ಆನೇಕಲ್: ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಅತಿದೊಡ್ಡ ಹೆನ್ನಾಗರ ಕೆರೆ ಅವಸಾನದತ್ತ ಸಾಗಿದೆ. ಕೆರೆಗೆ ಸುತ್ತಲಿನ ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ಹಾಗೂ ಕೊಳಕು ನೀರು ಸೇರುತ್ತಿದ್ದು, ವಿಷ ಮಿಶ್ರಿತವಾಗಿ ಮಾರ್ಪಟ್ಟಿದೆ. ಹೀಗೆ ಮುಂದುವರಿದರೆ ಕೆರೆ ಸಂಪೂರ್ಣ ವಿಷಪೂರಿತ ಹಾಗೂ ಕೊಳಕು ನೀರಿನಿಂದ ತುಂಬಿಕೊಳ್ಳುತ್ತದೆ. ಇನ್ನಾದರೂ ಅಧಿಕಾರಿಗಳು ಅಥವಾ ಸಂಬಂಧಿಸಿದವರು ಎಚ್ಚೆತ್ತುಕೊಂಡು, ಕೆರೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸಿರು ಬಣ್ಣಕ್ಕೆ ತಿರುಗುತ್ತಿರುವ ನೀರು: ಹೆನ್ನಾಗರ ಕೆರೆಯನ್ನು ತಾಲೂಕಿನ ಜನರು ವರ್ಷಕ್ಕೊಮ್ಮೆ ಪೂಜಿಸಿ, ಆರಾಧಿಸುತ್ತಿದ್ದರು. ಇದು ಈ ಭಾಗದ ಜನರ ಹಾಗೂ ಜಾನುವಾರುಗಳಿಗೆ ಆಸರೆ ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿತ್ತು. ಆದರೆ ಕೆರೆಗೆ ಈಗ ಸುತ್ತಲಿನ ಕೈಗಾರಿಕೆಗಳ ಮಲೀನ ನೀರು ಸೇರಿ ಕಲುಷಿತವಾಗಿದೆ. ಹೀಗಾಗಿ ಜನರು-ಜಾನುವಾರುಗಳ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಹೀಗೆ ಮುಂದುವರಿದರೆ ಬೆಳ್ಳಂದೂರು ಕೆರೆ ಪರಿಸ್ಥಿತಿಯೇ ಹೆನ್ನಾಗರ ಕೆರೆಗೂ ಬಂದೊದಗುತ್ತದೆ. ಸದ್ಯ ಕೆರೆ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ಕೊಳಚೆ ನೀರಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೆರೆಗೆ ಕೈಗಾರಿಕೆಗಳ ಮಾಲೀನ್ಯ ನೀರು: ಕೈಗಾರಿಕೆಗಳಿಂದ ಕಲುಷಿತ ನೀರನ್ನು ಟ್ಯಾಂಕರ್‌ಗಳಲ್ಲಿ ರಾತ್ರೋ ರಾತ್ರಿ ತಂದು ಬಿಡಲಾಗುತ್ತಿದೆ. ಇನ್ನೂ ಕೆಲವು ಕಾರ್ಖಾನೆಗಳಲ್ಲಿ ಕಲುಷಿತ ನೀರನ್ನು ಕೈಗಾರಿಕೆ ಒಳಗೆ ಟ್ಯಾಂಕ್ ನಿರ್ಮಿಸಿಕೊಂಡು ಸಂಗ್ರಹಿಸಲಾಗುತ್ತದೆ. ಸ್ವಲ್ಪ ಮಳೆ ಬಂದರೆ ಸಾಕು ಮಳೆಯ ನೀರನ್ನೇ ಬಂಡವಾಳ ಮಾಡಿಕೊಂಡು ಕಲುಷಿತ ನೀರನ್ನು ಶುದ್ಧಗೊಳಿಸದೇ ಮಾಡದೇ ಮಳೆ ನೀರಿನ ಜೊತೆ ಕೆರೆಗೆ ಹರಿ ಬಿಡುತ್ತಾರೆ. ಈ ಬಗ್ಗೆ ಹಲವು ಬಾರಿ ಪಂಚಾಯತಿ ಅಧಿಕಾರಿಗಳು ಕಾರ್ಖಾನೆಗಳ ಮಾಲಿಕರಿಗೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆರೆ ಗಬ್ಬು ನಾತ ಬೀರುತ್ತಿದೆ. ಜತೆಗೆ ಕೆರೆಯಲ್ಲ ಸುತ್ತಲೂ ನೊರೆ ತುಂಬಿಕೊಂಡಿದೆ ಎಂದು ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸಿದ್ದಾರೆ.
ವಿಷಕಾರಿಯಾಗಿರುವ ಕೆರೆ: ಕೈಗಾರಿಕೆಗಳ ಮಲೀನ ನೀರಿನಿಂದಾಗಿ ಕೆರೆಯ ನೀರು ವಿಷಕಾರಿಯಾಗಿದೆ. ಇಲ್ಲಿ ಮೀನುಗಳನ್ನು ಹಿಡಿದು ವ್ಯಾಪಾರ ಮಾಡಿದರೆ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೆರೆಯಲ್ಲಿ ವಿಷ ನೀರು ಹೆಚ್ಚಾಗಿದ್ದು, ಸುತ್ತಮುತ್ತಲ ಕೆಲವರು ತ್ಯಾಜ್ಯ ವಸ್ತುಗಳನ್ನು ತಂದು ಕೆರೆಗೆ ಎಸೆಯುತ್ತಿದ್ದಾರೆ. ಇವೆಲ್ಲ ಸೇರಿ ಕೆರೆಯಲ್ಲಿ ಗಿಡಗಂಟೆ ಬೆಳೆದು ನಿಂತಿದೆ. ಕುರುಚಲು ಗಿಡಗಳು ಬೆಳೆದಿದ್ದರಿಂದ ಕೆರೆಯ ಸುತ್ತ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಂತರ್ಜಲಕ್ಕೂ ವಿಷಕಾರಿ ನೀರು: ಈ ಭಾಗದ ಜಲಮೂಲಗಳಿಗೆ ಕೆರೆಯೇ ಅಂತರ್ಜಲದ ಮೂಲವಾಗಿದೆ. ಕೆರೆಯಲ್ಲಿನ ನೀರು ಕಲುಷಿತವಾಗಿದ್ದು, ಅಂತರ್ಜಲದಲ್ಲಿಯೂ ಇದೇ ನೀರು ಮಿಶ್ರಣವಾಗುತ್ತಿದೆ. ಕೊಳವೆ ಬಾವಿ ಕೊರೆಯಿಸಿದರೆ ಗಡುಸು ನೀರು ದೊರೆಯುತ್ತಿದೆ. ಕೆರೆಯನ್ನು ಅಭಿವೃದ್ಧಿಗೊಳಿಸಿ, ಕಾರ್ಖಾನೆಗಳ ಕಲುಷಿತ ನೀರು ಸೇರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸ್ಥಳೀಯ ಎನ್.ಶಂಕರ್ ತಿಳಿಸಿದ್ದಾರೆ.