Advertisement

ಅಳಿದು ಹೋದ ಐತಿಹಾಸಿಕ ಮಲ್ಲಾರು ಕೋಟೆ !

02:16 AM Apr 21, 2021 | Team Udayavani |

ಕಾಪು: ಸರಕಾರ, ಜಿಲ್ಲಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪುರಾತತ್ವ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ನಂದಾವರ ಮತ್ತು ಉದ್ಯಾವರ ಅರಮನೆ – ಕೋಟೆಯ ರೀತಿಯಲ್ಲೇ ಕಾಪು ತಾಲೂಕಿನ ಐತಿಹಾಸಿಕ ಮಲ್ಲಾರು ಕೋಟೆಯೂ ಕೂಡ ಅಳಿದು ಹೋಗಿದೆ. ಅದರೊಂದಿಗೆ ಮಲ್ಲಾರು ಕೋಟೆ ಪ್ರದೇಶದಲ್ಲಿ ಐತಿಹಾಸಿಕ ಕುರುಹಾಗಿರುವ ನಿನ್ನಿಕೆರೆ/ನಂದಿಕೆರೆಗೂ ನಾಶದ ಭೀತಿ ಎದುರಾಗಿದೆ.

Advertisement

ವಿಜಯನಗರ ಅರಸರ ಕಾಲದ್ದು
ವಿಜಯನಗರ ರಾಜರ ಆಡಳಿತ ಕಾಲದ್ದು ಎನ್ನಲಾಗುತ್ತಿದ್ದ ಮಲ್ಲಾರುವಿನ ಕೋಟೆ ಹದಿನಾರು ಎಕರೆಗೂ ಅಧಿಕ ಸ್ಥಳದಲ್ಲಿ ವ್ಯಾಪಿಸಿತ್ತು. ಈಗ ಕೋಟೆ ಕಲ್ಲುಗಳೂ ಕಾಣಿಸುತ್ತಿಲ್ಲ. ಇಲ್ಲಿನ ದಿಬ್ಬಗಳನ್ನು ನೆಲ ಸಮಗೊಳಿಸಲಾಗಿದ್ದು, ಐತಿಹಾಸಿಕ ವಸ್ತುಗಳೂ ನಾಶ ವಾಗಿವೆ. ಈಗ ಕೆರೆಯ ಕುರುಹು ಮಾತ್ರ ಕಾಣುತ್ತಿದೆ.

ಶಾಲಿವಾಹನ ಶಕ 1665ನೇ ರುಧಿರೋದ್ಗಾರಿ ಸಂವತ್ಸರದಲ್ಲಿ ಕಾಪುವಿನ ಮರ್ದ ಹೆಗ್ಗಡೆ ಮಲ್ಲಾರಿನ ಕೋಟೆಯನ್ನು ಪುನರ್‌ ನಿರ್ಮಿಸಿದ ಬಗ್ಗೆ ಮತ್ತು ಕಾಪು ಕಡಲ ಕಿನಾರೆಯಲ್ಲಿರುವ ಬೃಹತ್‌ ಬಂಡೆಯ ಮೇಲೆ ಇನ್ನೊಂದು ಕೋಟೆ (ಮನೋಹರ ಗಢ) ಕಟ್ಟಿಸಿದ ಬಗ್ಗೆ ಇತಿಹಾಸಕಾರರಾದ ಎಂ. ಗಣಪತಿ ರಾವ್‌ ಐಗಳ್‌ ಅವರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಗ್ರಂಥದಲ್ಲಿ ಉಲ್ಲೇಖವಿದೆ.

ಖಡ್ಗ ಹೊರತಾಗಿ ಉಳಿದಿರುವುದು ನಂದಿಕೆರೆ ಅಥವಾ ನಿನ್ನಿಕೆರೆ. ಈ ಕೆರೆಯನ್ನು ಪ್ರಸ್ತುತ ಪೂರ್ಣವಾಗಿ ಗಿಡಗಂಟಿ ಆವರಿಸಿದೆ ಇಲ್ಲೊಂದು ಕೆರೆ ಇದೆ ಎನ್ನುವುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲದಂತಾಗಿದೆ.

ಮಾಯವಾದ ಪ್ರವಾಸಿ ಸ್ಥಳ
ಕಳೆದ ನಾಲ್ಕೈದು ದಶಕದ ಹಿಂದಿನವರೆಗೂ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಈ ಕೋಟೆಯನ್ನು ತೋರಿಸುತ್ತಿದ್ದರು ಎಂಬ ವಿಷಯವನ್ನು ಗ್ರಾಮದ ಹಿರಿಯರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಕಾಪು ಪುರಸಭೆ, ಉಡುಪಿ ಜಿಲ್ಲಾಡಳಿತ, ಪುರಾತತ್ವ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಕೋಟೆಯ ಭಾಗಗಳು, ನಂದಿಕೆರೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ.

Advertisement

ಖಡ್ಗಕ್ಕೆ ಕೋಟೆಮನೆಯಲ್ಲಿ ಪೂಜೆ
1740ರ ದಶಕದ ಅವಧಿಯಲ್ಲಿ ಕೆಳದಿ ಸಂಸ್ಥಾನದ ಅಧೀನಕ್ಕೆ ಒಳಪಟ್ಟ ಬಳಿಕ, ಮಲ್ಲಾರಿನ ಕೋಟೆಯು ಬಸಪ್ಪ ನಾಯಕನ ಆಡಳಿತದಲ್ಲಿದ್ದರೆ, ಆನಂತರ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಿತ್ತು. ಬಳಿಕ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಟಿಪ್ಪು ಕಾಲದ ಖಡ್ಗವೊಂದು ಇಂದಿಗೂ ಉಳಿದಿದ್ದು, ಇದು ಕೋಟೆ ಬಳಿಯ ಕಾಪು ಶ್ರೀ ಮಾರಿಯಮ್ಮ ದೇವಿಯ ಆದಿಸ್ಥಳ (ತ್ರಿಶಕ್ತಿ ಸನ್ನಿಧಿ)ದ ಮನೆಯಲ್ಲಿ ಕೋಟೆ ಮಾರಿಯೊಂದಿಗೆ ಗುಡಿಯಲ್ಲಿದೆ. ಇದಕ್ಕೆ ಆಯುಧ ಪೂಜೆಯ ದಿನದಂದು ಪೂಜೆ ನಡೆಸಲಾಗುತ್ತಿದೆ.

ಪುನರುತ್ಥಾನಕ್ಕೆ ಪ್ರಯತ್ನಿಸಿ
ಮಲ್ಲಾರು ಕೋಟೆಗೆ ಸಂಬಂಧಪಟ್ಟ ಜಮೀನು ಈಗ ಅನ್ಯರ ಪಾಲಾಗಿದೆ. ಇಲ್ಲಿನ ಪುರಾತನ ನಂದಿಕೆರೆ ಪುನರುತ್ಥಾನಕ್ಕೆ ಸ್ಥಳೀಯಾಡಳಿತ ಸಂಸ್ಥೆ ಯೋಜನೆ ರೂಪಿಸಬೇಕಿದೆ.
-ದಯಾನಂದ ಸೇರ್ವೆಗಾರ್‌ ಕೋಟೆಮನೆ, ಕಾಪು ಹಳೇ ಮಾರಿಗುಡಿ ದರ್ಶನ ಪಾತ್ರಿ

ಉಳಿವಿಗೆ ಯತ್ನ
ಕಾಪುವಿನ ಐತಿಹಾಸಿಕ ನಂದಿಕೆರೆ ಸರಕಾರಿ ಜಾಗದಲ್ಲಿ ಇದೆಯೋ ಅಥವಾ ಖಾಸಗಿ ಜಾಗದಲ್ಲಿದೆಯೋ ಎನ್ನುವುದರ ಬಗ್ಗೆ ಕಡತಗಳಲ್ಲಿ ಪರಿಶೀಲಿಸಿ ತಿಳಿದುಕೊಳ್ಳಬೇಕಿದೆ. ಸರಕಾರಿ ಕೆರೆಯಾಗಿದ್ದರೆ ಮುತುವರ್ಜಿ ವಹಿಸಿ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು. ಅದೇ ರೀತಿಯಲ್ಲಿ ಕೌನ್ಸಿಲ್‌ನ ಸಹಕಾರದೊಂದಿಗೆ ಕಾಪುವಿನ ಐತಿಹಾಸಿಕ ಪ್ರದೇಶಗಳನ್ನು ಉಳಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ.
-ವೆಂಕಟೇಶ ನಾವಡ , ಮುಖ್ಯಾಧಿಕಾರಿ, ಕಾಪು ಪುರಸಭೆ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next