Advertisement

ತಾಪಂ ಅಧ್ಯಕ್ಷ್ಯರಾಗಿ ಹಿರಗಪ್ಪನವರ ಆಯ್ಕೆ 

04:45 PM Aug 15, 2018 | |

ಹಾನಗಲ್ಲ: ಹಾನಗಲ್ಲ ತಾಲೂಕು ಪಂಚಾಯತ್‌ ನೂತನ ಅಧ್ಯಕ್ಷರಾಗಿ ತಾಲೂಕಿನ ಮಾಸನಕಟ್ಟಿ ತಾಪಂ ಕಾಂಗ್ರೆಸ್‌ ಸದಸ್ಯ ಸಿದ್ದಪ್ಪ ಹಿರಗಪ್ಪನವರ ಆಯ್ಕೆಯಾಗಿದ್ದಾರೆ. ಮಂಗಳವಾರ ತಾಪಂ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದಪ್ಪ ಹಿರಗಪ್ಪನವರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಎಂದು ಸವಣೂರು ಉಪವಿಭಾಗಾಧಿಕಾರಿ ಲೋಕೇಶ ಘೋಷಿಸಿದರು. ಚುನಾವಣೆ ಪ್ರಕ್ರಿಯೆಗಳನ್ನು ತಹಶೀಲ್ದಾರ್‌ ಶಕುಂತಲಾ ಚೌಗಲಾ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ| ಎಂ.ಜಿ.ಶಶಿಧರ ನಿರ್ವಹಿಸಿದರು.

Advertisement

ಹಾನಗಲ್ಲ ತಾಲೂಕು ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಶಿವಬಸಪ್ಪ ಪೂಜಾರ ರಾಜೀನಾಮೆ ನೀಡಿದ್ದರು. ತೆರವುಗೊಂಡ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಹಾನಗಲ್ಲ ತಾಲೂಕು ಪಂಚಾಯತ್‌ 24 ಸದಸ್ಯರಿದ್ದು, ಇದರಲ್ಲಿ 20 ಸದಸ್ಯರು ಕಾಂಗ್ರೆಸ್‌, ನಾಲ್ವರು ಬಿಜೆಪಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ ಸದಸ್ಯರಲ್ಲಿ ಹಲವು ಆಕಾಂಕ್ಷಿಗಳಿದ್ದಾಗಲೂ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಮಾಜಿ ಸಚಿವ ಮನೋಹರ ತಹಶೀಲ್ದಾರ ಹಾಗೂ ಮುಖಂಡರ ಸಮ್ಮುಖದಲ್ಲಿ ಆಕಾಂಕ್ಷಿಗಳನ್ನು ಸಮಾಧಾನಪಡಿಸಿ ಸಿದ್ದಪ್ಪ ಹಿರಗಪ್ಪನವರ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಇತರ ಆಕಾಂಕ್ಷಿಗಳಿಗೆ ಅವಕಾಶ ನೀಡುವ ಭರವಸೆ ಪಕ್ಷದ ಮುಖಂಡರಿಂದ ವ್ಯಕ್ತವಾಗಿದೆ. 

ಆಯ್ಕೆ ನಂತರ ಮಾತನಾಡಿದ ಮಾಜಿ ಸಚಿವ ಮನೋಹರ ತಹಶೀಲ್ದಾರ, ತಾಪಂ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದರು. ಆದರೆ, ಪಕ್ಷದ ಎಲ್ಲರೂ ಸೇರಿ ಈಗ ಒಬ್ಬರಿಗೆ ಅವಕಾಶ ನೀಡಲಾಗಿದೆ. ಎಲ್ಲರೂ ಸಮರ್ಥರೆ. ಆದರೆ, ಎಲ್ಲ ಸದಸ್ಯರು ಅಧ್ಯಕ್ಷರೆಂದು ತಿಳಿದು ತಾಪಂ ಆಡಳಿತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಈಗ ಪಕ್ಷದ 20 ತಾಪಂ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ವಿಪ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪಕ್ಷದ ಹಿತ ಹಾಗೂ ಸಾಮಾಜಿಕ ನ್ಯಾಯವನ್ನು ಮುಂದಿಟ್ಟುಕೊಂಡು ಎಲ್ಲ ಸದಸ್ಯರ ವಿಶ್ವಾಸದಿಂದ ಅವಿರೋಧ ಆಯ್ಕೆಗೆ ಅವಕಾಶವಾಗಿದೆ. ಶಿವಬಸಪ್ಪ ಪೂಜಾರ ಮಾತಿನಂತೆ ನಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರು ಇಂತಹ ಒಗ್ಗಟ್ಟನ್ನು ಪ್ರದರ್ಸಿಸಬೇಕು ಎಂದರು. ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸಿದರೆ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದರು.

ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಎ.ಎಂ.ಪಠಾಣ, ರಂಗನಗೌಡ ಪಾಟೀಲ, ಯಾಶೀರಖಾನ ಪಠಾಣ, ಸರಳಾ ಜಾಧವ, ಸಿದ್ದನಗೌಡ ಪಾಟೀಲ, ರಾಮಣ್ಣ ಪೂಜಾರ, ಬಿ.ಶಿವಪ್ಪ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next