Advertisement
12ನೇ ಶತಮಾನದ ಶಾಸನಗಳುಸುಮಾರು 12ನೇ ಶತಮಾನಗಳಷ್ಟು ಹಿಂದಿನ ಶಾಸನಗಳು ಇಲ್ಲಿ ಕಾಣ ಸಿಗುತ್ತವೆ. ಅನೇಕ ಇತಿಹಾಸ ಸಂಶೋಧಕರು ಬಸ್ರೂರಿನ ಶಿಲಾಶಾಸನಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಸುಮಾರು 53 ಕ್ಕೂ ಹೆಚ್ಚು ಶಿಲಾ ಶಾಸನಗಳು ಇಲ್ಲಿ ದೊರೆತಿವೆ. ಇವುಗಳಲ್ಲಿ 13 ಶಿಲಾ ಶಾಸನಗಳನ್ನು ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಎನ್ನೆನ್ನೆಸ್ ಘಟಕದ ವಿದ್ಯಾರ್ಥಿಗಳ ಸಹಕಾರದಿಂದ ಸಂರಕ್ಷಿಸಿಡಲಾಗಿದೆ. ಅದು ಬಿಟ್ಟರೆ ಹೊರಗಿರುವ ಸುಮಾರು 40 ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಸೂಕ್ತವಾಗಿ ಸಂರಕ್ಷಿಸಲಾಗಿಲ್ಲ.
12ನೇ ಶತಮಾನದಲ್ಲಿ ಆಳುಪ ರಾಜರು ಆಳ್ವಿಕೆ ನಡೆಸಿದ ಪ್ರಥಮ ಶಾಸನ ಇಲ್ಲಿ ಪತ್ತೆಯಾಗಿದೆ. ಆ ಶಾಸನದಲ್ಲಿ ಬಸ್ರೂರನ್ನು ‘ಹೊಸ ಪಟ್ಟಣ’ ವೆಂದು ಹೇಳಲಾಗಿದೆ. ಮೂಡುಕೇರಿಯ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲೂ ಕೆಲವೊಂದು ಶಿಲಾ ಶಾಸನಗಳು ದೊರೆತಿವೆ. 12ನೇ ಶತಮಾನಕ್ಕಿಂತಲೂ ಹಿಂದಿನಿಂದ ಬಸ್ರೂರು ಮತ್ತು ಬಾರ್ಕೂರು ರಾಜಧಾನಿಗಳಾಗಿ ಮೆರೆದ ಗತವೈಭವ ಈ ಶಿಲಾ ಶಾಸನಗಳಿಂದ ತಿಳಿದು ಬರುತ್ತದೆ. ಆಳುಪ ವಂಶದ ಅರಸರು ಕ್ರಿ.ಶ. 1176ರಲ್ಲಿ ಬಸ್ರೂರನ್ನು ಆಳ್ವಿಕೆ ಮಾಡಿದ್ದರೆಂಬುದಕ್ಕೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಂದು ಶಿಲಾ ಶಾಸನಗಳು ಹೇಳುತ್ತದೆ. ಅಂದಿನ ಬಸ್ರೂರು ಸರ್ವತೋಮುಖ ಪ್ರಗತಿ ಕಂಡಿದ್ದು, ವಿಜಯನಗರದ ಅರಸರ ಕಾಲದಲ್ಲಿ ಎನ್ನುವ ವಿಷಯ ಇಲ್ಲಿ ದೊರೆತ ಶಾಸನಗಳಿಂದ ತಿಳಿದು ಬರುತ್ತದೆ. ಕ್ರಿ.ಶ. 1400, 1401, 1431, 1442, 1444, 1450, 1451, 1455, 1465, 1472, 1482, 1506, 1510, 1525, 1528, 1533 ಹಾಗೂ 1554ರ ಶಾಸನಗಳು ಇಲ್ಲಿ ಪ್ರಮುಖವಾಗಿ ಕಂಡು ಬಂದಿದ್ದು ವಿಜಯನಗರ, ಹೊಯ್ಸಳ, ಆಳುಪ ಮುಂತಾದ ರಾಜರು ಇಲ್ಲಿ ಆಡಳಿತ ನಡೆಸಿದ್ದ ಸಂಗತಿ ಇವುಗಳಿಂದ ತಿಳಿಯುತ್ತದೆ. ಅಮೂಲ್ಯ ಶಿಲಾ ಶಾಸನಗಳನ್ನೆಲ್ಲ ಒಂದೆಡೆ ಸಂರಕ್ಷಿಸಿಡುವ ಕೆಲಸವೂ ಆಗಿಲ್ಲ. ಅವುಗಳು ಬೇಕಾಬಿಟ್ಟಿಯಾಗಿವೆ.
Related Articles
ಶಿಲಾ ಶಾಸನಗಳು ಪ್ರಾಚೀನ ಕಾಲದ ಆಳ್ವಿಕೆ, ಜನಜೀವನ ತಿಳಿಸಿಕೊಡುವ ಮಹತ್ವದ ಅಂಶಗಳಾಗಿದ್ದು ಇತಿಹಾಸ ಅಧ್ಯಯನಕ್ಕೆ ಪ್ರಮುಖ ವಸ್ತುಗಳು. ಅವುಗಳನ್ನು ಸಂರಕ್ಷಿಸಿದರೆ ಯುವ ಸಮೂಹಕ್ಕೆ ಇತಿಹಾಸವನ್ನು ತಿಳಿಸಿಕೊಡಬಹುದು.
Advertisement
ಇತಿಹಾಸ ಹೇಳುವ ಕುರುಹುಬಸ್ರೂರಿನ ಇತಿಹಾಸ ಸಾರುವ ಸುಮಾರು 40ಕ್ಕೂ ಹೆಚ್ಚು ಶಾಸನಗಳನ್ನು ಸೂಕ್ತವಾಗಿ ಸಂರಕ್ಷಿಸಿಡಲಾಗಿಲ್ಲ. ಇವುಗಳನ್ನು ಪ್ರಾಚ್ಯ ಸಂಶೋಧನಾ ಇಲಾಖೆ ಅಥವಾ ಸ್ಥಳೀಯಾಡಳಿತ ಮಾಡಬೇಕಾಗಿದೆ. ಇವುಗಳನ್ನು ಸಂರಕ್ಷಿಸದೇ ಹೋದಲ್ಲಿ ಮುಂದಿನ ತಲೆಮಾರಿಗೆ ಬಸ್ರೂರಿನ ಇತಿಹಾಸ ಹೇಳುವ ಯಾವ ಕುರುಹುಗಳೂ ಉಳಿದಿರುವುದಿಲ್ಲ.
-ಡಾ| ಕನರಾಡಿ ವಾದಿರಾಜ ಭಟ್, ನಿವೃತ್ತ ಉಪನ್ಯಾಸಕ, ಬಸ್ರೂರು — ದಯಾನಂದ ಬಳ್ಕೂರು