿ ಕಾಂತೈ ಪುರಸಭೆಗೆ ಕಾಂಗ್ರೆಸ್‌ನಿಂದ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದರು. 2006ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ನಂದಿಗ್ರಾಮದಲ್ಲಿ ಎಡರಂಗ ಸರಕಾರ ಕೆಮಿಕಲ್ ಕಾರ್ಖಾನೆಗಳಿಗೆ ಅವಕಾಶ ಕಲ್ಪಿಸಲು ವಿಶೇಷ ಆರ್ಥಿಕ ಯೋ ಜನೆಯಡಿ 10 ಸಾವಿರ ಎಕ್ರೆ ಪ್ರದೇಶದ ಸ್ವಾಧೀ ನಕ್ಕೆ ಮುಂದಾದರು. ಆಗ ಸುವೇಂದು ಅಧಿಕಾರಿ ಭೂ ಸ್ವಾಧೀನ ವಿರೋಧಿ ಸಮಿತಿ ರಚಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಮಮತಾ ಬ್ಯಾನರ್ಜಿ ನಾಯಕತ್ವ ಪ್ರದರ್ಶನವಾದದ್ದು ಇಲ್ಲಿಯೇ. ಈ ಸರ ಕಾರಿ ಪ್ರಾಯೋಜಿತ ಹಿಂಸೆಗೆ 14 ಮಂದಿ ರೈತರು ಸತ್ತಿದ್ದರು.
ಹಾಗಾಗಿ ಪೂರ್ವ ಮೇದಿನಿಪುರ ಜಿಲ್ಲೆಯಿಂದ ಹಿಡಿದು ಪಶ್ಚಿಮ ಮೇದಿನಿಪುರ, ಪುರುಲಿಯಾ, ಬಂಕೂರಾ ಜಿಲ್ಲೆಗಳಲ್ಲೂ ಈ ಅಧಿಕಾರಿಯ ಮಾತು ಚಲಾವಣೆಯಲ್ಲಿದೆ. ಅದಕ್ಕೇ ಮಮತಾ ಅವರು ಭವಾನಿಪುರದಿಂದ ಓಡಿ ಇಲ್ಲಿಗೆ ಬಂದದ್ದು!
- ಅಶ್ವಘೋಷ