Advertisement

ಭಗವಾನ್‌ ಶ್ರೀ ಬಾಹುಬಲಿಯ ಮೂರ್ತಿಯ ಕಲ್ಲಿಗೂ ಸಾಮ್ಯ!

05:04 AM Jan 31, 2019 | |

ಬೆಳ್ತಂಗಡಿ: ಬೃಹತ್‌ ಮೂರ್ತಿ ನಿರ್ಮಿಸುವ ಸಂದರ್ಭದಲ್ಲಿ ಕಲ್ಲಿನ ಆಯ್ಕೆ  ಸೂಕ್ಷ್ಮತೆಯಿಂದ ನಡೆಯಬೇಕಾಗುತ್ತದೆ. ಸಾಮಾನ್ಯ ಮೂರ್ತಿಗಳಾದರೆ ಒಳಾಂಗಣದಲ್ಲಿರುವುದರಿಂದ ಹೆಚ್ಚು ಸಮಸ್ಯೆ ಇಲ್ಲ. ಆದರೆ ಬಾಹುಬಲಿಯಂತಹ ಬೃಹತ್‌ ಮೂರ್ತಿಗಳು ಸುದೀರ್ಘ‌ ಕಾಲ ಮಳೆ-ಬಿಸಿಲು- ಚಳಿಯನ್ನು ಎದುರಿಸಿ ನಿಲ್ಲಬೇಕಿರುತ್ತದೆ. ಹೀಗಾಗಿ ಅವನ್ನೆಲ್ಲ ತಾಳಿಕೊಳ್ಳಬಲ್ಲ ಕಲ್ಲೇ ಆಗಬೇಕು.

Advertisement

ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮೂರ್ತಿಗೆ ಉಪಯೋಗಿಸಿದ ಕಲ್ಲು ಹಾಗೂ ಕಾರ್ಕಳದ ಭಗವಾನ್‌ 
ಶ್ರೀ ಬಾಹುಬಲಿ ಮೂರ್ತಿ ರೂಪುಗೊಂಡ ಕಲ್ಲಿಗೂ ಸಾಮ್ಯತೆ ಇದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ಮೂರ್ತಿಯನ್ನು ಕೆತ್ತಿದ ರೆಂಜಾಳ ಗೋಪಾಲ ಶೆಣೈ ಕಾರ್ಕಳದವರು; ಅವರು ಕಾರ್ಕಳದ ವಿಗ್ರಹದಿಂದ ಪ್ರೇರಿತರಾಗಿ ಅದೇ ರೀತಿಯ ಕಲ್ಲಿನ ಆಯ್ಕೆ ನಡೆಸಿರಬಹುದು ಎಂಬ ಅಭಿಪ್ರಾಯವೂ ಇದೆ.

ಈ ಎರಡು ಬಾಹುಬಲಿ ಮೂರ್ತಿಗಳ ಸಾಮ್ಯತೆಯ ಕುರಿತು ಇತಿಹಾಸ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಇತಿಹಾಸತಜ್ಞ ವೈ. ಉಮಾನಾಥ ಶೆಣೈ ಅವರು “ಶ್ರೀ ಬಾಹುಬಲಿ: ಶಿಲ್ಪ, ಶಿಲ್ಪಿ’ ಎಂಬ ಲೇಖನದಲ್ಲೂ ಇದನ್ನು ವಿವರಿಸಿದ್ದಾರೆ. ಆದರೆ ಶ್ರವಣಬೊಳಗೋಳ ಹಾಗೂ ವೇಣೂರಿನ ಬಾಹುಬಲಿ ಮೂರ್ತಿಗಳು ಇದಕ್ಕಿಂತ ಭಿನ್ನ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಧರ್ಮಸ್ಥಳದ ಬಾಹುಬಲಿಯನ್ನು ಕೆತ್ತಬೇಕು ಎಂದು ಹೆಗ್ಗಡೆಯವರಿಂದ ಅನುಜ್ಞೆಯಾದ ಬಳಿಕ ಗೋಪಾಲ ಶೆಣೈ ಅವರು ಆಗಾಗ ಕಾರ್ಕಳದ ಬೆಟ್ಟಕ್ಕೆ ತೆರಳಿ ಅಲ್ಲಿನ ಗೋಮಟೇಶ್ವರ ಮೂರ್ತಿಯನ್ನು ಹತ್ತಿರದಿಂದ ವೀಕ್ಷಿಸುತ್ತಿದ್ದರಂತೆ. ತದೇಕ ಚಿತ್ತದ ವೀಕ್ಷಣೆಯ ಮೂಲಕ ಉನ್ನತ ಮೂರ್ತಿಯನ್ನು ತನ್ನ ಅಂತರಂಗದಲ್ಲಿ ಸ್ಥಾಪಿಸಿಕೊಳ್ಳುತ್ತಿದ್ದರಂತೆ. ಇದೇ ಅವರಿಗೆ ಸುಂದರ ಮೂರ್ತಿಯ ರಚನೆಗೆ ಪ್ರೇರಣೆ ಹಾಗೂ ಅದೇ ರೀತಿಯ ಕಲ್ಲಿನ ಆಯ್ಕೆಗೂ ಪ್ರೇರಣೆ ಒದಗಿಸಿರಬಹುದು ಎಂಬ ಅಭಿಪ್ರಾಯವಿದೆ.

ನಾಲ್ಕೈದು ಲಕ್ಷ ಸಹಿಗಳು!
ಬಾಹುಬಲಿ ಮೂರ್ತಿ ಕೆತ್ತಿಕೊಡಬೇಕು ಎಂದು ಧರ್ಮಸ್ಥಳದಿಂದ ಆದೇಶ ಸಿಕ್ಕಿದಾಗ ರೆಂಜಾಳ ಗೋಪಾಲ ಶೆಣೈ ಅವರು ಆರಂಭದಲ್ಲಿ ತುಸು ಹಿಂಜರಿದಿದ್ದರಂತೆ. ತಮ್ಮ ಗುರುಗಳಾದ ಕಾಶೀಮಠದ ಶ್ರೀ ಸುಧೀಂದ್ರತೀರ್ಥ ಸ್ವಾಮಿಗಳನ್ನು ಕಂಡು ತಮ್ಮ ಅಶಕ್ತತೆಯನ್ನು ತೋಡಿ ಕೊಂಡಿದ್ದರಂತೆ. ಆಗ ಸ್ವಾಮಿಗಳು, ನಿಮ್ಮದು ಶಿಲ್ಪಗಳ ಮನೆತನ, ನಿಮ್ಮ ತಂದೆ ಜನಾರ್ದನ ಶೆಣೈ ಅವರು ಗುರುಪ್ರಸಾದಿತರು. ಗುರುಗಳ ಅನುಗ್ರಹದಿಂದ ಕೊಚ್ಚಿಯ ಶ್ರೀ ವೆಂಕಟರಮಣ ದೇವಸ್ಥಾನದ ದ್ವಾರಪಾಲಕರ ಶಿಲಾಮೂರ್ತಿಗಳನ್ನು ಪವಾಡದ ರೀತಿಯಲ್ಲಿ ಮಾಡಿದ್ದರು. ನಿಮ್ಮಲ್ಲೂ ಆ ಪ್ರತಿಭೆ ಇದೆ. ಜತೆಗೆ ಅದು ಪುಣ್ಯಕ್ಷೇತ್ರ ಧರ್ಮಸ್ಥಳದ ಕಾರ್ಯವಾದ ಕಾರಣ ಒಪ್ಪಿಕೊಳ್ಳಲೇ ಬೇಕು ಎಂದು ಅನುಗ್ರಹಿಸಿದ್ದರಂತೆ. ಜತೆಗೆ ನೀವು ವಿಗ್ರಹ ಕೆತ್ತುವ ಪುಣ್ಯಕಾರ್ಯವನ್ನು ವೀಕ್ಷಿಸಲು ಬಂದವರ ಸಹಿ ಸಂಗ್ರಹಿಸಿರಿ ಎಂದು ಮೊದಲು ತಾವೇ ಶುಭಾಶಯದೊಂದಿಗೆ ಸಹಿ ಹಾಕಿದ್ದರಂತೆ. ಬಳಿಕ ಶೆಣೈ ಅವರು ಅದನ್ನು ಮಂಗಲಪಾದೆಯಲ್ಲಿ ಇರಿಸಿದ್ದು, ಕೆತ್ತನೆ ಪೂರ್ಣಗೊಳ್ಳುವ ಹೊತ್ತಿಗೆ ಸಹಿ ನಾಲ್ಕೈದು ಲಕ್ಷ ಸಂಖ್ಯೆ ದಾಟಿದ್ದವು ಎಂದು ಲೇಖನವೊಂದರಲ್ಲಿ ಉಲ್ಲೇಖವಾಗಿದೆ.

Advertisement

ತರುಣ ಸಾಗರ್‌ ಜೀ ಭಾಗಿ


ಧರ್ಮಸ್ಥಳದ ಮೂರನೇ ಮಹಾಮಸ್ತಕಾಭಿಷೇಕ 2007ರಲ್ಲಿ ನಡೆದ ಸಂದರ್ಭದಲ್ಲಿ ಕ್ರಾಂತಿಕಾರಿ ರಾಷ್ಟ್ರಸಂತ ತರುಣ ಸಾಗರ ಮುನಿ ಮಹಾರಾಜರು ಭಾಗವಹಿಸಿದ್ದರು. ಜೈನ ಧರ್ಮದ ಕುರಿತು ಆಳವಾದ ಅಧ್ಯಯನ ಮಾಡಿ ಅವರು ಉತ್ತಮ ಸಮನ್ವಯ ದೃಷ್ಟಿಯಿಂದ ಮಂಗಲ ಪ್ರವಚನ ನೀಡುತ್ತಿದ್ದರು. ಪೂಜ್ಯರಿಂದ ಸರ್ವಧರ್ಮೀಯರೂ ಪ್ರಭಾವಿತರಾಗಿದ್ದು, ವಾಸ್ತವಿಕವಾಗಿ ತಮ್ಮ ಜೀವನದಲ್ಲಿ ಧರ್ಮವನ್ನು ಅನುಷ್ಠಾನಗೊಳಿಸುವ ಕುರಿತು ಅವರು ಮಾರ್ಗದರ್ಶನ ನೀಡುತ್ತಿದ್ದರು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದರು. ದುರದೃಷ್ಟವಶಾತ್‌ ತರುಣ ಸಾಗರ ಮುನಿ ಮಹಾರಾಜರು 2018ರ ಸೆ. 1ರಂದು ಸಮಾಧಿ ಮರಣ ಹೊಂದಿದ್ದರು

ಸೀಣೆ ಜಾತಿಯ ಗಡಸು ಕಲ್ಲು
ಕಾರ್ಕಳದ ಶ್ರೀ ಗೋಮಟೇಶ್ವರ ಮೂರ್ತಿಯಂತೆ ಧರ್ಮಸ್ಥಳದ ಮೂರ್ತಿಯೂ ಬಯೋಟೈಟ್‌ ಹಾಗೂ ಕ್ವಾಟ್ಜ್ì ಖನಿಜಗಳ ಪಟ್ಟಿ ಮಿಶ್ರವಾಗಿರುವ ಸೀಣೆ ಜಾತಿಯ ಗಡಸು ಕಗ್ಗಲ್ಲಿನಿಂದ ಮಾಡಲ್ಪಟ್ಟಿದೆ. ಅಲ್ಲದೆ ಸ್ಥಳೀಯ ಕಲ್ಲದು. ಹೀಗಾಗಿ ಮಳೆ-ಬಿಸಿಲು ದೀರ್ಘ‌ ಕಾಲ ಎದುರಿಸಿ ನಿಲ್ಲಬಲ್ಲ ಅಂತಸ್ಸತ್ವ ಹೊಂದಿದೆ.

ಮಂಗಲಪಾದೆಯ ಕಲ್ಲು ರೆಂಜಾಳದ ಶಿಲ್ಪಿ
ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಕಲ್ಪ ವ್ಯಕ್ತವಾದಾಗ ಶಿಲ್ಪಿ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಬಂದುದು ರೆಂಜಾಳ ಗೋಪಾಲ ಶೆಣೈ ಅವರ ಹೆಸರು. 70ರ ಮಾಗಿದ ವಯಸ್ಸಿನಲ್ಲಿಯೂ ಅತ್ಯುತ್ಸಾಹದೊಂದಿಗೆ ಅವರು ರೂಪಿಸಿದ ಮೂರ್ತಿಶಿಲ್ಪವು ಧರ್ಮಸ್ಥಳಕ್ಕೆ ಆಧ್ಯಾತ್ಮಿಕ ಪ್ರಭೆಯನ್ನು ತಂದುಕೊಟ್ಟಿತು. 1967ರಿಂದ 1973ರ ವರೆಗಿನ 6 ವರ್ಷಗಳ ಅವಧಿಯಲ್ಲಿ ಮೂರ್ತಿ ರೂಪುಗೊಂಡಿತು. ವಿರಾಟ್‌ ವಿರಾಗಿಯ ಮೂರ್ತಿ ನಿರ್ಮಾಣಕ್ಕೆ ಅನಾದಿ ಕಾಲದ ವರೆಗೂ ಮಳೆ-ಗಾಳಿ, ಬಿಸಿಲುಗಳನ್ನು ತಡೆದು ದೃಢವಾಗಿ ನಿಲ್ಲುವ ಶಿಲೆ ಬೇಕಾಗಿತ್ತು. ಕಾರ್ಕಳದ ಸಮೀಪ ಮಂಗಲಪಾದೆಯಲ್ಲಿ 100 ಅಡಿ ಎತ್ತರ ಹಾಗೂ 58 ಅಡಿಗಳ ಬೃಹತ್‌ ಶಿಲೆ ಶೆಣೈಯವರ ಕಣ್ಣಿಗೆ ಬಿತ್ತು. ಅದೇ ಅಂತಿಮವಾಗಿ ಮೂರ್ತಿಯ ಕೆತ್ತನೆ ಶುಭ ಮುಹೂರ್ತದಲ್ಲಿ ಆರಂಭವಾಯಿತು.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next