Advertisement

ಇತಿಹಾಸಕ್ಕೆ ವೈಜ್ಞಾನಿಕ ಅಧ್ಯಯನ ಅಗತ್ಯ

12:47 AM Oct 20, 2019 | Team Udayavani |

ಬೆಂಗಳೂರು: ಇತಿಹಾಸವನ್ನು ವಿಜ್ಞಾನದ ಜತೆ ಅಧ್ಯಯನ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿ ನೀಡಲು ಸಾಧ್ಯ. ಇಲ್ಲದಿದ್ದರೆ ಇತಿಹಾಸ ಊಹಾಪೋಹಗಳ ಕತೆಯಾಗುತ್ತದೆ ಎಂದು ಇತಿಹಾಸ ತಜ್ಞ ಸುರೇಶ್‌ ಮೂನ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿನ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸ ಎಂಬುದು ಒಂದು ವೈಜ್ಞಾನಿಕ ಸಂಶೋಧನೆ. ಇಂದು ನಾವು ಸಂಶೋಧನೆ ಮಾಡಿ ದಾಖಲಿಸುವ ವೈಜ್ಞಾನಿಕ ವರದಿ ಮುಂದಿನ ಪೀಳಿಗೆಗೆ ಇತಿಹಾಸವಾಗಲಿದೆ.

ಪ್ರತಿ ಇತಿಹಾಸವನ್ನು ತಪ್ಪದೇ ದಾಖಲೆ ಸಮೇತ ಸಂಶೋಧನೆ ಮಾಡಿ ದಾಖಲಿಸಬೇಕು. ಆಗ ಮಾತ್ರ ಇತಿಹಾಸಕ್ಕೆ ಸರಿಯಾದ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರು ನಗರ, ಕೆರೆ, ಸ್ಥಳಗಳ ಇತಿಹಾಸ ಹಾಗೂ ಗೋಪುರಗಳ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಆದರೆ, ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಎಲ್ಲಾ ಸಂಶೋಧನೆಗಳು ವೈಜ್ಞಾನಿಕವಾಗಿ ನಡೆದರೆ ಉತ್ತಮ.

ಬೆಂಗಳೂರಿನ ಗೋಪುರಗಳು ನಗರದ ಗಡಿ ಸೂಚಿಸುತ್ತವೆ. ಇದನ್ನು ದಾಟಿ ನಗರ ಅಭಿವೃದ್ದಿ ಹೊಂದುವಂತಿಲ್ಲ ಎಂಬ ಹಲವು ವದಂತಿಗಳಿವೆ. ಆದರೆ, ಬೆಂಗಳೂರಿನಲ್ಲಿರುವುದು ನಾಲ್ಕು ಗೋಪುರಗಳಲ್ಲ, ಬದಲಿಗೆ ಏಳು ಗೋಪುರಗಳಿವೆ. ಎಲ್ಲಾ ಗೋಪುರಗಳು ಎತ್ತರದ ಪ್ರದೇಶದಲ್ಲಿದ್ದು, ಸುತ್ತಮುತ್ತ ಉತ್ತಮ ರಸ್ತೆ ಮಾರ್ಗ, ಜಲ ಮೂಲ ಮತ್ತು ಭದ್ರತಾ ದೃಷ್ಟಿಯಿಂದ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ.

ಹಾಗಾಗಿ, ಈ ಗೋಪುರಗಳು ಬೆಂಗಳೂರು ಭದ್ರತೆ ದೃಷ್ಟಿಯಿಂದ ನಿರ್ಮಿಸಲಾಗಿತ್ತು ಎಂದು ಪ್ರತಿಪಾದಿಸಿದರು. ಬೆಂಗಳೂರು ಮತ್ತು ಲಂಡನ್‌ ನಗರಗಳ ಸಾಮ್ಯತೆ ಬಗ್ಗೆ ಈಗಾಗಲೇ ಹಲವು ವೇದಿಕೆಗಳಲ್ಲಿ ಮಾತನಾಡಲಾಗಿದ್ದು, ಲಂಡನ್‌ನ ಥೇಮ್ಸ್‌ ನದಿ ದಶಕಗಳ ಹಿಂದೆ ಕೊಳಚೆ ನೀರಿನಿಂದ ತುಂಬಿತ್ತು. ಇಂದು ಈ ನದಿ ಲಂಡನ್‌ ನಗರದ ಪ್ರಮುಖ ಆಕರ್ಷಣೆಯಾಗಿದೆ. ನಮ್ಮ ಬೆಂಗಳೂರಿನ ವೃಷಭಾವತಿ ನದಿಯನ್ನು ಲಂಡನ್‌ನ ಥೇಮ್ಸ್‌ ನದಿಯಂತೆ ಮಾರ್ಪಡಿಸುವುದು ಕಷ್ಟದ ಕೆಸಲವಲ್ಲ.

Advertisement

ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಗರದ ಪ್ರತಿಯೊಬ್ಬ ನಾಗರಿಕರು ಬೆಂಗಳೂರನ್ನು ‘ನಮ್ಮ ಊರು ನನ್ನದು’ ಎಂಬ ಕಾಳಜಿ ತೋರಿದರೆ ತಾನಾಗಿಯೇ ಬೆಂಗಳೂರು ಸ್ವತ್ಛವಾಗಲಿದೆ. ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಕಸ ಮಾಯವಾಗುತ್ತದೆ ಹಾಗೂ ವೃಷಭಾವತಿ ಮತ್ತೆ ಶುದ್ದ ನದಿಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಉಪಸ್ಥಿತರಿದ್ದರು.

“ಉದಯವಾಣಿ’ ಪತ್ರಿಕೆಗೆ ಧನ್ಯವಾದ: ನನಗೆ ಬೆಂಗಳೂರಿನ ಬಗ್ಗೆ ಅಧ್ಯಯನ ಮಾಡಲು ಹಲವು ಪ್ರಮುಖ ಕಾರಣಗಳಿವೆ. ಇವುಗಳ ಸಾಲಿನಲ್ಲಿ “ಉದಯವಾಣಿ’ ಪತ್ರಿಕೆ ನೀಡಿದ ಅವಕಾಶ ಕೂಡ ಬಹಳ ಮುಖ್ಯವೆನಿಸಿದೆ. ಬೆಂಗಳೂರಿನ ಬಗ್ಗೆ 1000 ಲೇಖನ ಬರೆಯಲು “ಉದಯವಾಣಿ’ ನನಗೆ ಅವಕಾಶ ನೀಡಿತ್ತು ಎಂದು ಇತಿಹಾಸ ತಜ್ಞ ಸುರೇಶ್‌ ಮೂನ ಸ್ಮರಿಸಿದರು. ಬೆಂಗಳೂರಿನ ಇತಿಹಾಸವನ್ನು ನಗರದ ಜನತೆಗೆ ತಿಳಿಸುವ ಉದ್ದೇಶದಿಂದ ವಾರದಲ್ಲಿ ಮೂರು ವಿಶೇಷ ಲೇಖನಗಳನ್ನು ಬರೆಯುತಿದ್ದೆ.

2001ರಿಂದ 2010ರ ತನಕ ಸತತ 10 ವರ್ಷಗಳ ಕಾಲ ಬೆಂಗಳೂರಿನ ಬಗ್ಗೆ ಬರೆದಿದ್ದು ನನಗೆ ಒಳ್ಳೆಯ ವೇದಿಕೆ ಹಾಗೂ ಅನುಭವ ನೀಡಿದೆ ಎಂದು ಹೇಳಿದರು. ರಾಜ್ಯಾದ್ಯಂತ ಸಂಚರಿಸುವಾಗ ಹಲವೆಡೆ “ಉದಯವಾಣಿ’ಯಲ್ಲಿ ಪ್ರಕಟವಾದ ನನ್ನ ಲೇಖನಗಳನ್ನು ಉಲ್ಲೇಖಿಸಿ ಓದುಗರು ನನ್ನ ಜತೆ ಮಾತನಾಡುತಿದ್ದರು. ಆ ಪ್ರತಿ ಕ್ಷಣಗಳನ್ನು ನಾನು ಸಂಭ್ರಮಿಸುತಿದ್ದೆ. ಈ ಕಾರಣಕ್ಕಾಗಿ ನಾನು “ಉದಯವಾಣಿ’ ಪತ್ರಿಕೆಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಸುರೇಶ್‌ ಮೂನ ಹೇಳಿದರು.

ದಾಖಲೆ ನಿರ್ಮಿಸಿದ ಸುರೇಶ್‌ ಮೂನ: ಯಾವುದೇ ನಗರದ ಬಗ್ಗೆ 10 ವರ್ಷಗಳ ಕಾಲ ನಿರಂತರವಾಗಿ 1000 ಲೇಖನಗಳನ್ನು ಬರೆದಿರುವುದು ಈವರೆಗೆ ಎಲ್ಲೂ ದಾಖಲಾಗಿಲ್ಲ. ಬೆಂಗಳೂರು ನಗರದ ಬಗ್ಗೆ 1000 ಲೇಖನಗಳನ್ನು ಬರೆಯುವ ಮೂಲಕ ಸುರೇಶ್‌ ಮೂನ ಈ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 2001ರಿಂದ “ಉದಯವಾಣಿ’ ಪತ್ರಿಕೆಯಲ್ಲಿ ಪ್ರತಿ ಸೋಮವಾರ “ಬೆಂಗಳೂರು ನಗರದ ನಿರ್ಮಾಪಕರು’, ಬುಧವಾರ “ಕತೆ ಹೇಳುವ ರಸ್ತೆಗಳು’, ಶನಿವಾರ “ನಮ್ಮ ಹೆಮ್ಮೆಯ ಸಂಸ್ಥೆಗಳು’ ಎಂಬ ಶೀರ್ಷಿಕೆ ಅಡಿ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next