“ಜೀವನದಲ್ಲಿ ಯಶಸ್ಸು ಗಳಿಸಲು ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು’ ಎಂಬ ಮಾತೊಂದಿದೆ. ಸಾಧನೆಗೈದಿರುವವರ ಬದುಕನ್ನು ವಿಶ್ಲೇಷಿಸಿದಾಗ ಆ ಮಾತು ನಿಜವೆಂದು ತಿಳಿದುಬರುತ್ತದೆ. ನಿಜವಾದ ಗುರು ತನ್ನೆಲ್ಲಾ ಶಿಷ್ಯಂದಿರನ್ನು ಸಮಾನರಾಗಿ ಕಾಣುತ್ತಾನೆ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾನೆ. ಆ ಸಾಲಿಗೆ ಸೇರುವಂಥ ಗುರು ಇಪ್ ಮ್ಯಾನ್. 1940- 50ರ ದಶಕದಲ್ಲಿ ಅವರು ಚೀನಾದಲ್ಲಿ “ಲೀ ವಿಂಗ್ ಚುನ್ ಕುಂಗ್ ಫು’ ಎಂಬ ಆತ್ಮರಕ್ಷಣಾ ಕಲೆಯನ್ನು ಬೋಧಿಸುತ್ತಿದ್ದರು. ಅವರೆಂದೂ ಹಣಕ್ಕಾಗಿ ವಿದ್ಯೆ ಬೋಧಿಸಿದವರಲ್ಲ. ಅವರ ಬಗ್ಗೆ ಅನೇಕ ದಂತಕಥೆಗಳು ಚಾಲ್ತಿಯಲ್ಲಿದ್ದವು. ಅವರು ಶಿಷ್ಯಂದಿರನ್ನು ಪರೀಕ್ಷೆಗೊಳಪಡಿಸಿಯೇ ಆರಿಸುತ್ತಿದ್ದರು. ಆ ಸಮಯದಲ್ಲಿ ಅವರ ಬಳಿಗೆ 16ರ ಹರೆಯದ ಯುವಕ ಶಿಷ್ಯನಾಗಿ ಸೇರಿಕೊಂಡಿದ್ದ. ಬೀದಿ ಬದಿಯ ಹೋರಾಟಗಳಲ್ಲಿ ಭಾಗಿಯಾಗಿ ಪುಂಡನೆಂಬ ಕುಖ್ಯಾತಿಗೆ ಪಾತ್ರನಾಗಿದ್ದ ಅವನು ಪ್ರತಿ ಬಾರಿಯೂ ಎದುರಾಳಿಗಳಿಂದ ಏಟು ತಿನ್ನುತ್ತಿದ್ದ. ಹೀಗಾಗಿ ಇಪ್ ಮ್ಯಾನ್ ಬಳಿ ತರಬೇತಿ ಪಡೆದು ಎದುರಾಳಿಗಳನ್ನು ಸದೆಬಡಿಯುವುದು ಅವನ ಉದ್ದೇಶವಾಗಿತ್ತು. ಇಪ್ ಮ್ಯಾನ್ ಹೇಳಿಕೊಡುತ್ತಿದ್ದ ಚುನ್ ಕುಂಗ್ ಫುವಿನ ಮೂಲ ಉದ್ದೇಶ ಯಾವನೇ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳುವುದು, ಹೊಡೆದಾಟದಿಂದ ದೂರ ಉಳಿಯುವುದು. ಆದರೆ ಆ ಹುಡುಗ ಈ ಆತ್ಮರಕ್ಷಣಾ ಕಲೆಯನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳಬೇಕೆಂದಿದ್ದ. ಇದು ಗುರುವಿಗೆ ಸರಿ ತೋರಲಿಲ್ಲ. ಆದರೆ ಆ ಹುಡುಗನಲ್ಲಿದ್ದ ಏಕಾಗ್ರತೆ, ಆಸಕ್ತಿ ಕಂಡು ಗುರು ಇಪ್ ಮ್ಯಾನ್ ದಂಗಾಗಿದ್ದರು. ಏನಾದರಾಗಲಿ ಅವನಿಗೆ ತಾವು ಕಲಿತ ವಿದ್ಯೆಯನ್ನು ಕಲಿಸಲು ನಿರ್ಧರಿಸಿದರು. ಆ ಹುಡುಗನೇ ಜಗತ್ತಿನ ಅಸಂಖ್ಯ ಮಂದಿಗೆ ಮಾರ್ಷಲ್ ಆರ್ಟ್ಸ್ ಕಲಿಯಲು ಪ್ರೇರಣೆಯಾಗಿರುವ ಹಾಲಿವುಡ್ ನಟ “ಬ್ರೂಸ್ ಲೀ’. ಒಬ್ಬರು ಸಿನಿಮಾಗಳ ಮೂಲಕ ಸ್ಫೂರ್ತಿ ತುಂಬಿದರೆ ಮತ್ತೂಬ್ಬರ ಬದುಕೇ ನಮಗೆ ಸ್ಫೂರ್ತಿ.
ಹವನ