ನೆಲಮಂಗಲ: ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಹೆಚ್ಚಿಸುವಲ್ಲಿ ಐತಿಹಾಸಿಕ ಸ್ಮಾರಕಗಳು ಮತ್ತು ರಾಜ ಮನೆತನದ ಕಟ್ಟಡಗಳು ಬಹುಮುಖ್ಯವಾಗುತ್ತವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಪುರಾತತ್ವ ತಜ್ಞ ಡಾ.ಆರ್.ಎನ್‌ಕುಮಾರನ್ ತಿಳಿಸಿದರು.
ತಾಲೂಕಿನತ್ಯಾಮಗೊಂಡ್ಲುಹೋಬಳಿಯ ಗಂಗರಸರ ರಾಜಧಾನಿಯಾಗಿದ್ದ ಮಣ್ಣೆ ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇ ಕ್ಷಣಾ ಇಲಾಖೆ, ಬೆಂಗಳೂರು ಹಾಗೂ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಸಂಘಟನೆಯ ಸಹಯೋಗದಲ್ಲಿ ವಿಶ್ವ ಪರಂಪರಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಪರಂಪರಾನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಣ್ಣೆ ಗ್ರಾಮದಲ್ಲಿ ಈಗಾಗಲೇ ಅಧಿಕಾರಿಗಳ ಜೊತೆಯಲ್ಲಿ ಕ್ಷೇತ್ರ ವೀಕ್ಷಣೆ ಮಾಡಿದ್ದೇವೆ. ಈಗಾಗಲೇ ನಮ್ಮ ಅಧಿಕಾರಿಗಳು ಇಲ್ಲಿನ ಗಂಗರ ಕಾಲದ ಎಲ್ಲ ದೇವಾಲಯಗಳನ್ನು ಹಾಗೂ ಜೈನ ಬಸದಿಗಳು ಮತ್ತು ಉತ್ಖನನ ಪ್ರದೇಶಗಳನ್ನು ಗುರುತಿಸಿಕೊಂಡಿದ್ದೇವೆ. ಇಲ್ಲಿನ ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಯಾವುದೇ ತಕರಾರು ಇಲ್ಲದಂತೆ ಇಲ್ಲಿನ ಸ್ಮಾರಕಗಳ ಪ್ರದೇಶವನ್ನು ನಮ್ಮ ಅಧೀನಕ್ಕೆ ಒಪ್ಪಿಸಿದರೇ ಮುಂದಿನ ಹದಿನೈದು ದಿನಗಳಲ್ಲಿ ನಮ್ಮಕೆಲಸ ಶುರು ಮಾಡುತ್ತೇವೆ ಎಂದರು.
ಅಧಿಕಾರಿಗಳಿಗೆ ಸಹಕಾರ ನೀಡಿ: ಇತಿಹಾಸ ತಜ್ಞರಾದ ಡಾ.ಎಚ್.ಎಸ್ ಗೋಪಾಲ್‌ರಾವ್ ಮಾತನಾಡಿ, ಮಣ್ಣೆ ಗ್ರಾಮದಲ್ಲಿ ಕ್ರಿ.ಶ.-650ಕಾಲದ ಶಾಸನಗಳು ದೊರೆಯುತ್ತವೆ. ಇಲ್ಲಿನ ಬರಹಗಳು ಸುಮಾರು ಏಳನೇಯ ಶತಮಾನದವಾಗಿವೆ. ಗಂಗರರಾಜ ಶ್ರೀಪುರುಷ ಮತ್ತುಮಾರಸಿಂಹ ಆಳ್ವಿಕೆಯ ಬಗ್ಗೆ ಕುರುಹುಗಳನ್ನು ನೀಡುತ್ತವೆ. ಇಲ್ಲಿನ ಐತಿಹಾಸಿಕವಾದ ಸಾಂಸ್ಕೃತಿಕ ಸಂಪತ್ತು ಅಡಗಿರುವುದು ನಿಜ ಇದರತ್ತ ಸಂಶೋಧನೆಗಳು ಉತ್ಖನನಗಳು ನಡೆದರೇ ತಿಳಿಯಬಹುದು. ಇಲ್ಲಿನ ಸ್ಥಳೀಯ ಗ್ರಾಮಸ್ಥರು ಸರ್ವೆ ಕಾರ್ಯ ಮಾಡುವ ಅಧಿಕಾರಿಗಳಿಗೆ ಸಹಕಾರವನ್ನು ನೀಡಬೇಕು ಎಂದರು.
ಕನ್ನಡ ಸಾಹಿತ್ಯದ ಮೊದಲ ಲಕ್ಷಾಣಿಕ ಕೃತಿಯಾದ ಕವಿರಾಜ ಮಾರ್ಗದ ಕವಿ ಶ್ರೀವಿಜಯ ಮಣ್ಣೆ ಗ್ರಾಮದಲ್ಲಿ ನೆಲೆಸಿದ್ದ ಎನ್ನುವುದಕ್ಕೆ ಕೆಲವು ದಾಖಲೆಗಳು ಸಿಗುತ್ತವೆ. ಇಲ್ಲಿನ ಜೈನ ಬಸದಿಯನ್ನು ಆತನೇ ಕಟ್ಟಿಸಿರುವುದಾಗಿ ಅನುಮಾನವಿದೆ ಇದರ ಬಗ್ಗೆ ಮತ್ತಷ್ಟು ಅಧ್ಯಯನಗಳು ನಡೆಯಬೇಕು ಎಂದು ಗೋಪಾಲರಾವ್ ತಿಳಿಸಿದರು.
ಪರಂಪರಾ ನಡಿಗೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಅಧಿಕಾರಿಗಳಾದ ಡಾ.ಸುಜನಾ, ಡಾ.ಎಂ.ಶರಣ್ಯ, ಮರಳಿ ಮೋಹನ್, ಚಂದನ್ ಪ್ರಕಾಶ್, ವಾಸ್ತು ಶಿಲ್ಪಿ ಯಶಸ್ವಿನಿ ಶರ್ಮಾ, ಬಿಜೆಪಿ ಎಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ, ಮಣ್ಣೆ ಗ್ರಾಮದ ಪಣಮದಿಲಿ ರಾಮಣ್ಣ, ಕರಿಗಿರಿಯಪ್ಪ, ವೀರಭದ್ರಯ್ಯ, ಕೃಷ್ಣಮೂರ್ತಿ, ಮಣ್ಣೆ ವೆಂಕಟೇಶ್, ಇತಿಹಾಸಅಕಾಡೆಮಿಯ ಸದಸ್ಯರುಗಳು ಹಾಗೂ ಗ್ರಾಮಸ್ಥರು ಇದ್ದರು.
ಉತ್ಖನನಕ್ಕೆ ಆಕ್ಷೇಪಣೆಗಳಿಲ್ಲ : ಮಣ್ಣೆ ಗ್ರಾಮಪಂಚಾಯತಿಯಿಂದಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಣ್ಣೆ ಗ್ರಾಮದಲ್ಲಿನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಉತ್ಖನನ ಮಾಡಲು ಯಾವುದೇ ರೀತಿಯ ಅಕ್ಷೇಪಣೆಗಳು ಇಲ್ಲ ಎಂದು ಪಿಡಿಓ ಸಿದ್ದರಾಜಯ್ಯ ಎನ್‌ಓಸಿ ಪತ್ರವನ್ನು ಹಸ್ತಾಂತರಿಸಿದರು.