ಕೋಝಿಕೋಡ್(ಕೇರಳ): ಭಾರತೀಯ ರಾಜಕಾರಣದಲ್ಲಿ ಐದನೇ ತಲೆಮಾರಿನ ವಂಶಾಡಳಿತದ ರಾಹುಲ್ ಗಾಂಧಿ ಯುವ ಭಾರತಕ್ಕೆ ಬೇಕಾಗಿಲ್ಲ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯವ್ಯಕ್ತಪಡಿಸಿದ್ದು, ಒಂದು ವೇಳೆ ಕೇರಳದ ಮತದಾರರು 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡುವ ವಿಪತ್ತಿಗೆ ಮುಂದಾದರೆ ಕಠಿಣ ಕೆಲಸಗಾರ ಪ್ರಧಾನಿ ನರೇಂದ್ರ ಮೋದಿಗೆ ಸುಲಭವಾಗಿ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಅವರು ಕೋಝಿಕೋಡ್ ನಲ್ಲಿ ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತ, ನೀವು (ಮಲಯಾಳಿ) ಯಾಕೆ ರಾಹುಲ್ ಗಾಂಧಿಯನ್ನು ಸಂಸತ್ ಗೆ ಆಯ್ಕೆ ಮಾಡಿದಿರಿ? ನನಗೆ ವೈಯಕ್ತಿಕವಾಗಿ ರಾಹುಲ್ ಗಾಂಧಿ ಮೇಲೆ ದ್ವೇಷವಿಲ್ಲ. ಅವರೊಬ್ಬ ಸಭ್ಯ ವ್ಯಕ್ತಿ, ತುಂಬಾ ಉತ್ತಮ ನಡವಳಿಕೆ ಹೊಂದಿದ್ದಾರೆ. ಆದರೆ ಯುವ ಭಾರತಕ್ಕೆ ಐದನೇ ತಲೆಮಾರಿನ ವಂಶಾಡಳಿತ ಬೇಕಾಗಿಲ್ಲ ಎಂದು ವಿಶ್ಲೇಷಿಸಿದರು.
2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡದಂತೆ ಗುಹಾ ಕೇರಳ ಜನರಿಗೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ನೀವು 2024ರಲ್ಲಿಯೂ ರಾಹುಲ್ ಗಾಂಧಿಯನ್ನು ಪುನರಾಯ್ಕೆ ಮಾಡುವ ತಪ್ಪು ಮಾಡಿದರೆ, ಸುಲಭವಾಗಿ ಪ್ರಧಾನಿ ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಯಾಕೆಂದರೆ ಅವರು ರಾಹುಲ್ ಗಾಂಧಿ ಅಲ್ಲ. ಮೋದಿ ಹದಿನೈದು ವರ್ಷಗಳ ಕಾಲ ಗುಜರಾತ್ ರಾಜ್ಯವನ್ನು ಆಳಿದ್ದಾರೆ. ಅವರಿಗೆ ಆಡಳಿತಾತ್ಮಕ ಅನುಭವವಿದೆ. ಅಷ್ಟೇ ಅಲ್ಲ ಅವರೊಬ್ಬ ಕಠಿಣ ಕೆಲಸಗಾರ. ಯುರೋಪ್ ಪ್ರವಾಸಕ್ಕೆ ತೆರಳಿದಾಗಲೂ ರಜೆ ತೆಗೆದುಕೊಳ್ಳದೆ ದುಡಿಯುವ ವ್ಯಕ್ತಿ. ನನ್ನ ನಂಬಿ ನಾನು ಹೇಳುತ್ತಿರುವುದು ಗಂಭೀರವಾದ ವಿಷಯವಾಗಿದೆ ಎಂದರು.
ಆದರೆ ಒಂದು ವೇಳೆ ರಾಹುಲ್ ಗಾಂಧಿ ಹೆಚ್ಚು ಬುದ್ಧಿವಂತನಾದರೆ, ಹೆಚ್ಚು ಕಠಿಣ ಕಾರ್ಯ ಮಾಡಿದರೆ, ಯುರೋಪ್ ಪ್ರವಾಸದಲ್ಲಿ ಯಾವತ್ತೂ ರಜೆ ತೆಗೆದುಕೊಳ್ಳದೇ ಹೋದರೆ ಸ್ವಯಂ ವ್ಯಕ್ತಿ(ಮೋದಿ)ಗೆ ಐದನೇ ತಲೆಮಾರಿನ ವಂಶಾಡಳಿತ ಲಾಭವಾಗದಂತೆ ಮಾಡಬಹುದಾಗಿದೆ ಎಂದು ಗುಹಾ ಹೇಳಿದರು.
ಭಾರತ ಇನ್ಮುಂದೆ ಹೆಚ್ಚು ಪ್ರಜಾಪ್ರಭುತ್ವವಾದಿಯಾಗುತ್ತಿದೆ ಮತ್ತು ಊಳಿಗಮಾನ್ಯ ಕಡಿಮೆಯಾಗುತ್ತಿದೆ. ಆದರೆ ಗಾಂಧಿಗಳಿಗೆ ಇದು ಗೊತ್ತಾಗುತ್ತಿಲ್ಲ. ನೀವು (ಸೋನಿಯಾ) ದಿಲ್ಲಿಯಲ್ಲಿದ್ದೀರಿ, ನಿಮ್ಮ ಅಧಿಪತ್ಯ ಹೆಚ್ಚು ಹೆಚ್ಚು ಕುಸಿಯುತ್ತಿದೆ. ಆದರೂ ನಿಮ್ಮ ವಂದಿ ಮಾಗದಿಗರು ನೀವೇ ಬಾದಶಹಾ ಎಂದು ಬಹುಪರಾಕ್ ಹೇಳುತ್ತಿದ್ದಾರೆ ಎಂದು ಗುಹಾ ಪ್ರಸ್ತುತ ರಾಜಕೀಯವನ್ನು ವಿಶ್ಲೇಷಿಸಿದರು.