ಚಳ್ಳಕೆರೆ: ಹಸುಗೂಸಿನೊಂದಿಗೆ ಬಾಣಂತಿಯನ್ನು ಮನೆಯಿಂದ ಹೊರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ತಾಲೂಕಿನ ಹಿರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗಂಡನ ಮನೆಯವರಿಂದ ಹೊರ ಹಾಕಲ್ಪಟ್ಟಿದ್ದ ಬಾಣಂತಿ ಶಾರದಮ್ಮ, ಚಳ್ಳಕೆರೆ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಸುಗೂಸಿನೊಂದಿಗೆ ಅನಾಥ ಸ್ಥಿತಿಯಲ್ಲಿ ಮಲಗಿದ್ದಳು. ಇದನ್ನು ಕಂಡ ಸಾರ್ವಜನಿಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ತಹಶೀಲ್ದಾರರು ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿ-ಮಗುವಿನ ಯೋಗಕ್ಷೇಮ ವಿಚಾರಿಸಿದ್ದರು.
ಈ ಬಗ್ಗೆ “ಉದಯವಾಣಿ’ ಪತ್ರಿಕೆಯ ಸೋಮವಾರದ ಸಂಚಿಕೆಯಲ್ಲಿ ವಿವರವಾದ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಹಿರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಾಪತ್ತೆಯಾಗಿರುವ ಶಾರದಮ್ಮಳ ಪತಿ ಮಲ್ಲಿಕಾರ್ಜುನನ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಸಿಡಿಪಿಒ ಸಿ.ಕೆ. ಗಿರಿಜಾಂಬ, ಸಾಂತ್ವನ ಕೇಂದ್ರದ ಕೌಟುಂಬಿಕ ಸಲಹೆಗಾರ ಸೋಮಶೇಖರ್ ಹಾಗೂ ಆಶಾ ಹಿರೇಹಳ್ಳಿ ಎ.ಕೆ. ಕಾಲೋನಿಯಲ್ಲಿರುವ ಮಲ್ಲಿಕಾರ್ಜುನನ ಮನೆಗೆ ಭೇಟಿ ನೀಡಿದ್ದರು. ಬಾಣಂತಿ ಶಾರದಮ್ಮಳನ್ನು ಮನೆಗೆ ಕರೆ ತಂದು ಆಕೆಯನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಮಲ್ಲಿಕಾರ್ಜುನನ ತಂದೆ-ತಾಯಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸರ್ಕಾರಿ ಆಸ್ಪತ್ರೆಯಲ್ಲಿರುವ ಬಾಣಂತಿ ಶಾರದಮ್ಮಳನ್ನು ಹಿರೇಹಳ್ಳಿಗೆ ಕರೆ ತಂದ ಕೂಡಲೇ ಆಕೆ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ಎನ್. ಪ್ರೇಮಸುಧಾ
ಹಿರೇಹಳ್ಳಿಯ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹಿರೇಹಳ್ಳಿಯ ಕಂದಾಯ ಅಧಿಕಾರಿ ಮತ್ತು ಗ್ರಾಮಲೆಕ್ಕಾಧಿಕಾರಿಯವರು ಮಲ್ಲಿಕಾರ್ಜುನನ ಪೋಷಕರೊಂದಿಗೆ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನನ್ನು ಕೂಡಲೇ ಪತ್ತೆ ಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ತಿಳಿಸಿದರು.
ನಾಪತ್ತೆಯಾಗಿರುವ ಮಲ್ಲಿಕಾರ್ಜುನನ ತಂದೆ ದುರ್ಗಪ್ಪನ ವಿಚಾರಣೆ ನಡೆಸಲಾಗಿದೆ. ಇನ್ನೂ ಎರಡೂಮೂರು ದಿನಗಳೊಳಗೆ ಮಲ್ಲಿಕಾರ್ಜುನನ್ನು ಎಲ್ಲಿದ್ದರೂ ಕರೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಳಕು ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಮಲ್ಲಿಕಾರ್ಜುನನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಎಸ್. ರೋಷನ್ ಜಮೀರ್, ಡಿವೈಎಸ್ಪಿ