Advertisement

Vijayapura; ಐತಿಹಾಸಿಕ ಸ್ಮಾರಕ ಒತ್ತುವರಿ ತೆರವು ಕಾರ್ಯಾಚರಣೆ

02:11 PM Jul 26, 2024 | keerthan |

ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿ ವಿಜಯಪುರ ಮಹಾನಗರದಲ್ಲಿ ಪಾರಂಪರಿಕ ಸ್ಮಾರಕಗಳ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.

Advertisement

ಶುಕ್ರವಾರ ಐತಿಹಾಸಿಕ ತಾಜ್ ಬಾವಡಿ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿರುವ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ನೇತೃತ್ವದಲ್ಲಿ ತೆರವು ಕಾರ್ಯ ನಡೆದಿದೆ.

ಬೆಳ್ಳಂಬೆಳಿಗ್ಗೆ ಜೆಸಿಬಿ ಸಮೇತ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆಗೆ ಆಗಮಿಸಿದ ಅಧಿಕಾರಿಗಳನ್ನು ಕಂಡು ಒತ್ತುವರಿ ನಿವಾಸಿಗಳು ದಂಗಾಗಿದ್ದರು.

ಸುರಿಯುತ್ತಿದ್ದ ತುಂತುರು ಮಳೆಯ‌ ಮಧ್ಯೆಯೂ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಅಧಿಕಾರಿಗಳಿಗೆ ಕೆಲವರು ಸಂಜೆವರೆಗೆ ಮನೆ ತೆರವು ಮಾಡಲು ಅವಕಾಶ ಮಾಡಿಕೊಡಿ ಎಂದು ಗೋಗರೆಯುತ್ತಿದ್ದ ದೃಶ್ಯವೂ ಕಂಡುಬಂತು.

Advertisement

ಏಕಾಏಕಿ ಮನೆಗಳ ತೆರವು ಮಾಡಿದ್ದರಿಂದ ಮಕ್ಕಳು, ಸಾಮಗ್ರಿಗಳೊಂದಿಗೆ ಬೀದಿಯಲ್ಲಿ ಕುಳಿತಿದ್ದ ಮಹಿಳೆಯರು ಕಣ್ಣೀರು ಹಾಕುತ್ತಿರುವುದು ಕಂಡುಬಂತು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಪಾಲಿಕೆ ಮೇಯರ್ ಮಹೇಜಬಿನ್ ಪತಿ ಅಬ್ದುಲ್ ರಜಾಕ್ ಹೋರ್ತಿ, ಮಳೆ ಬರುತ್ತಿದ್ದು, ಸಾಮಗ್ರಿಗಳ ಸ್ಥಳಾಂತರಕ್ಕೆ ಸಮಸ್ಯೆ ಆಗುತ್ತಿದೆ. ಸಂಜೆ ವರೆಗೆ ಮನೆ ತೆರವಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಇದೇ ವೇಳೆ ಮನೆ ತೆರವಿನಿಂದ ಬೀದಿಯಲ್ಲಿ ನಿಂತಿರುವ ಬಾಧಿತರಿಗೆ ಊಟ, ಉಪಹಾರ ವ್ಯವಸ್ಥೆ ಮಾಡಿರುವ ಹಾಗೂ ಸಾಮಗ್ರಿಗಳನ್ನು ಸಾಗಿಸಲು ನೆರವು ನೀಡುತ್ತಿರುವ ಪಾಲಿಕೆಯ ಕಾರ್ಯಕ್ಕೆ ಅಬ್ದುಲ್ ರಜಾಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಐತಿಹಾಸಿಕ ಸ್ಮಾರಕಗಳ ಸೌಂರ್ಯೀಕತಣಕ್ಕೆ ಖಾಸಗಿ ಸಂಸ್ಥೆಗಳ ಸಾಮಾಜಿಕ ಸೇವಾ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದರು.

ಸ್ಮಾರಕಗಳ ಒತ್ತುವರಿದಾರನ್ನು ತೆರವು ಗೊಳಿಸಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಯೋಗಾಪುರ ಪ್ರದೇಶದಲ್ಲಿ ನಿರ್ಮಿಸಿರುವ ಪುನರ್ವಸತಿ ಮನೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಸ್ಥಳಾಂತರಕ್ಕೆ ಗುರುತಿಸಿರುವ ಕೊಳಚೆ ಅಭಿವೃದ್ಧಿ ಮಂಡಳಿ ಗೃಹ ಸಮುಚ್ಚಯದಲ್ಲಿ 22 ಮನೆಗಳನ್ನು ಗುರುತಿಸಿದ್ದೇವೆ. ಸದರಿ ಮನೆಗಳಿಗೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next