Advertisement

ಹಿರ್ಗಾನ: ಹರಿಯಪ್ಪ ಕೆರೆಯ ಹೂಳೆತ್ತುವ ಕಾಮಗಾರಿ ಆರಂಭ

12:49 AM Jun 07, 2019 | Team Udayavani |

ಹೆಬ್ರಿ: ಪುರಾತನ ಹರಿಯಪ್ಪ ಕೆರೆಯು ಸೂಕ್ತ ನಿರ್ವಹಣೆಯಿಲ್ಲದೆ ಹಲವು ದಶಕಗಳಿಂದ ಹೂಳು ತುಂಬಿ ನೀರು ನಿಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 25 ಅಡಿಗಳಷ್ಟು ಆಳವಾಗಿರುವ ಈ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿದ್ದು ಈ ಬೇಸಗೆಯಲ್ಲಿ ಹನಿ ನೀರು ಇಲ್ಲದಂತಾಗಿತ್ತು.

Advertisement

ಹಿಂದೆ ಹಿರ್ಗಾನ ಪರಿಸರದ ಭತ್ತದ ಗದ್ದೆಗಳಿಗೆ ನೀರು ಒದಗಿಸುತ್ತಿದ್ದ ಈ ಕೆರೆಯಲ್ಲಿ ಹೂಳು ತುಂಬಿರುವ ಹಾಗೂ ಕೆರೆ ಅಭಿವೃದ್ಧಿಪಡಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂಬ ಬಗ್ಗೆ ಪತ್ರಿಕೆಯು ನಿರಂತರ ಸಚಿತ್ರ ವರದಿ ಪ್ರಕಟಿಸಿತ್ತು.

1 ಎಕ್ರೆ ಜಾಗದ ವಿಸ್ತೀರ್ಣದಲ್ಲಿರುವ ಈ ಕೆರೆಯು ಸಂಪೂರ್ಣ ಅಭಿವೃದ್ಧಿಗೊಂಡಲ್ಲಿ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವ ಜತೆಗೆ ಪರಿಸರದ ಕೃಷಿಕರಿಗೂ ಹೆಚ್ಚಿನ ಅನುಕೂಲವಾಗಲಿದೆ. ಇದೀಗ 1 ಲಕ್ಷ ರೂ. ವೆಚ್ಚದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಳನ್ನೆತ್ತಲಾಗುತ್ತಿದ್ದು ಕೆರೆಯ ಸಂಪೂರ್ಣ ಹೂಳೆತ್ತಲು ಸುಮಾರು 50 ಲಕ್ಷಕ್ಕೂ ಅಧಿಕ ಅನುದಾನದ ಅಗತ್ಯವಿದೆ.

ಪಂಚಾಯತ್‌ ವ್ಯಾಪ್ತಿಯ ಮಂಗೀಲಾರು, ನೆಲ್ಲಿಕಟ್ಟೆ, ಶಿವನಗರಗಳಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತಿದ್ದು ಈ ಕೆರೆ ಅಭಿವೃದ್ಧಿಯಿಂದ ಈ ಭಾಗದ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಹರಿಯಪ್ಪ ಕೆರೆ ಬಿಟ್ಟರೆ ಬೇರೆ ಯಾವುದೇ ರೀತಿಯ ನೀರಿನ ಮೂಲಗಳಿಲ್ಲ.

ಸಮಾಲೋಚನೆ ನಡೆಸಲಾಗುವುದು

ಸಣ್ಣ ನೀರಾವರಿ ಇಲಾಖೆಯಿಂದ 1 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಅದರ ಕಾಮಗಾರಿ ನಡೆಯುತ್ತಿದೆ. ಕೆರೆಯ ಸಂಪೂರ್ಣ ಹೂಳೆತ್ತಲು ಹೆಚ್ಚಿನ ಅನುದಾನದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಇತರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ಕೆರೆಯನ್ನು ಸಂಪೂರ್ಣ ಪುನಶ್ಚೇತನಗೊಳಿಸಲು ಪ್ರಯತ್ನಿಸಲಾಗುವುದು.
– ಸಂತೋಷ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಹಿರ್ಗಾನ ಗ್ರಾ.ಪಂ.
ಪೂರ್ಣ ಪ್ರಮಾಣದ ಅಭಿವೃದ್ಧಿಯಾಗಬೇಕು

ಹರಿಯಪ್ಪ ಕೆರೆ ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದ ಈಗ ಅಭಿವೃದ್ಧಿಗೊಳ್ಳುತ್ತಿದೆ. ಕೆರೆಯ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸ ಬೇಕಾಗಿರುವುದರಿಂದ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯಲ್ಲಿಯೂ ಈ ಕಾಮಗಾರಿ ತೆಗೆದುಕೊಳ್ಳಲಾಗಿದೆ.
– ಸಂಧ್ಯಾ ಶೆಟ್ಟಿ, ಪಿಡಿಒ, ಹಿರ್ಗಾನ ಗ್ರಾ.ಪಂ.
Advertisement

Udayavani is now on Telegram. Click here to join our channel and stay updated with the latest news.

Next