Advertisement

ಗವಿಶ್ರೀಗಳಿಗೆ ಹಿರೇಹಳ್ಳ ಪುನಶ್ಚೇತನದ್ದೇ ಧ್ಯಾನ

04:58 PM Apr 26, 2019 | pallavi |

ಕೊಪ್ಪಳ: ಲಿಂಗಪೂಜೆ, ಧ್ಯಾನ, ಪ್ರಾರ್ಥನೆ ಇವು ಸಾಮಾನ್ಯವಾಗಿ ಪ್ರತಿಯೊಬ್ಬ ಸ್ವಾಮೀಜಿಗಳು ದಿನನಿತ್ಯ ಕೈಗೊಳ್ಳುವ ಕೈಂಕರ್ಯಗಳು. ಆದರೆ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಹಿರೇಹಳ್ಳದ ಪುನಶ್ಚೇತನವೇ ನಿತ್ಯ ಧ್ಯಾನ, ತಪಸ್ಸು, ಯೋಗ.

Advertisement

ಹೌದು. ಗವಿ ಶ್ರೀಗಳು ತಾವಾಯ್ತು, ತಮ್ಮ ಮಠವಾಯ್ತು ಎಂದು ಕೈ ಕಟ್ಟಿ ಕುಳಿತುಕೊಳ್ಳದೇ ‘ಜಲ’ಧ್ಯಾನದಲ್ಲಿ ತೊಡಗಿದ್ದಾರೆ. ಬೆಳಗಾದರೆ ಸಾಕು ಹಳ್ಳದ ಹೂಳು ತೆಗೆಯುವುದು, ಪಾಚಿ ಸ್ವಚ್ಛಗೊಳಿಸುವುದು, ಬೆಳೆದು ನಿಂತ ಅಂತರಗಂಗೆಯನ್ನು ಕಿತ್ತು ಹಾಕುವುದು ಸೇರಿದಂತೆ ಇನ್ನಿತರ ಕಾರ್ಯಗಳಲ್ಲೇ ಮಗ್ನರಾಗಿದ್ದಾರೆ.

ಲಿಂಗಪೂಜೆ, ಮಠಕ್ಕೆ ಬರುವ ಭಕ್ತರಿಗೆ ವ್ಯವಸ್ಥೆ, ಗದ್ದುಗೆ ದರ್ಶನ, ಶಿಕ್ಷಣ ಸಂಸ್ಥೆ ಹಾಗೂ ಮಕ್ಕಳ ಕಾಳಜಿಯ ಮಧ್ಯೆಯೇ ಸಾಮಾಜಿಕ ಕಾಳಜಿಯನ್ನೂ ಮೈಗೂಡಿಸಿಕೊಂಡಿದ್ದಾರೆ. ಬಿರು ಬಿಸಿಲಿನ ನಡುವೆಯೇ ನಗರ ಹೊರವಲಯದ ಹಿರೇಹಳ್ಳದ ಸ್ವಚ್ಛತಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಯುವಕರ ನೆರವಿನೊಂದಿಗೆ ಕೋಳೂರು ಬಳಿ ಹರಿಗೋಲಿನ ಸಹಾಯ ಪಡೆದು ಪಾಚಿ, ಅಂತರಗಂಗೆ ಸ್ವಚ್ಛ ಮಾಡಿದ್ದಾರೆ. ಮೊಣಕಾಲುವರೆಗೂ ನಿಂತ ನೀರಲ್ಲಿ ಇರುವ ಪಾಚಿ ಕಿತ್ತು ಹಾಕಿದ್ದಾರೆ. ಎದೆಯುದ್ಧ ನೀರಿನಲ್ಲಿ ಯುವಕರ ಸಹಾಯದಿಂದ ಅಂತರಗಂಗೆಯನ್ನು ತೆಗೆದು ಹಾಕಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಿರೇಹಳ್ಳದ ಸ್ವಚ್ಛತಾ ಕಾರ್ಯ ಈಗಾಗಲೇ ಅಂತಿಮ ಹಂತಕ್ಕೆ ಬಂದು ತಲುಪಿದ್ದು, 21 ಕಿಮೀ ಉದ್ದದ ಹಳ್ಳದಲ್ಲಿ ಈಗಾಗಲೇ 19 ಕಿಮೀ ಸ್ವಚ್ಛಗೊಳಿಸಲಾಗಿದೆ.ಶೇ.70 ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಕೋಳೂರು, ಹಿರೇ ಸಿಂಧೋಗಿ ಭಾಗದಲ್ಲೂ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಹಳ್ಳದ ಪುನಶ್ಚೇತನಕ್ಕೆ ಮಾ.1ರಂದೇ ಚಾಲನೆ ನೀಡಿರುವ ಸ್ವಾಮೀಜಿ, ಸ್ಥಳೀಯ ಜನರು ಹಾಗೂ ರಾಜಕೀಯ ನಾಯಕರೊಂದಿಗೆ ಪಕ್ಷಾತೀತವಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಪೂಜ್ಯರೇ ಇಂತಹ ಮಹತ್ವಪೂರ್ಣ ಕಾರ್ಯದಲ್ಲಿ ತೊಡಗಿರುವಾಗ ನಾವೇಕೆ ನಮ್ಮ ಸೇವೆ ಮಾಡಬಾರದೆಂದು ನಾಡಿನ ವಿವಿಧ ಮೂಲೆ ಮೂಲೆಗಳಲ್ಲಿರುವ ಜನರು ನೆರವಿನ ಹಸ್ತ ಚಾಚುತ್ತಿದ್ದಾರೆ. ಜೆಸಿಬಿ, ಬುಲ್ಡೋಜರ್‌,ಹಿಟಾಚಿಗಳು ಹಳ್ಳದಲ್ಲಿಳಿದಿವೆ. ಇವುಗಳೊಂದಿಗೆ ನೂರಾರು-ಸಾವಿರಾರು ಕೈಗಳು ಹಳ್ಳದ ಕಾರ್ಯಗಳಲ್ಲಿ ಜೋಡಿಸಿವೆ. ಹಳ್ಳ ಸ್ವಚ್ಛವಾದರೆ ನಮಗೆ ನೀರು ಸಿಗುತ್ತದೆ, ನೀರು ಸಿಕ್ಕರೆ ಕುಡಿಯಲು, ಬೇಸಾಯಕ್ಕೆ ಅನುಕೂಲವಾಗುತ್ತದೆ, ರೈತನಿಗೆ ಅನುಕೂಲವಾದರೆ ಈ ಪ್ರದೇಶ ಸಂತುಷ್ಟವಾಗಿರುತ್ತದೆ ಎಂದು ಭಾವಿಸಿದ ಸುತ್ತಮುತ್ತಲಿನ ಊರುಗಳ ಜನರು ಹಳ್ಳದ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಳ್ಳದ ಕೆಲಸದಲ್ಲಿ ತೊಡಗಿದ ಜನರಿಗೆ ಸುತ್ತಲಿನ ಹಳ್ಳಿಗಳ ಜನರು ಸ್ವಯಂ ಪ್ರೇರಿತರಾಗಿ ಅನ್ನಪ್ರಸಾದ ಸಿದ್ಧಪಡಿಸಿ ವಿತರಿಸುತ್ತಿದ್ದಾರೆ.

ಸ್ವಾಮೀಜಿಗಳೇ ನೀರಿನಲ್ಲಿ ಇಳಿದು ಸೇವೆ ಮಾಡುತ್ತಿರುವುದನ್ನು ನೋಡಿದ ಜನತೆ ತಾವೂ ಮುಂದೆ ನಿಂತು ನೀರಿಗಿಳಿದು ತಮ್ಮ ಕೈಲಾದಷ್ಟು ಪಾಚಿ, ತ್ಯಾಜ್ಯವನ್ನು ತೆರವು ಮಾಡುವಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ಹಿರೇಹಳ್ಳ ಪ್ರದೇಶವು ಆಕರ್ಷಕವಾಗಿ, ವಿಸ್ತಾರವಾಗಿ ಕಂಗೊಳಿಸುತ್ತಲಿದ್ದು ಮುಂದಿನ ದಿನಗಳಲ್ಲಿ ಹೊಸದಾದ ಕಾಯಕಲ್ಪಕ್ಕೆ ಸಿದ್ಧಗೊಳ್ಳುತ್ತಿದೆ. ತಾಲೂಕಿನ ಕೋಳೂರು ಬಳಿ ಸರ್ಕಾರ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಿದ್ದು, ಅಲ್ಲಿ ನೀರು ನಿಂತು ರೈತರ ಕೃಷಿ ಬದುಕಿಗೆ ಆಸರೆಯಾಗಿದೆ. ಆದರೆ ನೀರಿನಲ್ಲಿ ಅಪಾರ ಪ್ರಮಾಣದಲ್ಲಿ ಪಾಚಿ ಹಾಗೂ ಅಂತರ ಗಂಗೆ ಬೆಳೆದು ನಿಂತಿದ್ದು, ಅದನ್ನು ಸ್ವತಃ ಸ್ವಾಮೀಜಿಗಳೇ ಹರಿಗೋಲಿನ ನೆರವು ಪಡೆದು ಯುವಕರೊಂದಿಗೆ ಸೇರಿ ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ. ಇಂದು ಸಹ ದದೇಗಲ್ ಬ್ರಿಡ್ಜ್ ಎಡಭಾಗದಲ್ಲಿ ಪುನಶ್ಚೇತನಾ ಕಾರ್ಯ ಚುರುಕಾಗಿ ಜರುಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next