ಇಸ್ಲಾಮಾಬಾದ್: ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿ ಭಾಗದಲ್ಲಿರುವ ಐತಿಹಾಸಿಕ ಹಿಂದೂ ದೇವಾಲಯ “ಖೈಬರ್ ದೇವಸ್ಥಾನ” ನವನ್ನು ವರ್ಷದ ಆರಂಭದಲ್ಲಿ ಧ್ವಂಸಗೊಳಿಸುವ ಮೂಲಕ ವಾಣಿಜ್ಯ ಸಂಕೀರ್ಣ ಕಟ್ಟಲು ಅನುವು ಮಾಡಿಕೊಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ಪಿಟಿಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿ ಆರಂಭಗೊಂಡಿರುವುದಾಗಿ ತಿಳಿಸಿದೆ. ಈ ದೇವಾಲಯವನ್ನು ನೋಡಿಕೊಳ್ಳುತ್ತಿದ್ದ ಕುಟುಂಬ ಸದಸ್ಯರು ಭಾರತಕ್ಕೆ ವಲಸೆ ಹೋದ ನಂತರ 1947ರಿಂದ ದೇವಸ್ಥಾನವನ್ನು ಮುಚ್ಚಲಾಗಿತ್ತು.
ಈ ದೇವಾಲಯವು ಖೈಬರ್ ಜಿಲ್ಲೆಯ ಗಡಿ ಪಟ್ಟಣವಾದ ಲಾಂಡಿ ಕೋಟಾಲ್ ಬಜಾರ್ ಪ್ರದೇಶದಲ್ಲಿತ್ತು. ತಿಂಗಳುಗಳ ಹಿಂದೆ ದೇವಾಲಯವನ್ನು ಧ್ವಂಸಗೊಳಿಸಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಆದರೆ ಆ ಪ್ರದೇಶದಲ್ಲಿ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂಬುದನ್ನು ಪಾಕಿಸ್ತಾನ ಅಧಿಕಾರಿಗಳು ನಿರಾಕರಿಸಿದ್ದು, ಕಾನೂನಿನ ಪ್ರಕಾರ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದೆ.
ಬುಡಕಟ್ಟು ಪತ್ರಕರ್ತ ಇಬ್ರಾಹಿಂ ಶಿನ್ವಾರಿ ಅವರ ಪ್ರಕಾರ, ಲಾಂಡಿ ಕೋಟಾಲ್ ಬಜಾರ್ ಪ್ರದೇಶದಲ್ಲಿ ಐತಿಹಾಸಿಕ ದೇವಾಲಯ ಇತ್ತು. ಆದರೆ ಅಲ್ಲಿದ್ದ ಹಿಂದೂ ಕುಟುಂಬ 1947ರಲ್ಲಿ ಭಾರತಕ್ಕೆ ವಲಸೆ ಹೋದ ನಂತರ ಮುಚ್ಚಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆ ನಂತರ ಲಾಂಡಿ ಕೋಟಾಲ್ ಪ್ರದೇಶದಲ್ಲಿದ್ದ ಹಿಂದೂ ದೇವಾಲಯವನ್ನು ಭಾಗಶಃ ಧ್ವಂಸಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.