ನವದೆಹಲಿ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಬುಧವಾರ ಭಯೋತ್ಪಾದಕರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಲ್ ಮನ್ ಪ್ರೀತ್ ಸಿಂಗ್ ಸೇರಿದಂತೆ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರು. ಏತನ್ಮಧ್ಯೆ ಕರ್ನಲ್ ಮನ್ ಪ್ರೀತ್ ಸಿಂಗ್ ಅವರು ಹುತಾತ್ಮರಾದ ವಿಷಯ ಪತ್ನಿಗೆ ಇನ್ನೂ ತಿಳಿದಿಲ್ಲ ಎಂದು ಸಿಂಗ್ ಸಹೋದರ ವೀರೇಂದ್ರ ಗಿಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:Fraud Case; ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗೆ ಬರುತ್ತೆ…; ಚೈತ್ರಾ ಕುಂದಾಪುರ
ಘಟನೆ ಕುರಿತು ಇಂಡಿಯಾ ಟುಡೇ ಜತೆ ಮಾತನಾಡಿರುವ ಕರ್ನಲ್ ಮನ್ ಪ್ರೀತ್ ಸಿಂಗ್ ಸಹೋದರ ವೀರೇಂದ್ರ ಗಿಲ್ ಅವರು, ಇಂದು ಬೆಳಗ್ಗೆ 6-45ಕ್ಕೆ ನಾನು ಮನ್ ಪ್ರೀತ್ ಪತ್ನಿ ಜತೆ ಮಾತನಾಡಿದ್ದು, ಮನ್ ಪ್ರೀತ್ ಸೇನಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದು, ಕಾರ್ಯಾಚರಣೆ ಮುಗಿದ ನಂತರ ದೂರವಾಣಿ ಕರೆ ಮಾಡಬಹುದು. ಘಟನೆಯಲ್ಲಿ ಮನ್ ಪ್ರೀತ್ ಗೆ ಗಾಯವಾಗಿದೆ ಎಂದು ಮಾಹಿತಿ ಸಿಕ್ಕಿರುವುದಾಗಿ ತಿಳಿಸಿದ್ದೆ ಎಂದು ಹೇಳಿದ್ದಾರೆ.
ನನ್ನ ಸಹೋದರ ಮನ್ ಪ್ರೀತ್ ಹುತಾತ್ಮರಾಗಿರುವ ವಿಚಾರ ಇನ್ನೂ ಆತನ ಪತ್ನಿಗೆ ತಿಳಿದಿಲ್ಲ. ಮನ್ ಪ್ರೀತ್ ಅವರು ಪತ್ನಿ ಜಗ್ ಮೀತ್ ಕೌರ್, ಆರು ವರ್ಷದ ಪುತ್ರ ಹಾಗೂ ಎರಡು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ಜಗ್ ಮೀತ್ ಸಿಂಗ್ ಅವರು ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಜಗ್ ಮೀತ್ ಕೌರ್ ತನ್ನ ಪೋಷಕರ ಜತೆ ವಾಸವಾಗಿದ್ದಾರೆ ಎಂದು ವರದಿ ವಿವರಿಸಿದೆ. ಕರ್ನಲ್ ಮನ್ ಪ್ರೀತ್ ಸಿಂಗ್ ಪಾರ್ಥೀವ ಶರೀರ ಗುರುವಾರ ಚಂಡೀಗಢಕ್ಕೆ ಆಗಮಿಸಲಿದ್ದು, ನಂತರ ಅಂತ್ಯಕ್ರಿಯೆ ವಿಧಿವಿಧಾನ ನಡೆಯಲಿದೆ ಎಂದು ಸಹೋದರ ವೀರೇಂದ್ರ ಗಿಲ್ ತಿಳಿಸಿದ್ದಾರೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಸೇನಾ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಲ್ ಮನ್ ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಛಿಕ್ ಮತ್ತು ಜಮ್ಮು ಕಾಶ್ಮೀರ ಉಪ ಪೊಲೀಸ್ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು.