Advertisement

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಇಂದಿನಿಂದ

12:02 PM Dec 03, 2018 | |

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಸೋಮವಾರ (ಡಿ.3) ಅಧಿಕೃತ ಚಾಲನೆ ದೊರೆಯಲಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರ ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ನಿರೀಕ್ಷೆಯಿದ್ದು, ಪರಿಷೆಯಲ್ಲಿ ಸ್ವತ್ಛತೆ ಕಾಪಾಡುವಂತೆ ಸಾರ್ವಜನಿಕರನ್ನು ಮೇಯರ್‌ ಕೋರಿದ್ದಾರೆ.

Advertisement

ಪರಿಷೆ ಹಿನ್ನೆಲೆಯಲ್ಲಿ ಇಡೀ ದಿನ ಸಾವಿರಾರು ಮಂದಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸೋಮವಾರ ಬೆಳಗ್ಗೆ ದೊಡ್ಡ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 9.30ಕ್ಕೆ ದೊಡ್ಡ ಬಸವಣ್ಣನಿಗೆ ಪೂಜೆ ಸಲ್ಲಿಸಿ ಕಡಲೆಕಾಯಿ ತುಲಾಭಾರ ನಡೆಸಲಾಗುತ್ತದೆ. ಬಳಿಕ ಪ್ರಸಾದ ರೂಪದಲ್ಲಿ ಕಡಲೆಕಾಯಿ ಹಂಚಲಾಗುತ್ತದೆ. ಎರಡು ದಿನ ನಡೆಯುವ ಪರಿಷೆಗೆ ಲಕ್ಷಾಂತರ ಜನರು ಭೇಟಿ ನೀಡಲಿದ್ದು, ಕೋಟ್ಯಂತರ ರೂ. ವಹಿವಾಟು ನಡೆಸುವ ನಿರೀಕ್ಷೆ ಇದೆ.

ಸೋಮವಾರ ಹಾಗೂ ಮಂಗಳವಾರ ಭಾರೀ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಭೇಟಿ ನೀಡಲಿದ್ದು, ಯಾವುದೇ ಅವಘಡ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ 300ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ 30 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸವನಗುಡಿಯಲ್ಲಿ ಕಳೆದ ಎರಡು ದಿನಗಳಿಂದಲೇ ಜಾತ್ರೆ ವಾತಾವರಣ ನಿರ್ಮಾಣವಾಗಿದ್ದು, ಭಾನುವಾರ ಸಾಕಷ್ಟು ಜನ ದೊಡ್ಡ ಬಸವಣ್ಣ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರಲ್ಲದೇ, ಕಡಲೆಕಾಯಿ ಸವಿದು ಸಂಭ್ರಮಿಸಿದರು. ರಾಮಕೃಷ್ಣ ವೃತ್ತದಿಂದ ಹಿಡಿದು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನವರೆಗೆ ರಸ್ತೆಯುದ್ಧಕ್ಕೂ ವ್ಯಾಪಾರ, ವಹಿವಾಟು ಜೋರಾಗಿತ್ತು.

ಫ್ಯಾಷನ್‌ ವಸ್ತುಗಳೇ ಹೆಚ್ಚು: ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ರೈತರು ತಾವು ಬೆಳೆದ ಕಡಲೆಕಾಯಿ ತಂದು ದೇವರಿಗೆ ಅರ್ಪಿಸಿದ ನಂತರ ವಹಿವಾಟು ನಡೆಸುತ್ತಾರೆ ಎಂಬುದು ಪ್ರತೀತಿ. ಪರಿಷೆಯಲ್ಲಿ ರೈತರೊಂದಿಗೆ ವ್ಯಾಪಾರಿಗಳು ಹೆಚ್ಚು ಸಂಖ್ಯೆಯಲ್ಲಿದ್ದುದು ಕಂಡುಬಂತು. ಜತೆಗೆ ಪರಿಷೆ ಆವರಣದ ಕಡಲೆಕಾಯಿ ವ್ಯಾಪಾರಿಗಳ ಜತೆಗೆ ಮಕ್ಕಳ ಆಟಿಕೆಗಳು, ಬಟ್ಟೆ, ಫ್ಯಾಷನ್‌ ವಸ್ತುಗಳ ಮಾರಾಟಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. 

Advertisement

ಎರಡು ದಿನ ಸಂಚಾರ ಬಂದ್‌: ರಾಮಕೃಷ್ಣ ಆಶ್ರಮದಿಂದ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜುವರೆಗಿನ ರಸ್ತೆಯಲ್ಲಿ ಸೋಮವಾರ, ಮಂಗಳವಾರ ವಾಹನ ಸಂಚಾರ ನಿರ್ಬಂಧಿಸಲಾಗುತ್ತದೆ. ಪರಿಷೆಗೆ ಆಗಮಿಸುವವರ ಅನುಕೂಲಕ್ಕಾಗಿ ಸಮೀಪದ ಎಪಿಎಸ್‌ ಕಾಲೇಜು ಆವರಣ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 

ಪರಿಷೆಯಲ್ಲಿ ಸ್ವತ್ಛತೆ ಕಾಪಾಡಿ – ಮೇಯರ್‌: ಪರಿಷೆಗೆ ಭಾರೀ ಸಂಖ್ಯೆಯಲ್ಲಿ ಜನ ಭೇಟಿ ನೀಡುವುದರಿಂದ ಈ ದಿನಗಳಲ್ಲಿ ನಿತ್ಯ ನಾಲ್ಕೈದು ಬಾರಿ ರಸ್ತೆಗಳನ್ನು ಸ್ವತ್ಛಗೊಳಿಸಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರು ಪರಿಷೆಯಲ್ಲಿ ಸ್ವತ್ಛತೆ ಕಾಪಾಡಬೇಕು ಎಂದು ಮೇಯರ್‌ ಗಂಗಾಂಬಿಕೆ ಕೋರಿದ್ದಾರೆ. ಪರಿಷೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯ ವಿಲೇವಾರಿಗಾಗಿ ಈಗಾಗಲೇ ಪಾಲಿಕೆಯಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಇದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ತ್ಯಾಜ್ಯ ಸಂಗ್ರಹ ಬುಟ್ಟಿಗಳನ್ನು ಇರಿಸಲಾಗಿದ್ದು, ಸಾರ್ವಜನಿಕರು ಕಡಲೆಕಾಯಿ ಸಿಪ್ಪೆ, ಐಸ್‌ಕ್ರೀಮ್‌ ಪೇಪರ್‌ ಹೀಗೆ ಇತರೆ ವಸ್ತು ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆಯದೆ, ಕಸದ ಡಬ್ಬಿಗಳಿಗೆ ಹಾಕಬೇಕು. ಪ್ಲಾಸ್ಟಿಕ್‌ ಚೀಲಕ್ಕೆ ಬದಲಾಗಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next