Advertisement

ಪತ್ನಿ ಬಲಿದಾನದ ಇತಿಹಾಸ: ಅಣಜಿಯ ಶರಣೆ ಹೊನ್ನಮ್ಮ ದೊಡ್ಡ ಕೆರೆ ವೀಕ್ಷಣೆಗೆ ಪ್ರವಾಸಿಗರ ದಂಡು

04:05 PM Sep 12, 2022 | Team Udayavani |

ಮಾಯಕೊಂಡ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ಹಾಗೂ ಅಣಜಿಯ ಶಿವ ಶರಣೆ ಹೊನ್ನಮ್ಮ ದೊಡ್ಡ ಕೆರೆ ಎಂದು ಖ್ಯಾತಿ ಪಡೆದಿರುವ ಅಣಜಿ ಕೆರೆ 40 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ದಾವಣಗೆರೆ, ಹರಿಹರ, ಜಗಳೂರು ತಾಲೂಕಿನ ಗ್ರಾಮಸ್ಥರು ಮೈದುಂಬಿ ಹರಿಯುತ್ತಿರುವ ಕೆರೆಯ ವೀಕ್ಷಣೆಗೆ ಧಾವಿಸಿ ಬರುತ್ತಿದ್ದಾರೆ.

Advertisement

ದಾವಣಗೆರೆ ತಾಲೂಕಿನ 56 ಕೆರೆಗಳು ತುಂಬಿರುವುದರಿಂದ ಕೋಡಿ ಬಿದ್ದಿರುವ ದೊಡ್ಡ ಕೆರೆಗಳು ಈಗ ಪ್ರವಾಸಿ ತಾಣವಾಗಿವೆ. ಪ್ರಸ್ತುತ ಮುಂಗಾರಿನ ಸತತ ಮಳೆಯ ಪರಿಣಾಮವಾಗಿ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಈಗ ಅಣಜಿ ಕೆರೆ ಕೋಡಿ ಬಿದ್ದಿದೆ. ಜಗಳೂರು ರಸ್ತೆಗೆ ಹೊಂದಿಕೊಂಡಿರುವ ಕೋಡಿಯಲ್ಲಿ ನೀರಿನ ಹರಿವು ನೋಡಲು ದಾವಣಗೆರೆ, ಹರಿಹರ, ಆನಗೋಡು, ಮಾಯಕೊಂಡ ಹೋಬಳಿಗಳ ಸುತ್ತಮುತ್ತಲಿನ ಜನರು ಕಾರು, ದ್ವಿಚಕ್ರ ವಾಹನ, ಬಸ್‌ಗಳಲ್ಲಿ ಆಗಮಿಸುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಾ ಕೆರೆಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ.

ಅಣಜಿ ಕೆರೆಯ ಜೊತೆಗೆ ಕೊಡಗನೂರು, ರಾಂಪುರ, ಹುಚ್ಚವ್ವನಹಳ್ಳಿ, ಮಾಯಕೊಂಡ, ಹದಡಿ, ಆನಗೋಡು, ಕಂದಗಲ್ಲು, ಕಬ್ಬೂರು, ಮಳಲ್ಕೆರೆ, ಲೋಕಿಕೆರೆ, ಕೋಲ್ಕುಂಟೆ ಕೆರೆಗಳು ಸಹ ಕೋಡಿ ಬಿದ್ದಿವೆ. ಅಕ್ಕ ಪಕ್ಕದ ಗ್ರಾಮಗಳ ಜನರು ಕೋಡಿ ಬಿದ್ದಿರುವ ಕೆರೆಗಳನ್ನು ವೀಕ್ಷಿಸುತ್ತಿದ್ದಾರೆ. ಅಣಜಿ ಕೆರೆ ಭರ್ತಿಯಾಗಿರುವುದರಿಂದ ಬೇರೆ ಬೇರೆ ತಾಲೂಕುಗಳಿಂದ ಕಾರು, ವ್ಯಾನ್‌, ದ್ವಿಚಕ್ರ ವಾಹನಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ. ಕೆರೆಯ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅಣಜಿ ಗ್ರಾಮದ ಮುಖಂಡ ಭೀಮಪ್ಪ ಒತ್ತಾಯಿಸಿದ್ದಾರೆ.

ಕೆರೆಯ ಇತಿಹಾಸ
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ಕೆರೆಯನ್ನು ಅಣಜಿ ಗ್ರಾಮದ ಮಲ್ಲನಗೌಡರು ಸುಮಾರು 3-4 ವರ್ಷಗಳ ಕಾಲ 7 ಸಾವಿರ ಕಾರ್ಮಿಕರೊಂದಿಗೆ ನಿರ್ಮಿಸಿದರು. ಕೆರೆ ಕಟ್ಟಿ ಮೂರ್‍ನಾಲ್ಕು ವರ್ಷಗಳಾದರೂ ನೀರು ಬಾರದೆ ಇದ್ದಾಗ ಮಗ ವೀರನಗೌಡನ ಪತ್ನಿ ಹೊನ್ನಮ್ಮಳನ್ನು ದಿಗಂಬರ ಮುನಿಗಳ ಮಾತಿನಂತೆ ಕೆರೆಗೆ ಬಲಿ ಕೊಡಲಾಯಿತು. ನಂತರ ಮಳೆಯಾಗಿ ಕೆರೆಗೆ ನೀರು ಬಂದಿತು. ಕೆರೆಯ ಪಕ್ಕದಲ್ಲಿಯೇ ಶಿವಶರಣೆ ಹೊನ್ನಮ್ಮನ ದೇವಸ್ಥಾನವಿದೆ.

*ಶಶಿಧರ ಶೇಷಗಿರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next