ಚಿಕ್ಕಮಗಳೂರು: ಟಿಪ್ಪು ಸುಲ್ತಾನ್ ನೀತಿಯ ವಿರುದ್ಧ ಉರಿಗೌಡ, ನಂಜೇಗೌಡ ಹಾಗೂ ಒಕ್ಕಲಿಗ ಸಮುದಾಯದವರು ತಿರುಗಿಬಿದ್ದಿದ್ದರು ಎಂಬುದನ್ನು ದೇ.ಜವರೇಗೌಡರು “ಸುವರ್ಣ ಮಂಡ್ಯ’ ಪುಸ್ತಕದಲ್ಲಿ ಉಲ್ಲೇಖೀಸಿದ್ದಾರೆ. ಯಾರೂ ಇತಿಹಾಸವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರಿಗೌಡ ಮತ್ತು ನಂಜೇಗೌಡ ಅವರ ಕಥೆ ಬಿಜೆಪಿ ಮತ್ತು ಸಿ.ಟಿ.ರವಿ ಸೃಷ್ಟಿ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಆದರೆ 1994ರಲ್ಲಿ ದೇ. ಜವರೇಗೌಡರು ತಮ್ಮ ಪುಸ್ತಕದಲ್ಲಿ ಇವರಿಬ್ಬರ ವಿಷಯ ಬರೆದಿದ್ದಾರೆ. 1994ರಲ್ಲಿ ಬಿಜೆಪಿ ರಾಜ್ಯದಲ್ಲಿ ಅ ಧಿಕಾರದಲ್ಲಿ ಇರಲಿಲ್ಲ. ದೇ.ಜವರೇಗೌಡರು ಬಿಜೆಪಿಯವರೂ ಅಲ್ಲ. ಅಂದು ಎಚ್.ಡಿ. ದೇವೇಗೌಡರು ಸಿಎಂ ಆಗಿದ್ದರು. ಪುಸ್ತಕವನ್ನು 2006ರಲ್ಲಿ ಮರು ಮುದ್ರಣ ಮಾಡಲಾಗಿದ್ದು, ಎಚ್.ಡಿ.ದೇವೇಗೌಡರು ಪುಸ್ತಕ ಬಿಡುಗಡೆ ಮಾಡಿದ್ದರು ಎಂದರು.
ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದು ಅಪರಿಚಿತರು ಎನ್ನುತ್ತಾರೆ. ಉರಿಗೌಡ ಮತ್ತು ನಂಜೇಗೌಡ ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದು ಎಂದು ನಾವು ಹೇಳುತ್ತೇವೆ. ಒನಕೆ ಓಬವ್ವ ಸಾಮಾನ್ಯ ಗೃಹಿಣಿ. ಒನಕೆ ಹಿಡಿದು ಹೈದರಾಲಿಯ ಸೈನಿಕರನ್ನು ಸದೆಬಡಿದಿದ್ದರು. ಹಾಗಾದರೆ ಎಚ್.ಡಿ.ಕುಮಾರಸ್ವಾಮಿ ದೃಷ್ಟಿಯಲ್ಲಿ ಒನಕೆ ಓಬವ್ವ ಮಾಡಿದ್ದು ಅಪರಾಧವಾಗುತ್ತದೆ. ಹೈದರಾಲಿ ವಿರುದ್ಧ ಮದಕರಿ ನಾಯಕ ಬಂಡಾಯ ಎದ್ದಿದ್ದು ಅಪರಾಧವಾಗುತ್ತದೆ ಎಂದರು.
ನಾವು ಸಮಕಾಲೀನ ಪರಿಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ಸಮಕಾಲೀನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಹೈದರಾಲಿ ಪರ ನಿಲ್ಲುತ್ತಿದ್ದರು. ನಾವು ನಂಜರಾಜ ಒಡೆಯರ್ ಹಾಗೂ ಮಹಾರಾಣಿ ಲಕ್ಷ್ಮಮ್ಮಣ್ಣಿ ಜತೆ ನಿಲ್ಲುತ್ತಿದ್ದೆವು. ಟಿಪ್ಪು ಹಾಗೂ ಹೈದರಾಲಿ ಜತೆ ನಿಲ್ಲುವವರು ದ್ರೋಹಿಗಳಾಗುತ್ತಾರೆ. ಮಹಾರಾಣಿ ಲಕ್ಷ್ಮಮ್ಮಣ್ಣಿ ಜತೆ ನಿಲ್ಲುವವರು ದ್ರೋಹಿಗಳಾಗುವುದಿಲ್ಲ. ಲಕ್ಷ್ಮಮ್ಮಣ್ಣಿ ಸಾಮ್ರಾಜ್ಯ ಪುನರ್ ಸ್ಥಾಪಿಸದಿದ್ದರೆ ಸಾಮಾಜಿಕ ನ್ಯಾಯ ಸಿಗುತ್ತಿರಲಿಲ್ಲ ಎಂದರು.
ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ ಮಸೀದಿ ಆಗಿದ್ದು ಹೇಗೆ? ಟಿಪ್ಪು ಮತಾಂಧ ಅಲ್ಲದಿದ್ದರೆ ಆಂಜನೇಯ ಸ್ವಾಮಿ ದೇವಸ್ಥಾನ ಜಾಮೀಯಾ ಮಸೀದಿಯಾಗಿ ಪರಿವರ್ತನೆ ಮಾಡಿದ ಕಿರಾತಕ ಯಾರು? ಹೊಸ ಮಸೀದಿ ಕಟ್ಟಿ ನಾವು ಖುಷಿ ಪಡುತ್ತೇವೆ. ಆದರೆ ದೇವಸ್ಥಾನ ಒಡೆದು ಮಸೀದಿ ಕಟ್ಟಿ ನಮಾಜ್ ಮಾಡಿದರೆ ಒಳ್ಳೆಯದಾಗಲು ಸಾಧ್ಯವಿಲ್ಲ. ಹಿಂದೂಗಳ ಶಾಪ, ಆಕ್ರೋಶ, ನೋವು ಅವರಿಗೆ ಕಾಡುತ್ತದೆ. ಎಲ್ಲೆಲ್ಲಿ ದೇವಸ್ಥಾನಗಳನ್ನು ನಾಶ ಮಾಡಿ ಮಸೀದಿ ಕಟ್ಟಿದ್ದಾರೋ ಅದನ್ನೆಲ್ಲಾ ಅವರು ಬಿಟ್ಟು ಕೊಡುವುದು ಒಳ್ಳೆಯದು ಎಂದರು.
ಶಿವಮೊಗ್ಗ ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ಘಟನೆ ಖಂಡನೀಯ. ಇದರಿಂದ ಅವರ ಮಾನಸಿಕತೆ ವ್ಯಕ್ತವಾಗುತ್ತದೆ. ವಿಧಾನಸೌಧದ ಮೇಲೆ ಆಜಾನ್ ಕೂಗುತ್ತೇವೆಂಬುದು ದಾಸ್ಯ, ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಭಿನ್ನವಾಗಿಲ್ಲ. ಇಂತಹ ಮಾನಸಿಕತೆಗೆ ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ಗೊತ್ತಿದೆ ಎಂದರು.