ಹಿರಿಯೂರು: ಚಳ್ಳಕೆರೆ, ಹಿರಿಯೂರು, ತುಮಕೂರು ಜಿಲ್ಲೆಯ ಶಿರಾ, ಪಾವಗಡ ಮತ್ತಿತರ ಭಾಗಗಳಲ್ಲಿ ಅತಿಯಾದ ಜಲಕ್ಷಾಮ ಉಂಟಾಗಲು ಮಳೆ ಕೊರತೆಯೇ ಕಾರಣ. ಇದಕ್ಕೆ ಮಳೆ ನೀರು ಸಂಗ್ರಹವೇ ಪರಿಹಾರ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ| ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.
ನಗರದ ಸುಗ್ಗಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನದಿ, ಕೆರೆ ಸಂರಕ್ಷಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ರಾಜಸ್ಥಾನದ ಮರಳುಗಾಡನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಪ್ರದೇಶದಲ್ಲಿ ಅತಿ ಕಡಿಮೆ ಮಳೆಯಾಗುವ ಹವಾಗುಣವಿದೆ. ನೀರಿನ ಕೊರತೆ ನಿಗ್ರಹಿಸಲು ಮಳೆ ನೀರನ್ನು ಸಂಗ್ರಹಿಸುವಂತಹ ವ್ಯವಸ್ಥೆ ರೂಢಿಸಿಕೊಳ್ಳಬೇಕು ಎಂದರು.
ದೇಶದಾದ್ಯಂತ ಜಲಮೂಲಗಳ ಬಗ್ಗೆ ಅಧ್ಯಯನ, ಸಂಶೋಧನೆಗಳು ನಡೆಯುತ್ತಿವೆ. ಆದರೆ ನೀರಿನ ಪೂರ್ಣ ಪ್ರಮಾಣದ ಮೂಲವಾಗಿರುವ ಮಳೆ ನೀರನ್ನು ಹೊರತುಪಡಿಸಿದರೆ ಯಾವುದೇ ಜಲಮೂಲಗಳು ನೀರನ್ನು ಒದಗಿಸಲು ಸಾಧ್ಯವಿಲ್ಲ. ಈಗಾಗಲೇ ಹಲವು ತಾಂತ್ರಿಕ ಅಧ್ಯಯನಗಳು, ವರದಿಗಳು ಹೇಳಲ್ಪಟ್ಟಿರುವ ಹಾಗೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಜಲಕ್ಷಾಮದಿಂದ ನರಳಬೇಕಾದ ಪರಿಸ್ಥಿತಿ ಬರಲಿದೆ ಎನ್ನುವ ವರದಿಗಳು ಕಂಗೆಡಿಸಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಜಲಮೂಲಗಳ ಸಂರಕ್ಷಣೆ, ಮಳೆ ನೀರು ಸಂಗ್ರಹ, ಕೆರೆ, ಕುಂಟೆ, ಕಾಲುವೆಗಳ ರಕ್ಷಣೆ, ನದಿಗಳ ಪುನಃಶ್ಚೇತನದಂತಹ ಕಾರ್ಯ ಕೈಗೊಳ್ಳಲು ಯುವಜನರು ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಸಂಘಟನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ತುಮಕೂರಿನ ಸಾಮಾಜಿಕ ಕಾರ್ಯಕರ್ತ ಯತಿರಾಜ್ ಮಾತನಾಡಿ, ರಾಜಸ್ಥಾನದಲ್ಲಿ ಬತ್ತಿ ಹೋದ ನದಿ, ಕೆರೆ, ಕುಂಟೆ, ಕಾಲುವೆಗಳನ್ನು ಮಳೆ ನೀರಿನ ಮೂಲಕ ಪುನಶ್ಚೇತನಗೊಳಿಸಿದ ರಾಜೇಂದ್ರ ಸಿಂಗ್ ಮಾದರಿಯಾಗಿದ್ದಾರೆ. ಅವರ ಕಾರ್ಯವನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚಿತ್ರದುರ್ಗ, ಹಿರಿಯೂರು, ಶಿರಾ ತಾಲೂಕುಗಳಲ್ಲಿರುವಂತಹ ನದಿ, ಕೆರೆ, ಕಾಲುವೆಗಳಿಗೆ ಜೀವ ತುಂಬುವಂತಹ ಕೆಲಸ ಮಾಡುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಿರಿಯೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ತಿಪ್ಪೀರಯ್ಯ, ಮಾಜಿ ಸದಸ್ಯ ಎಂ.ಡಿ. ರವಿ, ಸಾಮಾಜಿಕ ಕಾರ್ಯಕರ್ತ ನರೇನಹಳ್ಳಿ ಅರುಣ್‌ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಹೊರಕೇರಪ್ಪ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕುಂಬರೇಶ್, ನಗರಸಭೆ ಸದಸ್ಯ ವಿ. ಶಿವಣ್ಣ ಯಾದವ್, ವಕೀಲ ಜಬೀವುಲ್ಲಾ, ರೈತ ಮುಖಂಡ ಬಬ್ಬೂರು ಸುರೇಶ್, ಮಲ್ಲಿಕಾರ್ಜುನಪ್ಪ, ಸಂಪತ್, ನಿವೃತ್ತ ಪ್ರಾಧ್ಯಾಪಕ ಪ್ರೊ| ಪರಮೇಶ್ವರಪ್ಪ, ಭೀಮಸಮುದ್ರ ಈಶ್ವರಪ್ಪ ಮೊದಲಾದವರು ಭಾಗವಹಿಸಿದ್ದರು.