Advertisement

ಐತಿಹಾಸಿಕ ಬಣ್ಣ ದೋಕುಳಿ ಸಂಪನ್ನ

01:06 PM Mar 21, 2022 | Team Udayavani |

ಬಾಗಲಕೋಟೆ: ಮೂರು ದಿನಗಳ ಐತಿಹಾಸಿಕ ಬಾಗಲಕೋಟೆ ಬಣ್ಣದೋಕುಳಿ ರವಿವಾರ ಇಳಿ ಸಂಜೆ ಅದ್ಧೂರಿಯಾಗಿ ಸಂಪನ್ನಗೊಂಡಿದೆ.

Advertisement

ಕಳೆದ ಮೂರು ದಿನಗಳಿಂದ ನಡೆದ ರಂಗಿನ ಓಕುಳಿ ಕೊನೆಯ ದಿನ ಇಡೀ ನಗರಕ್ಕೆ ಅಕ್ಷರಶಃ ಬಣ್ಣದ ಮಜ್ಜನವಾಗಿತ್ತು. ಯುವಕರ ಮಧ್ಯ ಜಲಯುದ್ಧದಂತೆ ಕೊನೆಯ ದಿನದ ಬಣ್ಣದೋಕುಳಿ ಭಾಸವಾಗಿತ್ತು. 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಮತ್ತು ಬಂಡಿಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್‌ಗ‌ಳು ಗಾಡಿಯಲ್ಲಿ ಯುವಕರು ಯುದ್ಧಕ್ಕೆ ಹೋಗುವಂತೆ ಸಜ್ಜಾಗಿ ರಂಗಿನಾಟಕ್ಕೆ ಬಂದರು.

ಮೊದಲ ದಿನ ವಿದ್ಯಾಗಿರಿ ನವನಗರ ಎರಡನೇ ದಿನ ಹಳೆಯ ಬಾಗಲಕೋಟೆ ಕಿಲ್ಲಾ, ಮೂರನೇ ದಿನ ವೆಂಕಟಪೇಟೆ, ಜೈನ್‌ ಪೇಟೆ, ಹಳೇಪೇಟೆಗಳಲ್ಲಿ ಮತ್ತು ಕೊನೆಯ ದಿನ ರವಿವಾರ ಇಡೀ ಬಾಗಲಕೋಟೆಯ ಜನ ಕಿಲ್ಲಾ ಪ್ರದೇಶದಲ್ಲಿ ಒಟ್ಟಾಗಿ ಸೇರಿ ಬಣ್ಣದ ಓಕುಳಿಯಾಡಿದರು. ಇದುವೇ ಬಾಗಲಕೋಟೆಯ ಹೋಳಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಹಾಗಾಗಿ ಈ ವರ್ಷವೂ ಅಷ್ಟೇ ಅದ್ಧೂರಿಯಾಗಿ ಬಾಗಲಕೋಟೆ ಜನರು ಬಣ್ಣದ ಓಕುಳಿ ಆಚರಿಸಿದರು. ಧರ್ಮಯ, ಜಾತಿ, ವಯಸ್ಸಿನ ಬೇಧ ಮರೆತು ಬಣ್ಣದ ಓಕುಳಿಯಲ್ಲಿ ನಿರತವಾಗಿದ್ದ ಜನಸಮೂಹದ ಸಂಭ್ರಮ ಮುಗಿಲು ಮುಟ್ಟಿತ್ತು. ಇಡೀ ನಗರಕ್ಕೆ ನಗರವೇ ತನ್ನ ವಹಿವಾಟಿನ ಸ್ವಯಂ ಘೋಷಿತ ಬಂದ್‌ ಮಾಡಿ ಬಣ್ಣದ ಆಟಕ್ಕಿಳಿದಿತ್ತು. ಮುಂಗಾರು ಮೋಡಗಳು ರಭಸದಿಂದ ಸಾಗುತ್ತ ಮಳೆ ಸುರಿಸಿ ಹೋದಂತ ಅನುಭವ. ಎಲ್ಲೆಲ್ಲೂ ರಂಗಿನ ಚಿತ್ತಾರ, ಭೂಮಿಗೆ ಹೊಂಗಿರಣ ಹೊದಿಸಿದ ಹಿಗ್ಗು. ಬಣ್ಣ ತುಂಬಿದ ಬ್ಯಾರಲ್‌, ಸಿಂಟೆಕ್ಸ್‌ ಗಳನ್ನು ಹೊತ್ತ ಟ್ರ್ಯಾಕ್ಟರ್‌, ಚಕ್ಕಡಿಗಳು ಯುದ್ಧದ ರಥಗಳು ಸಾಗಿದಂತೆ ಜನರ ಮಧ್ಯ ಸಾಗುತ್ತಿದ್ದವು.

ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದ ನಾಗರಿಕರು ಏಕಕಾಲಕ್ಕೆ ಪರಸ್ಪರ ಬಣ್ಣ ಎರಚುವ ಕಾಳಗಕ್ಕಿಳಿದಾಗ ಬಣ್ಣದ ಮಳೆ ಸುರಿಯುತ್ತಿದೆಯೋ, ಬಣ್ಣದ ಹೊಳೆಯೇ ಹರಿಯುತ್ತಿದೆಯೋ ಎನ್ನುವಂತೆ ಭಾಸವಾಗುತ್ತಿತ್ತು. ನೆಲ, ಗಲ್ಲಿ, ಓಣಿಯ ಮನೆ, ಅಂಗಡಿ-ಮುಂಗಟ್ಟುಗಳು ಹೋಳಿ ಬಣ್ಣದಲ್ಲಿ ಮಜ್ಜನಗೈದವು.

Advertisement

ಈ ಓಕುಳಿ ನೋಡಲೆಂದೇ ನಗರಕ್ಕೆ ನಗರವೇ ಎದ್ದು ಬಂದಂತಿತ್ತು. ಮನೆ ಮಾಳಿಗೆಗಳಲ್ಲೆಲ್ಲ ಮಹಿಳೆಯರು ಮಕ್ಕಳಾದಿಯಾಗಿ ಜನಜಾತ್ರೆಯೇ ನೆರೆದಿತ್ತು. ಬೃಹತ್‌ ಸಂಖ್ಯೆಯಲ್ಲಿ ಮಹಿಳೆಯರು ನೋಡಿ ಸಂಭ್ರಮಿಸಿದರು. ಶಿಳ್ಳೆ, ಕೇಕೆ, ಕುಣಿದೊಂದಿಗೆ ಸಂಭ್ರಮಿಸುತ್ತ ಬಣ್ಣ ಎರಚುತ್ತ ಸಾಗಿದ ಯುವ ಸಮೂಹವನ್ನು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿದ್ದುದು ಸಾಮಾನ್ಯವಾಗಿತ್ತು. ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬದ ಬಣ್ಣದಾಟದಲ್ಲಿ ಮೂರು ದಿನದ ರಂಗೀನಾಟದಲ್ಲಿ ಬಾಗಲಕೋಟೆ ಜನರು ಎಲ್ಲ ಜಾತಿ, ದ್ವೇಷವನ್ನು ಮರೆತು ಭಾಗವಹಿಸಿ ಭಾವೈಕತೆಯಿಂದ ಪ್ರೀತಿಯಿಂದ ಪ್ರೀತಿಯನ್ನು ಹಂಚಿ ಹೋಳಿ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next