ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ವಾಸ್ತವ ಸಂಗತಿ ಅರಿಯಲಿಕ್ಕೆ ಸಂಶೋಧನಾತ್ಮಕ ಅಧ್ಯಯನ ಕೈಗೊಳ್ಳಲು ನ್ಯಾಷನಲ್ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್’ (ಎನ್‌ಇಇಆರ್‌ಐ) ಅನ್ನು ತಕ್ಷಣ ನೇಮಕ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೋಮವಾರ ಆದೇಶ ನೀಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಜಾಗದ ಒತ್ತುವರಿಗಳನ್ನು ತೆರವುಗೊಳಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಸೋಮವಾರ ಈ ಮಧ್ಯಂತರ ಆದೇಶ ನೀಡಿದೆ. ಮಧ್ಯಂತರ ಆದೇಶದ “ಉಕ್ತಲೇಖನ’ (ಡಿಕ್ಟೆಷನ್) ಅಪೂರ್ಣಗೊಂಡಿದ್ದು, ಅದು ಮಂಗಳವಾರವೂ ಮುಂದುವರಿಯಲಿದೆ.
ಕೆರೆಗಳ ವಾಸ್ತವ ಸಂಗತಿ ಅರಿಯಲು ಸಂಶೋಧನಾತ್ಮಕ ಅಧ್ಯಯನ ನಡೆಸಲು ತಕ್ಷಣ “ನೀರಿ’ ಸಂಸ್ಥೆಯನ್ನು ನೇಮಕ ಮಾಡಬೇಕು, ಆ ಸಂಬಂಧದ ದಾಖಲೆ ಪತ್ರಗಳನ್ನು ಒಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದಾದ ಬಳಿಕ “ನೀರಿ’ ಸಂಸ್ಥೆಯು ಕಣ್ಮರೆಯಾಗಿರುವ ಕೆರೆಗಳ ಜಾಗವನ್ನು ಪತ್ತೆ ಹಚ್ಚಬೇಕು. ಒತ್ತುವರಿಯಾದ ಕೆರೆಗಳನ್ನು ತೆರೆವುಗೊಳಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು.
ಅಸ್ತಿತ್ವದಲ್ಲಿರುವ ಕೆರೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸಲು ಕೈಗೊಳ್ಳಬೇಕಾದ ಅಲ್ಪಾವಧಿ ಮತ್ತು ದೀರ್ಘಾವಧಿ ಮಾಗೋಪಾಯಗಳನ್ನು ಸೂಚಿಸಬೇಕು. ಇದನ್ನು ಬಿಬಿಎಂಪಿ ಸೇರಿದಂತೆ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳು ಅಳವಡಿಸಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳಿರುವ ಹೈಕೋರ್ಟ್, ಮೂರು ತಿಂಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸುವಂತೆ “ನೀರಿ’ ಸಂಸ್ಥೆಗೆ ನಿರ್ದೇಶನ ನೀಡಿದೆ.
ಬೆಂಗಳೂರಿನ ಕೆರೆಗಳ ಬಗ್ಗೆ ನ್ಯಾ. ಎನ್.ಕೆ. ಪಾಟೀಲ್ ನೇತೃತ್ವದ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು ಆಧರಿಸಿ 2012ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸರ್ಕಾರ ಪಾಲಿಸಿಲ್ಲ. ಈ ರೀತಿ ನ್ಯಾಯಾಲಯದ ತೀರ್ಪು ಪಾಲಿಸದೆ ತನ್ನ ಜವಾಬ್ದಾರಿಯನ್ನು ಮೊತ್ತಬ್ಬರ ಹೆಗಲಿಗೆ ಹಾಕಿ ಸರ್ಕಾರ ನುಣುಚಿಕೊಳ್ಳುವಂತಿಲ್ಲ. ಹಾಗಾಗಿ, 2012ರ ಹೈಕೋರ್ಟ್ ಆದೇಶದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಅನ್ನುವುದರ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಅಲ್ಲದೇ ಕೆರೆಗಳ ಒತ್ತುವರಿ ಜಾಗದಲ್ಲಿ ಸರ್ಕಾರದ ಕಟ್ಟಡಗಳಿದ್ದರೆ ಅವುಗಳನ್ನು ಹಂತ-ಹಂತವಾಗಿ ತೆರವುಗೊಳಿಸಬೇಕು ಎಂದು ನ್ಯಾಯಪೀಠ, ಸರ್ಕಾರಕ್ಕೆ ನಿರ್ದೇಶನ ನೀಡಿತು.
ಈ ವೇಳೆ, ಕೆಂಪಾಬುದಿ ಕೆರೆ ಪ್ರದೇಶದಲ್ಲಿ ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ತೆರವುಗೊಳಿಸುವುದು ಕಷ್ಟಕರ, ಈ ವಿಚಾರವನ್ನು ಸರ್ಕಾರದ ನಿರ್ಧಾರಕ್ಕೆ ಬಿಡುವುದು ಒಳ್ಳೆಯದು ಎಂದು ಕೇಳಿದರು. ಇದಕ್ಕೆ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ಅಭಿವೃದ್ಧಿ ಹೆಸರಲ್ಲಿ ಕೆರೆಗಳನ್ನು ನಾಶ ಮಾಡುವುದು ಒಪ್ಪಲು ಸಾಧ್ಯವೇ, ಕೆರೆಗಳನ್ನು ನಾಶ ಮಾಡಿ “ಸ್ಮಾರ್ಟ್ ಸಿಟಿ’ ಸಾಧ್ಯವಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ದೂರು ಸ್ವೀಕಾರ ವ್ಯವಸ್ಥೆ: ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಕಟ್ಟಡ, ರಾಜಕಾಲುವೆ, ಕೆರೆ ಒತ್ತುವರಿ ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ನೀಡಲು ಪ್ರತ್ಯೇಕ ದೂರು ಸ್ವೀಕಾರ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ಟೋಲ್ ಫ್ರೀ ನಂಬರ್ ಕೊಡಬೇಕು, ಇ-ಮೇಲ್ ಮತ್ತು ಖುದ್ದಾಗಿ ಜನರು ದೂರು ನೀಡುವಂತಾಗಬೇಕು. ದೂರು ಸ್ವೀಕಾರದ ನಂತರ ತಕ್ಷಣವೇ ಕ್ರಮ ಕೈಗೊಂಡು ದೂರು ನೀಡಿದವರಿಗೆ ಮಾಹಿತಿ ಒದಗಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಬಿಬಿಎಂಪಿಗೆ ಸೂಚನೆ ನೀಡಿತು.