ಹೊಸದಿಲ್ಲಿ : ಇದೇ ಸೆ.5ರ ಬುಧವಾರ ಸರ್ವ ಮಹಿಳಾ ಪೀಠವು ಕಲಾಪ ನಡೆಸುವ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಇತಿಹಾಸವು ಮರುಕಳಿಸಲಿದೆ. ಅಂದು ಜಸ್ಟಿಸ್ ಆರ್ ಭಾನುಮತಿ ಮತ್ತು ಜಸ್ಟಿಸ್ ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಸರ್ವ ಮಹಿಳಾ ನ್ಯಾಯ ಪೀಠವು ಕೋರ್ಟ್ ಕಲಾಪ ನಡೆಸಲಿದೆ.
2013ರಲ್ಲಿ ಪ್ರಥಮ ಬಾರಿಗೆ ಜಸ್ಟಿಸ್ ಜ್ಞಾನಸುಧಾ ಮಿಶ್ರಾ ಮತ್ತು ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ಸರ್ವ ಮಹಿಳಾ ಪೀಠವು ಕೋರ್ಟ್ ಕಲಾಪ ನಡೆಸಿ ಸುಪ್ರೀಂ ಕೋರ್ಟ್‌ನಲ್ಲಿ ಇತಿಹಾಸ ನಿರ್ಮಾಣಗೊಂಡಿತ್ತು.
ಕಳೆದ ಆಗಸ್ಟ್ ನಲ್ಲಿ ಜಸ್ಟಿಸ್ ಬ್ಯಾನರ್ಜಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಆ ಮೂಲಕ ಸುಪ್ರೀಂ ಕೋರ್ಟ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಪಡೆದಿದೆ. ಜಸ್ಟಿಸ್ ಬ್ಯಾನರ್ಜಿ ಅವರು ಸ್ವಾತಂತ್ರಾéನಂತರದ ದೇಶದ ಸರ್ವೋಚ್ಚ ನ್ಯಾಯಾಲಯದ ಎಂಟನೇ ನ್ಯಾಯಮೂರ್ತಿಯಾಗಿದ್ದಾರೆ.
ಮೂವರು ಮಹಿಳಾ ನ್ಯಾಯಮೂರ್ತಿಗಳ ಪೈಕಿ ಜಸ್ಟಿಸ್ ಭಾನುಮತಿ ಅವರು ಅತ್ಯಂತ ಹಿರಿಯರಾಗಿದ್ದು ಅವರಿಗೆ 2014ರ ಆ.13ರಂದು ಸುಪ್ರೀಂ ಕೋರ್ಟಿಗೆ ಭಡ್ತಿ ನೀಡಲಾಗಿತ್ತು.
ಜಸ್ಟಿಸ್ ಫಾತಿಮಾ ಬೀವಿ ಅವರು ಸರ್ವೋಚ್ಚ ನ್ಯಾಯಾಲಯದ ಮೊತ್ತ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ. ಅವರ ಬಳಿಕದಲ್ಲಿ ಜಸ್ಟಿಸ್‌ಗಳಾದ ಸುಜಾತಾ ಮನೋಹರ್, ರೂಮಾ ಪಾಲ್, ಜ್ಞಾನ ಸುಧಾ ಮಿಶ್ರಾ,ರಂಜನಾ ಪ್ರಕಾಶ್ ದೇಸಾಯಿ, ಆರ್ ಭಾನುಮತಿ, ಇಂದೂ ಮಲ್ಹೋತ್ರ ಮತ್ತು ಈಗ ಹೊಸದಾಗಿ ಇಂದಿರಾ ಬ್ಯಾನರ್ಜಿ ನ್ಯಾಯಮೂರ್ತಿಗಳಾಗಿದ್ದಾರೆ.