Advertisement

Metro works: 41 ಮರ ತೆರವು, 20 ಮರ ಸ್ಥಳಾಂತರಕ್ಕೆ ಅನುಮತಿ

11:47 AM Sep 05, 2024 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯ 2ನೇ ಎ ಹಂತದ ಎಚ್‌ಎಸ್‌ಆರ್‌ ಲೇಔಟ್‌ ಮೆಟ್ರೋ ರೈಲು ನಿಲ್ದಾಣ ನಿರ್ಮಾಣಕ್ಕೆ 41 ಮರಗಳನ್ನು ಕತ್ತರಿಸಲು ಹಾಗೂ 20 ಮರಗಳನ್ನು ಸ್ಥಳಾಂತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌)ಕ್ಕೆ ಹೈಕೋರ್ಟ್‌ ಷರತ್ತಿನ ಅನುಮತಿ ನೀಡಿದೆ.

Advertisement

ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ-1976ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ದೇಶನ ನೀಡುವಂತೆ ಕೋರಿ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್‌ವಿರಾನ್‌ಮೆಂಟ್‌ ಟ್ರಸ್ಟ್‌ 2018ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ವೇಳೆ ಬಿಎಂಆರ್‌ಸಿಎಲ್‌ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ಮಧ್ಯಂತರ ಮನವಿ ಸಲ್ಲಿಸಿ ಮೆಟ್ರೋ ಕಾಮಗಾರಿ ವೇಳೆ ಮರಗಳನ್ನು ತೆರವುಗೊಳಿಸುವ ಹಾಗೂ ಸ್ಥಳಾಂತರಿಸುವ ವಿಚಾರದಲ್ಲಿ ಹೈಕೋರ್ಟ್‌ ನೇಮಕ ಮಾಡಿರುವ ತಜ್ಞರ ಸಮಿತಿಯ ಶಿಫಾರಸು ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅದರಂತೆ, ಆಗರದಿಂದ ಇಬ್ಬಲೂರು ಮಾರ್ಗದ ಎಚ್‌ಎಸ್‌ಆರ್‌ ಲೇಔಟ್‌ ಮೆಟ್ರೋ ರೈಲು ನಿಲ್ದಾಣದ ಆಗಮನ ಮತ್ತು ನಿರ್ಗಮನ ಭಾಗದಲ್ಲಿ ಬರುವ 20 ಮರಗಳನ್ನು ಸ್ಥಳಾಂತರಿಸಲು 41 ಮರಗಳನ್ನು ತೆರವುಗೊಳಿಸಲು ಅನುಮತಿ ನೀಡಿ ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2024ರ ಜುಲೈ20ರಂದು “ಅಧಿಕೃತ ಜ್ಞಾಪನಾ’ ಹೊರಡಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಅದೇ ರೀತಿ ತೆರುವುಗೊಳಿಸಲು ಅನುಮತಿಸಿರುವ 41 ಮರಗಳ ಪೈಕಿ 21 ಮರಗಳು ಯೋಜನಾ ಪ್ರದೇಶದಲ್ಲಿ ಬರಲಿವೆ. ಇನ್ನುಳಿದ 20 ಮರಗಳು ಒಆರ್‌ಆರ್‌ ನಂಬರ್‌ 140ರಿಂದ ಒಆರ್‌ಆರ್‌ ನಂಬರ್‌ 175ರ ಮಧ್ಯೆ ಹೊರವರ್ತುಲ ರಸ್ತೆಯ ಎಡ ಮತ್ತು ಬಲಬದಿ ಬರಲಿವೆ. ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಅಧಿಕೃತ ಜ್ಞಾಪನಾ (ಅಫಿಷಿಯಲ್‌ ಮೆಮೊರಾಂಡಮ್‌) ಆಧರಿಸಿ ಮುಂದುವರಿಯಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಬೇಕು ಎಂದು ಕೋರಿದರು.

ಇದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ, ಹೈಕೋರ್ಟ್‌ ಈವರೆಗೆ ನೀಡಿರುವ ಆದೇಶಗಳನ್ನು ಮತ್ತು ತಜ್ಞರ ಸಮಿತಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂಬುದು ನಮ್ಮ ಕಾಳಜಿಯಾಗಿದೆ. ಸ್ಥಳಾಂತರಗೊಳಿಸಿದ ಮರಗಳನ್ನು ಎಲ್ಲಿ ಸ್ಥಳಾಂತರಿಸಲಾಗಿದೆ, ಅವುಗಳು ವಸ್ತುಸ್ಥಿತಿ ಮತ್ತು ಬಾಳಿಕೆ ಹಾಗೂ ತೆರವುಗೊಳಿಸಿದ ಮರಗಳಿಗೆ ಒಂದು ಮರಕ್ಕೆ ಪರ್ಯಾಯವಾಗಿ 10 ಮರಗಳನ್ನು ನೆಡಬೇಕು ಎಂದು ಹೈಕೋರ್ಟ್‌ ಹೇಳಿದೆ. ಇದರ ಬಗ್ಗೆ ಪ್ರತಿ ಮೂರು ತಿಂಗಳಿಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಆದರೆ, ಕಳೆದ ಒಂದು ವರ್ಷದಿಂದ ಅಂತಹ ವರದಿ ಸಲ್ಲಿಸಲಾಗಿಲ್ಲ. ಇದನ್ನು ನ್ಯಾಯಾಲಯ ಗಮನಿಸಬೇಕು ಎಂದು ಅರ್ಜಿದಾರರ ಪರ ವಕೀಲ ಪ್ರದೀಪ್‌ ನಾಯಕ್‌ ನ್ಯಾಯಪೀಠಕ್ಕೆ ತಿಳಿಸಿದರು.

Advertisement

ಹೈಕೋರ್ಟ್‌ ಆದೇಶಗಳನ್ನು, ತಜ್ಞರ ಸಮಿತಿ ಶಿಫಾರಸು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅರ್ಜಿದಾರರ ಪರ ವಕೀಲರು ಪ್ರತಿ 3 ತಿಂಗಳಿಗೆ ವರದಿ ಸಲ್ಲಿಸುವ ವಿಚಾರ ಪ್ರಸ್ತಾಪಿಸಿದ್ದಾರೆ. ಆ ವರದಿಯನ್ನೂ ಸಲ್ಲಿಸಲಾಗುವುದು ಎಂದು ಧ್ಯಾನ್‌ ಚಿನ್ನಪ್ಪ ಹೇಳಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮರ ಅಧಿಕಾರಿ ಹಾಗೂ ಬಿಬಿಎಂಪಿ ಉಪ ಸಂರಕ್ಷಣಾಧಿಕಾರಿ 2024ರ ಜುಲೈ 20ರಂದು ಹೊರಡಿಸಿರುವ ಅಧಿಕೃತ ಜ್ಞಾಪನಾದಂತೆ 20 ಮರಗಳನ್ನು ಸ್ಥಳಾಂತರಿಸಲು ಮತ್ತು 41 ಮರಗಳನ್ನು ತೆರವುಗೊಳಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿತು.

ಇದೇ ವೇಳೆ ಮರ ಅಧಿಕಾರಿ, ತಜ್ಞರ ಸಮಿತಿ ವಿಧಿಸಿ ರುವ ಷರತ್ತುಗಳು ಮತ್ತು ಕಾಲ ಕಾಲಕ್ಕೆ ಹೈಕೋರ್ಟ್‌ ಹೊರಡಿಸಿರುವ ಆದೇಶ, ನಿರ್ದೇಶನಗಳನ್ನು ಬಿಎಂಆರ್‌ಸಿಎಲ್‌ ಪಾಲಿಸುವುದರ ಮೇಲೆ ಈ ಅನುಮತಿ ಅವಲಂಬಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next