Advertisement

ಬಾರ್ಡರ್ – ಗಾವಸ್ಕರ್ ಟ್ರೋಫಿ ಹಿಂದಿದೆ ರೋಚಕ ಇತಿಹಾಸ

04:42 PM Feb 02, 2023 | ಕೀರ್ತನ್ ಶೆಟ್ಟಿ ಬೋಳ |

ಸತತ ಟಿ20, ಏಕದಿನ ಪಂದ್ಯಗಳ ಬಳಿಕ ಮತ್ತೆ ರಿಯಲ್ ಕ್ರಿಕೆಟ್ ಆರಂಭವಾಗುತ್ತಿದೆ.  ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗಾಗಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಬಂದಿದೆ. ಮತ್ತೆ ಐದು ದಿನಗಳ ಪಂದ್ಯ, ವೇಗಿಗಳ ಘಾತಕ ಎಸೆತಗಳು, ಸ್ಪಿನ್ನರ್ ಗಳ ಕೈಚಳಕ, ಬ್ಯಾಟರ್ ಗಳ ಎದೆಗಾರಿಕೆ ನೋಡುವ ಸಮಯ ಬಂದಿದೆ. ಹೌದು, ಬಾರ್ಡರ್ – ಗಾವಸ್ಕರ್ ಟ್ರೋಫಿ ಮತ್ತೆ ಬಂದಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ರೋಮಾಂಚನಕಾರಿ ಟೆಸ್ಟ್ ಸರಣಿಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಕೂಡಾ ಸ್ಥಾನ ಪಡೆಯುತ್ತದೆ. ಆಸ್ಟ್ರೇಲಿಯಾ ಕೂಡಾ ಆ್ಯಶಸ್ ನಷ್ಟೇ ಈ ಸರಣಿಗೂ ಪ್ರಾಮುಖ್ಯತೆ ನೀಡುತ್ತಿದೆ. ಹಾಗಾದರೆ ಬಾರ್ಡರ್ ಗಾವಸ್ಕರ್ ಟ್ರೋಫಿ ಆರಂಭವಾಗಿದ್ದು ಹೇಗೆ? ಯಾವಾಗ? ಎಂಬೆಲ್ಲಾ ಮಾಹಿತಿ ತಿಳಿದು ಕೊಳ್ಳೋಣ.

1947ರಿಂದ 1996ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸುಮಾರು 50 ಬಾರಿ ಮುಖಾಮುಖಿಯಾಗಿವೆ.  1996ರಲ್ಲಿ ಭಾರತ-ಕಾಂಗರೂ ನಡುವಿನ ಸರಣಿಗೆ ಉಭಯ ದೇಶಗಳ ದಿಗ್ಗಜರಾದ ಅಲನ್ ಬಾರ್ಡರ್ ಮತ್ತು ಸುನಿಲ್ ಗಾವಸ್ಕರ್ ಹೆಸರು ಇಡಲಾಯಿತು.

ಈ ಇಬ್ಬರೂ ಆಟಗಾರರು ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದವರು. ಇವರಿಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದಷ್ಟು ವರ್ಷಗಳ ಕಾಲ ಅತೀ ಹೆಚ್ಚು ರನ್ ಗಳಿಸಿದ್ದ ದಾಖಲೆಯನ್ನು ತಮ್ಮ ಹೆಸರಲ್ಲಿ ಉಳಿಸಿಕೊಂಡಿದ್ದರು. ಸದ್ಯ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಅಷ್ಟೇ ಅಲ್ಲದೆ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲೂ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ.

Advertisement

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲು, ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ತಂಡಗಳು 12 ಆವೃತ್ತಿಗಳಲ್ಲಿ ಮುಖಾಮುಖಿಯಾಗಿದ್ದವು. ಆದರೆ ಸಂಪೂರ್ಣ ಪಾರುಪತ್ಯ ಸಾಧಿಸಿದ್ದ ಆಸೀಸ್ ಏಳು ಬಾರಿ ಸರಣಿ ಜಯಿಸಿತ್ತು, ಭಾರತ ಕೇವಲ ಒಂದು ಬಾರಿ ಗೆದ್ದಿದೆ. ನಾಲ್ಕು ಬಾರಿ ಸರಣಿ ಡ್ರಾ ಆಗಿದೆ.

1996 ರಲ್ಲಿ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಬ್ಯಾನರ್ ಅಡಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯಗಳು ಮುಖಾಮುಖಿಯಾಗಿದ್ದವು. ದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅಕ್ಟೋಬರ್‌ ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದ್ದ ನಯನ್ ಮೊಂಗಿಯಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

2001ರಲ್ಲಿ ನಡೆದ ಸರಣಿಯು ಅತ್ಯುನ್ನತ ಸರಣಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸರಣಿಯಲ್ಲಿ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವು ಬಲಿಷ್ಠ ಕಾಂಗರೂಗಳ 16 ಪಂದ್ಯಗಳ ಗೆಲುವಿನ ಸರಣಿಯನ್ನು ತುಂಡರಿಸಿತು.

ಮುಂಬೈನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೂ, ವೀರಾವೇಶದಿಂದ ಹೋರಾಡಿದ ಭಾರತವು ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಹರ್ಭಜನ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ವಿವಿಎಸ್ ಲಕ್ಷ್ಮಣ್ ಅವರ 281 ರನ್‌ ಗಳ ಸಮಗ್ರ ಇನ್ನಿಂಗ್ಸ್‌ ಮತ್ತು ರಾಹುಲ್ ದ್ರಾವಿಡ್ ಜೊತೆಗಿನ ಐತಿಹಾಸಿಕ 376 ರನ್ ಜೊತೆಯಾಟದಿಂದ ಭಾರತ ತಂಡವು ಈಡನ್ ಗಾರ್ಡನ್ಸ್‌ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ನಂಬಲಾಸಾಧ್ಯ ಗೆಲುವು ಸಾಧಿಸಿತು. ಅಂತಿಮವಾಗಿ ಚೆನ್ನೈ ಟೆಸ್ಟ್ ಪಂದ್ಯ ಗೆದ್ದ ಗಂಗೂಲಿ ಪಡೆ ಸರಣಿಯನ್ನು ವಶಪಡಿಸಿಕೊಂಡಿತ್ತು.

2003-04ರಲ್ಲಿ ಆಸೀಸ್ ನೆಲದಲ್ಲಿ ನಡೆದ ಕೂಟದಲ್ಲಿ ಗಂಗೂಲಿ ನೇತೃತ್ವದ ಭಾರತ ತಂಡ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಹೀಗಾಗಿ 1-1ಸರಣಿ ಸಮಬಲಗೊಳಿಸಿ ಕಪ್ ತನ್ನಲ್ಲೇ ಉಳಿಸಿಕೊಂಡಿತು.

ಆಸ್ಟ್ರೇಲಿಯಾದಲ್ಲಿ ಭಾರತದ ವೀರಾವೇಶದ ನಂತರ, ಕಾಂಗರೂಗಳು ಭಾರತದ ನೆಲದಲ್ಲಿ ಆಡಲು ಬಂದಿದ್ದರು. ವಿಶೇಷವೆಂದರೆ ಭಾರತದಲ್ಲಿ ನಡೆದ 2004 ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವು 2-1 ಅಂತರದಿಂದ ಸರಣಿ ವಿಜಯ ಸಾಧಿಸಿತು. ಇದು ಆಸೀಸ್ ಗೆ 1969-70 ರ ಪ್ರವಾಸದ ನಂತರ ಭಾರತದಲ್ಲಿ ಬಂದ ಮೊದಲ ಟೆಸ್ಟ್ ಸರಣಿ ಜಯವಾಗಿತ್ತು.

2007-08 ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಎರಡು ರಾಷ್ಟ್ರಗಳು ಮತ್ತೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭೇಟಿಯಾದವು. ತವರಿನಲ್ಲಿ ನಡೆದ ಕೂಟದಲ್ಲಿ ಆಸ್ಟ್ರೇಲಿಯಾ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಆದರೆ ಪರ್ತ್‌ ನ ಕಷ್ಟಕರ ಪರಿಸ್ಥಿತಿಗಳಲ್ಲಿ ಮತ್ತು ವಿವಾದಾತ್ಮಕ ಅಂಪೈರಿಂಗ್ ನಿರ್ಧಾರಗಳ ಸರಣಿಯಲ್ಲಿ ಭಾರತ ಅಸಂಭವ ಜಯ ಸಾಧಿಸಿತು.

ಈ ಸರಣಿಯಲ್ಲಿ ಹಲವು ಅಂಪೈರಿಂಗ್ ನಿರ್ಧಾರಗಳು ವಿವಾದಗಳಿಗೆ ಕಾರಣವಾಯಿತು. ಇದೇ ಸರಣಿಯಲ್ಲಿ ಭಾರತದ ಹರ್ಭಜನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌ ನಡುವಿನ ಜನಾಂಗೀಯ ನಿಂದನೆಯ ಕುಖ್ಯಾತ ಮಂಕಿಗೇಟ್ ಘಟನೆಯೂ ನಡೆದಿತ್ತು.

ಹೀಗೆ ಹಲವು ರೀತಿಯಲ್ಲಿ ವಿಶೇಷತೆ, ಸ್ಪರ್ಧೆಯ ತೀವ್ರತೆ ಹೊಂದಿರುವ ಬಾರ್ಡರ್ – ಗಾವಸ್ಕರ್ ಟ್ರೋಫಿ ಇದೀಗ ಮತ್ತೆ ಬಂದಿದೆ. ಆಟಗಾರರ ಕದನಕ್ಕೆ ಸಜ್ಜಾಗಿದೆ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next