Advertisement

ಹೈದರಾಲಿ, ಟಿಪ್ಪುವಿನಿಂದ ಮೈಸೂರು ಇತಿಹಾಸ

09:55 AM Nov 08, 2019 | mahesh |

ಉಡುಪಿ: ಟಿಪ್ಪು ಜಯಂತಿ ಆಚರಣೆಯ ವಾಸ್ತವಾಂಶ ತಿರುಚಿ ಸುಳ್ಳು ಹೇಳುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇತಿಹಾಸ ತಿರುಚುವವರಿಂದ ಇತಿಹಾಸ ನಿರ್ಮಾಣ ಅಸಾಧ್ಯ. ಹೈದರಾಲಿ, ಟಿಪ್ಪುಸುಲ್ತಾನ್‌ ಇಲ್ಲದಿ  ದ್ದರೆ ಮೈಸೂರು ಇತಿ ಹಾಸವೇ ಇರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಗಾಂಧಿ 150ನೇ ವರ್ಷಾಚರಣೆಯ ಸಮಾರೋಪದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ಮತ್ತು ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಟಿಪ್ಪು ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಕೆಂಪೇಗೌಡ ಜಯಂತಿ, ನಾರಾಯಣ ಗುರು ಜಯಂತಿಗಳನ್ನು ಆರಂಭಿಸಿದವನೇ ನಾನು. ಆದರೆ ಇಂದು ಟಿಪ್ಪುವಿನ ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆಯಬೇಕು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪು ಪೇಟ, ಖಡ್ಗ ಧರಿಸಿ ನಾನೇ ಟಿಪ್ಪು ಅಂದಿದ್ದರು. ಟಿಪ್ಪು ದೇಶಪ್ರೇಮಿ, ಮಹಾಶೂರ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇಂದು ಅವರೇ ಟಿಪ್ಪು ಮತಾಂಧ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ಮೋದಿ ಮಹಾಸುಳ್ಳುಗಾರ
ದೇಶದ ಇತಿಹಾಸದಲ್ಲಿಯೇ ಮೋದಿ ಯಂತಹ ಸುಳ್ಳುಗಾರ ಪ್ರಧಾನಿ ಇರಲಿಲ್ಲ. ಚುನಾವಣೆ ಸಂದರ್ಭ ಜನಸಾಮಾನ್ಯರಿಗೆ ಆಮಿಷವೊಡ್ಡಿದ್ದಾರೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಧಿಕಾರಾವಧಿ ಯಲ್ಲಿ ಶೇ. 9ರ ಆಸುಪಾಸಿನಲ್ಲಿದ್ದ ಜಿಡಿಪಿ ಇಂದು ಶೇ. 3.5ಕ್ಕೆ ಇಳಿದಿದೆ. ನಿರುದ್ಯೋಗ ಹೆಚ್ಚುತ್ತಿದೆ. ಇದುವೇ ಮೋದಿಯವರು 5 ವರ್ಷದ ಕೊಡುಗೆ ಎಂದರು.

ಕಾಂಗ್ರೆಸ್‌ ಸರಕಾರ 70 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಐದೇ ವರ್ಷಗಳಲ್ಲಿ ಮಾಡಿದೆ ಎಂದು ಮೋದಿಯವರು ಹೇಳುತ್ತಿದ್ದಾರೆ. ಆದರೆ ಸಾಧನೆ ಏನೆಂದು ಹೇಳುತ್ತಿಲ್ಲ. ಪ್ರತಿಯೊಬ್ಬರ ಅಕೌಂಟ್‌ಗೆ 15 ಲ.ರೂ. ಹಾಕುವ ಬಗ್ಗೆ ನೀಡಿದ ಭರವಸೆಗಳೇ ಅವರ ಮಹಾತ್ಸಾಧನೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Advertisement

ಮಹಾತ್ಮಾ ಗಾಂಧಿಯೇ ರಾಷ್ಟ್ರಪಿತ
ಪ್ರಧಾನಿ ಅಮೆರಿಕ ಭೇಟಿಯ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೋದಿಯವರನ್ನು ರಾಷ್ಟ್ರಪಿತ ಎಂದು ಬಣ್ಣಿಸಿದ್ದರು. ಮೋದಿ ಅದನ್ನು ಸ್ವೀಕರಿಸದೆ ಪ್ರತಿಭಟಿಸಬೇಕಿತ್ತು. ಯಾವತ್ತಿಗೂ ಮಹಾತ್ಮಾ ಗಾಂಧಿಯೇ ರಾಷ್ಟ್ರಪಿತ. ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುನಾಥನ್‌, ಬಿ.ಎಂ. ಸಂದೀಪ್‌, ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಪ್ರಮುಖರಾದ ಗೋಪಾಲ ಪೂಜಾರಿ, ಯು.ಆರ್‌. ಸಭಾಪತಿ, ರಂಗಸ್ವಾಮಿ, ಐವನ್‌ ಡಿ’ಸೋಜಾ, ನಾರಾಯಣ ಸ್ವಾಮಿ, ಎಂ.ಎ. ಗಫ‌ೂರ್‌ ಸಹಿತ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಸ್ವಾಗತಿಸಿದರು. ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರೋಶ್ನಿ ಓಲಿವೆರಾ ಪ್ರಸ್ತಾವನೆಗೈದರು. ಡಾ| ಸುನೀತಾ ಶೆಟ್ಟಿ, ದಿನೇಶ್‌ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರಾ?
ವಿವಿಧ ಸ್ತರಗಳಲ್ಲಿರುವ ಮೀಸಲಾತಿ, ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಇತಿಹಾಸವನ್ನು ಎಲ್ಲ ಕಾರ್ಯಕರ್ತರು, ನಾಯಕರು ತಿಳಿದುಕೊಳ್ಳಬೇಕು. ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಅಸಾಧ್ಯ. ಜನರಿಗೆ ಸಮಾಜದ ನಿಜಾಂಶಗಳನ್ನು ತಿಳಿಸುವ ಸಲುವಾಗಿ ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಸದ್ಭಾವನಾ ಯಾತ್ರೆ ಕೈಗೊಳ್ಳಲಾಗುವುದು. ಕಾಂಗ್ರೆಸ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಂತೆ ಬಿಜೆಪಿಯಲ್ಲಿ ಯಾರಾದರೂ ಇದ್ದಾರೆಯೇ ಎಂದು ಕಾರ್ಯಕರ್ತರಲ್ಲಿ ಪ್ರಶ್ನಿಸಿದರು. ಬಿಜೆಪಿ ಸಂವಿಧಾನ ಹಾಗೂ ಗಾಂಧಿ ತಣ್ತೀಗಳಿಗೆ ವಿರುದ್ಧವಾಗಿದೆ. ಬಿಜೆಪಿ ಬಗ್ಗೆ ಇಷ್ಟೆಲ್ಲ ವಾಸ್ತವಾಂಶಗಳಿದ್ದರೂ ನನ್ನನ್ನೇ ಸುಳ್ಳುಗಾರ ಅನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ನಡೆದರೆ ಬರಲು ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ವಿರುದ್ಧ ನಿರಂತರ ಹೋರಾಟ: ದಿನೇಶ್‌
ಬಿಜೆಪಿ -ಜೆಡಿಎಸ್‌ ಉಪಚುನಾವಣೆ ಒಪ್ಪಂದ ವಿಚಾರದಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಜೆಡಿಎಸ್‌ ಗೊಂದಲ ಸೃಷ್ಟಿಸುತ್ತಿದ್ದು, ಕುಮಾರ ಸ್ವಾಮಿ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿವೆ. ಹೀಗಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಿರಂತರ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಒಮ್ಮೆ ಸ್ನೇಹ, ಒಮ್ಮೆ ದ್ವೇಷ ಬೆಳೆಸುವ ಪಕ್ಷ. ಅದಕ್ಕೆ ಸಿದ್ಧಾಂತವೂ ಇಲ್ಲ, ಜಾತ್ಯತೀತ ನಿಲುವೂ ಇಲ್ಲ ಎಂದರು. ಆಡಿಯೋ ಪ್ರಕರಣದಿಂದ ಅಪರೇಶನ್‌ ಕಮಲದಲ್ಲಿ ಯಡಿಯೂರಪ್ಪ, ಅಮಿತ್‌ ಶಾ ಪಾತ್ರ ಜಗಜ್ಜಾಹೀರಾಗಿದೆ. ಸಂವಿಧಾನ ಬಾಹಿರ ಕೆಲಸದಲ್ಲಿ ಶಾ ಶಾಮೀಲಾಗಿದ್ದಾರೆ. ಎಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಈಶ್ವರಪ್ಪ ಅವರಿಗೆ ಸ್ವಾಭಿಮಾನ ಇಲ್ಲ. ಉಪಮುಖ್ಯಮಂತ್ರಿಯಾಗಿದ್ದವರು ಈಗ ಮಂತ್ರಿಯಾಗಿದ್ದಾರೆ. ಅಹಿಂದ ಪರ ಒಂದೇ ಒಂದು ಹೋರಾಟ ಮಾಡದ ಈಶ್ವರಪ್ಪರಿಗೆ ಗಂಭೀರತೆಯಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next