ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಿ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಮೂಲಕ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುತ್ತೇನೆ. ಈ ಮೂಲಕ ಮತದಾರರ ಋಣ ತೀರಿಸುವುದಾಗಿ ಸಂಸದ ಎ. ನಾರಾಯಣಸ್ವಾಮಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಜನರ ನೋವು, ಕಷ್ಟಗಳ ಅರಿವು ನನಗಿದೆ. ಸಮಾಜಕಲ್ಯಾಣ ಸಚಿವರಾಗಿದ್ದಾಗಿನಿಂದ ಈ ಭಾಗದೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದೇನೆ. ಹಾಗಾಗಿ ವಿವಿ ಸಾಗರಕ್ಕೆ ನೀರು ಹರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ, ಅಜ್ಜಂಪುರ ಮತ್ತಿತರಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಖುದ್ದಾಗಿ ವೀಕ್ಷಣೆ ಮಾಡಿದ್ದೇನೆ. ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಭಾಗದ ರೈತರು ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಒಳಗಾಗಲು ಬಿಡುವುದಿಲ್ಲ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿಲ್ಲ. ಆದರೂ ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇನೆ. ಅಭಿವೃದ್ಧಿ ಸಂಬಂಧ ಪಕ್ಷಾತೀತವಾಗಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ನಾಲ್ಕು ವರ್ಷಗಳಲ್ಲಿ ಜನರು ನನ್ನ ಇಟ್ಟಿರುವ ನಿರೀಕ್ಷೆ ಹುಸಿಗೊಳಿಸದೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಬಿಜೆಪಿ ಪಕ್ಷ ತತ್ವ-ಸಿದ್ಧಾಂತಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತದೆ. ಕಾರ್ಯಕರ್ತರೇ ಪಕ್ಷದ ಆಧಾರಸ್ತಂಭವಾಗಿದ್ದು ಪಕ್ಷವನ್ನು ಮುನ್ನೆಡೆಸುವ ಹಾಗೂ ಸಂಘಟಿಸುವುದು ಕಾರ್ಯಕರ್ತರೇ ಹೊರತು ನಾಯಕರಲ್ಲ. ಕಾರ್ಯಕರ್ತರಿದ್ದರೆ ಮಾತ್ರ ನಾಯಕರಿಗೆ ಹೆಚ್ಚಿನ ಗೌರವ. ಕಾರ್ಯಕರ್ತರಿಲ್ಲದಿದ್ದಲೆ ಎಷ್ಟೇ ದೊಡ್ಡ ಮಟ್ಟದ ನಾಯಕರಾದರೂ ಪಕ್ಷ ಕಟ್ಟುವುದು ಕಷ್ಟವಾಗುತ್ತದೆ. ನಾಯಕರಿಂದಲೇ ಪಕ್ಷ ನಡೆಯಬೇಕೆನ್ನುವ ಪಕ್ಷಗಳು ಅಧೋಗತಿ ತಲುಪಿವೆ. ಆದ್ದರಿಂದ ಬಿಜೆಪಿ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಮಾತ್ರ ಸಮಾನ ಅವಕಾಶವಿದೆ ಎಂದು ಬಣ್ಣಿಸಿದರು.
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಕೊನೆಯ ಸ್ಥಾನಕ್ಕೆ ತಳ್ಳುವುದಾಗಿ ಕೆಲವರು ಹೇಳುತ್ತಿದ್ದರು. ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಸತತ ಹೋರಾಟದಿಂದ ಕ್ಷೇತ್ರದಲ್ಲಿ ಎರಡು ಪಕ್ಷಗಳು ಒಂದಾದರೂ ಬಿಜೆಪಿ ಅಭ್ಯರ್ಥಿಗೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ತಂದು ಕೊಟ್ಟಿದ್ದೇವೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ದ್ಯಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಯ್ಯ, ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ಕಾಂತರಾಜ್, ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ನಗರಸಭೆ ಮಾಜಿ ಸದಸ್ಯ ಜಿ. ಪ್ರೇಮ್‌ಕುಮಾರ್, ರಾಜೇಶ್ವರಿ, ಮಹಲಿಂಗಪ್ಪ, ಮಂಜುನಾಥ್ ಮತ್ತಿತರರು ಇದ್ದರು.