ಸಿಂಧನೂರು: ನಗರದಲ್ಲಿ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಧ್ವಜದೊಂದಿಗೆ ಪಾಲ್ಗೊಂಡು ಐತಿಹಾಸಿಕವೆಂಬಂತೆ ಬೃಹತ್ ತಿರಂಗಾ ರ್ಯಾಲಿಯನ್ನು ಶುಕ್ರವಾರ ಯಶಸ್ವಿಗೊಳಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ತಾಲೂಕಾಡಳಿತದಿಂದ ತಿರಂಗಾ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಸಕ ವೆಂಕಟರಾವ್ ನಾಡಗೌಡ ತಹಶೀಲ್ದಾರ್ ಕಚೇರಿ ಮೈದಾನದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ತಹಶೀಲ್ದಾರ್ ಅರುಣ್ ದೇಸಾಯಿ , ಪೌರಾಯುಕ್ತ ಮಂಜುನಾಥ ಗುಂಡೂರು, ತಾ.ಪಂ.ಇಒ ಲಕ್ಷ್ಮೀದೇವಿ ಸೇರಿದಂತೆ ಎಲ್ಲ ಅಧಿಕಾರಿಗಳು ರ್ಯಾಲಿಯಲ್ಲಿ ಪಾಲ್ಗೊಂಡರು.
ಮೊಳಗಿದ ಕಹಳೆ: ಏಕಕಾಲಕ್ಕೆ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಿನಿ ವಿಧಾನಸೌಧ ಎದುರು ವಂದೇ ಮಾತರಂ ಹಾಡಿಗೆ ಧ್ವನಿಗೂಡಿಸಿದರು. ವಿದ್ಯಾರ್ಥಿ ಸಮೂಹ ನೋಡಿ ಎಲ್ಲೆಡೆ ಹರ್ಷ ವ್ಯಕ್ತವಾಯಿತು.
ಮಹಾತ್ಮಗಾಂಧಿ ವೃತ್ತದ ಮೂಲಕ ರ್ಯಾಲಿಗೆ ವಿದ್ಯಾರ್ಥಿಗಳನ್ನು ಸರದಿಯಲ್ಲಿ ಕಳಿಸಲಾಯಿತು. 3 ಕಿ.ಮೀ ಉದ್ದಕ್ಕೂ ತಿರಂಗಾ ಧ್ವಜ ಹಿಡಿದ ವಿದ್ಯಾರ್ಥಿಗಳು ಸಾಲು ಹಬ್ಬಿದ್ದರಿಂದ ನಗರವನ್ನು ಸುತ್ತುವರಿದಂತಾಗಿತ್ತು.
ತಹಶೀಲ್ದಾರ್ ಕಚೇರಿಯಿಂದ ಆರಂಭವಾದ ಜಾಥಾ ಮರಳಿ ತಹಶೀಲ್ ಕಚೇರಿ ತಲುಪುವಷ್ಟರಲ್ಲೇ ಎರಡು ತಾಸಾಗಿತ್ತು. ರ್ಯಾಲಿ ಪೂರ್ಣಗೊಳ್ಳುವ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.