Advertisement

ಮುಳ್ಳಿನ ಹಾದಿಯಲ್ಲಿ ಚಿನ್ನದ ನಗು!

01:08 PM Feb 10, 2020 | Naveen |

ಹಿರಿಯೂರು: ಮನೆಯಲ್ಲಿ ಕಡು ಬಡತನ. ಅಪ್ಪ-ಅಮ್ಮನದ್ದು ತರಕಾರಿ ಮಾರುವ ಕಾಯಕ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಣಕಾಸಿನ ಸಮಸ್ಯೆ… ಇಂತಹ ಸಮಸ್ಯೆಯ ಸರಮಾಲೆ ಮಧ್ಯೆಯೂ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ಪ್ರತಿಭಾವಂತೆಯ ಕಥೆ ಇದು.

Advertisement

ನಗರದ ಗಣೇಶ ಗುಡಿ ರಸ್ತೆಯಲ್ಲಿರುವ ರಾಜೇಂದ್ರ ಮತ್ತು ಚಿತ್ರಾ ದಂಪತಿಯ ಹಿರಿಯ ಪುತ್ರಿ ಲಲಿತಾ ಚಿನ್ನದ ಹುಡುಗಿಯಾಗಿ ಮೂಡಿ ಬಂದಿರುವಾಕೆ. ಇವಳು ಬೆಂಗಳೂರಿನ ಯಲಹಂಕದಲ್ಲಿರುವ ಈಸ್ಟ್‌ ವೆಸ್ಟ್‌ ಇಂಜಿನಿಯರಿಂಗ್‌ ಕಾಲೇಜಿನ ಏರೋನಾಟಿಕ್ಸ್‌ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಟಾಪರ್‌ ಆಗಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

ಲಲಿತಾ ಚಿನ್ನದ ಪದಕ ಪಡೆಯುವ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು-ಮುಳ್ಳಿನ ಹಾದಿಯಲ್ಲಿ ನಡೆದು ಅಂತಿಮವಾಗಿ ಚಿನ್ನದ ನಗು ಬೀರಿದ್ದಾಳೆ. ತರಕಾರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿರುವ ರಾಜೇಂದ್ರ ಮತ್ತು ಚಿತ್ರಾ ದಂಪತಿಗೆ ಮೂವರು ಹೆಣ್ಣುಮಕ್ಕಳು. ಲಲಿತಾ, ಭುವನಾ ಮತ್ತು ತುಳಸಿ. ಮನೆಯಲ್ಲಿ ಬಡತನ ಇದ್ದರೂ ತಂದೆ ರಾಜೇಂದ್ರ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬಿದ್ದಿಲ್ಲ.

ತಮ್ಮ ಮೂರು ಮಕ್ಕಳಿಗೂ 1ರಿಂದ 10ನೇ ತರಗತಿವರೆಗೆ ಮನೆ ಸಮೀಪದಲ್ಲೇ ಇದ್ದ ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ಓದಿಸಿದರು. ನಂತರ ಹಿರಿಯ ಪುತ್ರಿಲಲಿತಾಳನ್ನು ಚಿತ್ರದುರ್ಗದ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದರು. ಪೋಷಕರ ನಿರೀಕ್ಷೆ ಹುಸಿಗೊಳಿಸದ ಲಲಿತಾ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಬಿಎಸ್ಸಿ ಪದವಿ ಗಳಿಸಿದರು.

ನಂತರ ಬೆಂಗಳೂರಿನ ನಂತರ ಬೆಂಗಳೂರಿನ ಯಲಹಂಕದಲ್ಲಿರುವ ಈಸ್ಟ್‌ ವೆಸ್ಟ್‌ ಇಂಜಿನಿಯರಿಂಗ್‌ ಕಾಲೇಜಿನ ಏರೋನಾಟಿಕ್ಸ್‌ ವಿಭಾಗದಲ್ಲಿ ವ್ಯಾಸಂಗ ಮಾಡಿ ಚಿನ್ನದ ನಗು ಬೀರಿದ್ದಾಳೆ. ಲಲಿತಾಳನ್ನು ಐಎಎಸ್‌ ಓದಿಸಬೇಕೆಂಬುದು ಪೋಷಕರ ಕನಸಾಗಿತ್ತು. ಆದರೆ ಸರ್ಕಾರಿ ಕೋಟಾದಡಿಯಲ್ಲಿ ಈಸ್ಟ್‌ವೆಸ್ಟ್‌ ಕಾಲೇಜಿನ ಏರೋನಾಟಿಕ್‌ ವಿಭಾಗದಲ್ಲಿ ಪ್ರವೇಶ ದೊರೆಯಿತು. ಅಲ್ಲಿಯೂ ಯಶಸ್ಸು ಸಾಧಿಸಿರುವ ಲಲಿತಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾಳೆ. ಶನಿವಾರ ನಡೆದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಲಲಿತಾಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

Advertisement

ರಾಜೇಂದ್ರ ಅವರ ಎರಡನೇ ಪುತ್ರಿ ಭುವನಾ ಬೆಂಗಳೂರಿನಲ್ಲಿ ಫ್ಯಾಷನ್‌ ಡಿಸೈನರ್‌ ತರಬೇತಿ ಪಡೆಯುತ್ತಿದ್ದರೆ, ಮೂರನೇ ಮಗಳು ತುಳಸಿ ಸರ್ಕಾರಿ ಕೋಟಾದಡಿ ಡಿಪ್ಲೋಮಾ ಮಾಡುತ್ತಿದ್ದಾಳೆ.

ತರಕಾರಿ ಮಾರಾಟವೇ ಜೀವನಾಧಾರ
ಹಿರಿಯೂರು ನಗರದ ಪ್ರಧಾನ ರಸ್ತೆಯಲ್ಲಿರುವ ನೆಹರು ಮಾರುಕಟ್ಟೆಯಲ್ಲಿ ರಾಜೇಂದ್ರ ಮತ್ತು ಚಿತ್ರಾ ಸುಮಾರು 40 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ತರಕಾರಿ ವ್ಯಾಪಾರವೇ ಜೀವನಕ್ಕೆ ಆಧಾರ. ಮೂರು ಜನ ಹೆಣ್ಣುಮಕ್ಕಳಲ್ಲಿ ಹಿರಿಯವಳಾದ ಲಲಿತಾ ಇಂಜಿನಿಯರಿಂಗ್‌ ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾಳೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮಹದಾಸೆಯನ್ನು ಪೋಷಕರು ಹೊಂದಿದ್ದಾರೆ. ರಾಜೇಂದ್ರ ಅವರು ಲಲಿತಾಳನ್ನು ಐಎಎಸ್‌ ಮಾಡಿಸಬೇಕೆಂದು ಕನಸು ಕಂಡಿದ್ದರು. ಬಡತನ, ಆರ್ಥಿಕ ಸಮಸ್ಯೆಯಿಂದ ಸದ್ಯಕ್ಕೆ ಈ ಬಯಕೆ ಈಡೇರಿಲ್ಲ. ಏನೇ ಆದರೂ ಐಎಎಸ್‌ ಪರೀಕ್ಷೆಯನ್ನು ಬರೆಸುವುದಾಗಿ ರಾಜೇಂದ್ರ ದೃಢ ಸಂಕಲ್ಪ ಮಾಡಿದ್ದಾರೆ.

ಸಿದ್ಧಗಂಗಾ ಶಿವಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next