Advertisement

ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

03:58 PM Jan 19, 2021 | ಕೀರ್ತನ್ ಶೆಟ್ಟಿ ಬೋಳ |

ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿ ಇಂದಿಗೆ ಅಂತ್ಯವಾಗಿದೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಟೆಸ್ಟ್ ಸರಣಿ ಯಾರ ಪಾಲಿಗೆ ಎಂದು ನಿರ್ಧಾರ ಆಗಿದ್ದು ಸರಣಿಯ ಕೊನೆಯ ದಿನದಂದು. ಭಾರತ ತಂಡ ಕಾಂಗರೂಗಳನ್ನು ಅವರದೇ ನೆಲದಲ್ಲಿ ಬಗ್ಗು ಬಡಿದು ಮತ್ತೊಂದು ಸರಣಿ ವಿಕ್ರಮ ಸಾಧಿಸಿತು.

Advertisement

ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಡಿ.19ರಂದು ಭಾರತ ತಂಡ ಕೇವಲ 36 ರನ್ ಗಳಿಗೆ ಆಲ್ ಔಟ್ ಆದಾಗ ಈ ಸರಣಿಯಲ್ಲಿ ಭಾರತದ ಕಥೆ ಮುಗಿಯಿತು. ವಿರಾಟ್ ಅಲಭ್ಯತೆಯ ನಡುವೆ ಭಾರತ ವೈಟ್ ವಾಶ್ ಅವಮಾನ ಅನುಭವಿಸಲಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ “ ”ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ” ಎಂಬ ಸಿನಿಮಾ ಡೈಲಾಗ್ ನಂತೆ ಭಾರತ ತಂಡ ಕಾಂಗರೂಗಳನ್ನು ಬೇಟೆಯಾಡಿ ಇತಿಹಾಸ ನಿರ್ಮಿಸಿತು.

ಎರಡು ವರ್ಷಗಳ ಹಿಂದೆ ಭಾರತ ತಂಡ ಕಾಂಗರೂ ನೆಲಕ್ಕೆ ಪ್ರಯಾಣ ಬೆಳೆಸಿದ್ದಾಗ ಆತಿಥೇಯರ ತಂಡ ದುರ್ಬಲವಾಗಿತ್ತು. ಸ್ಮಿತ್ ಮತ್ತು ವಾರ್ನರ್ ಅಲಭ್ಯತೆ ಆಸೀಸ್ ತಂಡವನ್ನು ಮಾನಸಿಕವಾಗಿಯೂ ಕುಸಿಯುವಂತೆ ಮಾಡಿತ್ತು. ಭಾರತ ಸರ್ವ ಸನ್ನದ್ಧವಾಗಿ ತೆರಳಿ ಸರಣಿ ಜಯಿಸಿತ್ತು. ಆದರೆ ಈ ಬಾರಿ ಪರಿಸ್ಥಿತಿ ವಿರುದ್ಧವಾಗಿತ್ತು.

ಈ ಬಾರಿ ಆಸೀಸ್ ತಂಡ ಬಲಿಷ್ಠವಾಗಿತ್ತು. ವಾರ್ನರ್, ಸ್ಮಿತ್ ಮರಳಿದ್ದಾರೆ. ನೂತನ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲಬುಶೇನ್ ತಂಡದಲ್ಲಿದ್ದರು, ಬೌಲಿಂಗ್ ವಿಭಾಗ ಕೂಡಾ ಅತ್ಯುತ್ತಮವಾಗಿಯೇ ಇದೆ. ಆದರೆ ಭಾರತ ತಂಡ ಕಳೆದ ಪ್ರವಾಸದಷ್ಟು ಬಲಿಷ್ಠವಾಗಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ.

Advertisement

ಪ್ರಮುಖ ಆಟಗಾರರ ಗಾಯದ ಸಮಸ್ಯೆ, ನಾಯಕ ವಿರಾಟ್ ಕೊಹ್ಲಿ ಅಲಭ್ಯತೆ ಮುಂತಾದ ಬೆಟ್ಟದಂತಹ ಸಮಸ್ಯೆಗಳ ನಡುವೆ ಭಾರತ ತಂಡ ತೋರಿಸಿದ ಅಸಾಧಾರಣ ಮನೋಸ್ಥೈರ್ಯವೇ ವಿಶ್ವ ಕ್ರಿಕೆಟ್ ನ್ನು ನಿಬ್ಬೆರಗಾಗಿಸಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ಆಘಾತ, ನಾಯಕನ ನಿರ್ಗಮನ, ಪ್ರತಿ ಪಂದ್ಯದಲ್ಲೂ ಪ್ರಮುಖ ಆಟಗಾರರು ಗಾಯದಿಂದ ಭಾರತ ವಿಮಾನ ಹತ್ತುತ್ತಿದ್ದರೂ ರಹಾನೆ ಹುಡುಗರು ತೋರಿಸಿದ ಧೈರ್ಯ, ದಿಟ್ಟತನ ಈ ಸರಣಿಯನ್ನು ಅವಿಸ್ಮರಣೀಯವನ್ನಾಗಿಸಿತು.

ಈ ಒಂದು ಸರಣಿ ಟೀಂ ಇಂಡಿಯಾದ ಹಲವು ಮುಖಗಳನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದೆ. ಐಪಿಎಲ್ ನಂತಹ ಶ್ರೀಮಂತ ಕ್ರಿಕೆಟ್ ಕೂಟದ ತವರಿನಲ್ಲಿ ಟೆಸ್ಟ್ ಕ್ರಿಕೆಟ್ ನ ಒಲವು ಇನ್ನೂ ಎಷ್ಟು ಜೀವಂತವಾಗಿದೆ ಎನ್ನುವುದನ್ನು ಮತ್ತೆ ನಿರೂಪಿಸಿತು. ಚುಟುಕು ಕ್ರಿಕೆಟ್ ಜಾತ್ರೆಗಳ ನಡುವೆ ಟೆಸ್ಟ್ ಕ್ರಿಕೆಟ್ ನ ಆಸಕ್ತಿಯನ್ನು ಈ ಸರಣಿ ಹೆಚ್ಚಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

‘ಭಾರತದಲ್ಲಿ ಹುಲಿ, ವಿದೇಶದಲ್ಲಿ ಇಲಿ’ ಎಂಬ ಆರೋಪವನ್ನು ಇಂದು ಭಾರತ ಹೆಮ್ಮೆಯಿಂದ ಕಳಚಿಕೊಂಡಿತು. ಎರಡು ವರ್ಷಗಳ ಹಿಂದಿನ ಸರಣಿ ಜಯಕ್ಕಿಂತ ಇಂದಿನ ಈ ಸರಣಿ ಜಯ ಬಹುದೊಡ್ಡದು ಎನ್ನುವುದು ಅಭಿಮಾನಿಗಳ ಗರ್ವದ ಮಾತು.

ದೇಸಿ ಕ್ರಿಕೆಟ್ ನ ಮೌಲ್ಯ: ತಂಡದ ಪ್ರಮುಖ ಆಟಗಾರರು ಗಾಯಗೊಂಡಾಗ ಅವರ ಜಾಗವನ್ನು ತುಂಬಿದ್ದು ಬೆಂಚ್ ಆಟಗಾರರು. ಗಿಲ್, ನಟರಾಜನ್, ವಾಷಿಂಗ್ಟನ್‌ ಸುಂದರ್ ರಂತಹ ನೆಟ್ ಬೌಲರ್ ಗಳೂ ತಂಡವನ್ನು ಸೇರಿ ಯಾವ ರೀತಿ ಆಡಿದರೆಂದು ಎಲ್ಲರೂ ನೋಡಿದ್ದಾರೆ. ಕಾರಣ ಇದರ ಹಿಂದಿನ ಶಕ್ತಿ ರಣಜಿ ಟ್ರೋಫಿ, ದುಲೀಪ್ ಟ್ರೋಫಿಯಂತಹ ದೇಶಿಯ ಕ್ರಿಕೆಟ್. ಭಾರತದಲ್ಲಿ ನಡೆಯುವ ದೇಶೀಯ ಕೂಟಗಳು, ಇವುಗಳಿಗೆ ಬಿಸಿಸಿಐ ನೀಡುವ ಬೆಂಬಲ, ಹೆಚ್ಚುತ್ತಿರುವ ಸ್ಪರ್ಧೆಗಳು ಆಟಗಾರರನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ. ಇದಲ್ಲದೆ ಭಾರತ ಎ ತಂಡದ ವಿದೇಶ ಪ್ರವಾಸಗಳು ಯುವ ಆಟಗಾರರಿಗೆ ಸಹಾಯಕವಾಗುತ್ತಿದೆ.

ಗಿಲ್, ಪಂತ್, ಸುಂದರ್ ಪೋಷಣೆ ಅಗತ್ಯ: ಭಾರತದ ಯುವ ಆಟಗಾರರಾದ ಶುಭ್ಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಈ ಸರಣಿಯಲ್ಲಿ ತೋರಿಸಿದ ದಿಟ್ಟತನ ನಿಜಕ್ಕೂ ಮೆಚ್ಚುವಂತದ್ದು. ಕಠಿಣ ಪರಿಸ್ಥಿತಿ, ಆಸೀಸ್ ವೇಗಿಗಳ ಬೆಂಕಿ ಎಸೆತಗಳು, ಒತ್ತಡದ ನಡುವೆಯೂ ಈ ಹುಡುಗರು ತೋರಿಸಿದ ಧೈರ್ಯ, ಡ್ರಾದತ್ತ ಸಾಗುವ ಪಂದ್ಯದಲ್ಲೂ ಜಯ ಗಳಿಸಬಹುದು ಎಂಬ ನಂಬಿಕೆ ಮೂಡಿಸಿದ್ದು ಸಾಧಾರಣ ಸಾಧನೆಯಲ್ಲ. ತಮ್ಮಲ್ಲಿ ಪ್ರತಿಭೆಯಿದೆ ಎನ್ನುವುದನ್ನು ಇವರುಗಳು ಈಗಾಗಲೇ ನಿರೂಪಿಸಿದ್ದಾರೆ. ಆದರೆ ಮುಂದಿನ ಸರಣಿಗಳಲ್ಲಿ ಇವರಿಗೆ ಸರಿಯಾದ ಅವಕಾಶ ನೀಡಿ, ಬೆನ್ನೆಲುಬಾಗಿ ನಿಂತು ಆತ್ಮವಿಶ್ವಾಸ ಮೂಡಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಬೆಳಗಬಹುದು.

ಹೊಸ ಬೌಲರ್ ಅಗತ್ಯ: ಭಾರತದ ಪ್ರಮುಖ ಬೌಲರ್ ಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಆಸೀಸ್ ಸರಣಿಯಲ್ಲಿ ಗಾಯಗೊಂಡಿದ್ದಾರೆ. ಬ್ರಿಸ್ಬೇನ್ ಪಂದ್ಯದಲ್ಲಿ ಕುಲದೀಪ್ ಯಾದವ್ ಹೊರತುಪಡಿಸಿ ಬೇರೆ ಯಾವ ಬೌಲರ್ ಕೂಡಾ ಬೆಂಚ್ ನಲ್ಲಿ ಇರಲಿಲ್ಲ. ನೆಟ್ ಬೌಲರ್ ಗಳಾಗಿದ್ದ ವಾಷಿಂಗ್ಟನ್ ಸುಂದರ್ ಮತ್ತು ನಟರಾಜನ್ ಕೂಡಾ ಆಡಬೇಕಾಯಿತು. ಬಿಸಿಸಿಐ ಇದೊಂದು ಎಚ್ಚರಿಕೆಯ ಗಂಟೆಯಾಗಿ ಪರಿಗಣಿಸಿ ದೇಶಿ ಕ್ರಿಕೆಟ್ ನಲ್ಲಿ ಈಗಾಗಲೇ ಹೆಸರು ಮಾಡಿರುವ ಬೌಲರ್ ಗಳನ್ನು ಮುಂದಿನ ಹಂತಕ್ಕೆ ಸಜ್ಜುಗಳಿಸಬೇಕಿದೆ.

ಗಾಯಾಳುಗಳ ಸಂಕಷ್ಟ: ಆಸೀಸ್ ಸರಣಿಯಲ್ಲಿ ಭಾರತ ತಂಡಕ್ಕೆ ನಿಜಕ್ಕೂ ವಿಲನ್ ಆಗಿ ಕಾಡಿದ್ದು ಗಾಯದ ಸಮಸ್ಯೆ. ದೀರ್ಘ ಕಾಲದ ವಿಶ್ರಾಂತಿಯ ನಂತರ ಸುದೀರ್ಘ ಐಪಿಎಲ್, ನಂತರ ನೇರವಾಗಿ ಆಸೀಸ್ ಗೆ ಆಗಮಿಸಿದ ಟೀಂ ಇಂಡಿಯಾಗೆ ನಿಗದಿತ ಓವರ್ ಕೂಟದಿಂದಲೇ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ನಾಯಕ ರಹಾನೆ ಮತ್ತು ಚೇತೇಶ್ವರ ಪೂಜಾರ ಇಬ್ಬರು ಮಾತ್ರ ನಾಲ್ಕು ಟೆಸ್ಟ್ ಪಂದ್ಯ ಆಡಿದವರು, ಅಲ್ಲಿಯವರೆಗೆ ಗಾಯದ ಸಮಸ್ಯೆ ತಂಡವನ್ನು ಕಾಡಿತ್ತು.

ಮುಂದಿನ ದಿನಗಳಲ್ಲಿ ಬಿಸಿಸಿಐ ಹಲವು ಬದಲಾವಣೆ ತರುವ ಅಗತ್ಯವಿದೆ. ಕೆಲವೇ ಆಟಗಾರರನ್ನು ಹೊರತು ಪಡಿಸಿ ಉಳೆದೆಲ್ಲರು ಮೂರು ಮಾದರಿಯ ತಂಡದಲ್ಲಿದ್ದಾರೆ. ಬಿಸಿಸಿಐ ಮುಂದಿನ ದಿನಗಳಲ್ಲಿ ಆವರ್ತನ ಪದ್ದತಿಗೆ ಮಣೆ ಹಾಕಿದರೆ ಆಟಗಾರರ ಮೇಲಿನ ಒತ್ತಡ ಕಡಿಮೆಯಾಗಬಹುದು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next