ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.
ಧರ್ಮಪುರ ಹೋಬಳಿಯ ಮುಂಗುಸುವಳ್ಳಿಯ ಮನೆಯ ಮೇಲೆ ಆರು ಅಧಿಕಾರಿಗಳ ತಂಡ ಮಧ್ಯಾಹ್ನ 2ಕ್ಕೆ ದಾಳಿ ನಡೆಸಿತ್ತು. ಈ ವೇಳೆ ರವೀಂದ್ರಪ್ಪ ಹಾಗೂ ಅವರ ಪುತ್ರ ಡಾ.ಸತ್ಯನಾರಾಯಣ ಮತಯಾಚನೆಗೆ ಹೊರ ಹೋಗಿದ್ದರು. ಮನೆ ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಲತಾ ಮತ್ತು ಶ್ವೇತಾರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಏಪ್ರಿಲ್ 21ರಂದು ಕೂಡಾ ರವೀಂದ್ರಪ್ಪ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳ ತಂಡ ಮನೆ, ತೋಟ, ತಿಪ್ಪೆ, ಜಮೀನಿನಲ್ಲಿ ಪರಿಶೀಲನೆ ನಡೆಸಿತ್ತು.
ಈ ವೇಳೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ಲತಾ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗದ ಕಾರಣ ಇಂದು ವಶಕ್ಕೆ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಘಟನೆಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಜಯ್ಯಣ್ಣ ಪ್ರತಿಕ್ರಿಯಿಸಿದ್ದು, ಬಿಜೆಪಿ ಹತಾಶಗೊಂಡು ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಸ್ಥಳೀಯ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವರ ಹುನ್ನಾರದಿಂದ ಈ ದಾಳಿ ನಡೆದಿದೆ. ಇಂತಹ ದಾಳಿಗೆ ಜೆಡಿಎಸ್ ಕಾರ್ಯಕರ್ತರು ಮಣಿಯುವುದಿಲ್ಲ. ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದಿದ್ದಾರೆ.