Advertisement

ಹಿರ್ಗಾನದಲ್ಲಿ ಕುಡಿಯುವ ನೀರಿಗೂ ಸಂಕಷ್ಟ

11:52 PM May 11, 2019 | Team Udayavani |

ಹಿರ್ಗಾನ ಪಂಚಾಯತ್‌ ವ್ಯಾಪ್ತಿಯಲ್ಲಿ ಅಂತರ್ಜಲ ಬತ್ತಿ ಹೋಗಿದ್ದು ಜನರು ಕುಡಿಯುವ ನೀರಿಗೂ ಕಷ್ಟ ಪಡುವಂತಾಗಿದೆ. ಇದ್ದ ಬಾವಿ, ಬೋರ್‌ವೆಲ್‌ಗ‌ಳು ಉಪಯೋಗಕ್ಕೆ ಬಾರದಾಗಿದ್ದು ಸಮಸ್ಯೆ ಬಿಗಡಾಯಿಸಿದೆ.

Advertisement

ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೈತ್ರಿ ನಗರ, ಮಂಗಿಲಾರು, ನೆಲ್ಲಿಕಟ್ಟೆ ನಡುಗುಡ್ಡೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದ್ದು ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ.

ಪ್ರತಿ ವರ್ಷ ಮಾರ್ಚ್‌ನಿಂದ ಇಲ್ಲಿ ನೀರಿನ ಅಭಾವ ವಾಗುತ್ತಿದೆ. ಈ ಬಾರಿ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಈ ಪರಿಸರದ ಹೆಚ್ಚಿನ ಮನೆಗಳಲ್ಲಿ ತೆರೆದ ಬಾವಿ ಇದೆಯಾದರೂ ನೀರಿನ ಸೆಲೆ ಇಲ್ಲದೆ ಬರಡಾಗಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವಾರು ತೆರೆದ ಬಾವಿಗಳು ಇವೆಯಾದರೂ ಯಾವುದರಲ್ಲೂ ನೀರಿಲ್ಲ. ಹಳೆಯ ಕೊಳವೆ ಬಾವಿಗಳಲ್ಲಿ ಅತ್ಯಲ್ಪ ನೀರಿದೆಯಾದರೂ ಬಳಕೆಗೆ ಯೋಗ್ಯವಾಗಿಲ್ಲ.

ಮೈತ್ರಿ ನಗರದಲ್ಲಿ ನೀರೇ ಇಲ್ಲ
ಇಲ್ಲಿನ ನಿವಾಸಿಗಳು ದೂರದ ಪ್ರದೇಶಗಳಿಂದ ದುಬಾರಿ ಹಣತೆತ್ತು ವಾರಕ್ಕೆ ಒಂದೆರಡು ಬಾರಿ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಕಳೆದ 2 ವರ್ಷಗಳಿಂದ ನಳ್ಳಿ ನೀರಿನ ಸಂಪರ್ಕ ನೀಡುವಂತೆ ಪಂಚಾಯತ್‌ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿ ಸುಜಾತಾ ಸತೀಶ್‌ ತಮ್ಮ ನೋವು ತೋಡಿಕೊಂಡರು.

ಪ್ರತಿ ವರ್ಷ ಈ ಭಾಗದಲ್ಲಿ ಫೆಬ್ರವರಿ ಬಳಿಕ ಖಾಸಗಿ ಬಾವಿಗಳಲ್ಲಿ ನೀರಾರುತ್ತದೆ. ನಳ್ಳಿ ಅಥವಾ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಿದ್ದರೆ ಸಮಸ್ಯೆಗೆ ತುಸು ಪರಿಹಾರ ಕಾಣಬಹುದು ಎನ್ನುತ್ತಾರೆ ಸ್ಥಳೀಯರಾದ ಪ್ರಕಾಶ್‌ ನಾಯಕ್‌.

Advertisement

ಕಲುಷಿತ ನೀರೇ ಗತಿ
ನೆಲ್ಲಿಕಟ್ಟೆಯ ನಡುಗುಡ್ಡೆ ಪ್ರದೇಶದಲ್ಲಿ ಸಾರ್ವಜನಿಕ ತೆರೆದ ಬಾವಿ ಹಾಗೂ ಕೊಳವೆ ಬಾವಿ ಇದೆಯಾದರೂ ಕುಡಿಯುವ ನೀರಿನ ಸಂಕಷ್ಟ ತಪ್ಪಿಲ್ಲ. ತೆರೆದ ಬಾವಿಯಲ್ಲಿ ನೀರೇ ಬತ್ತಿ ಹೋಗಿದ್ದು ಕೊಳವೆ ಬಾವಿಯ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಈ ಭಾಗದ ಜನರು ಕುಡಿಯುವ ನೀರಿಗಾಗಿ ದೂರದ ಪ್ರದೇಶಗಳಿಗೆ ತೆರಳಿ ನೀರು ಸಂಗ್ರಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಖಾಸಗಿ ಬಾವಿ ತೋಡಲಾಗಿದ್ದರೂ ಅಲ್ಲೂ ನೀರು ಸಿಕ್ಕಿಲ್ಲ.

2 ದಿನಗಳಿಗೊಮ್ಮೆ ನೀರು
ಪಂಚಾಯತ್‌ ವ್ಯಾಪ್ತಿಯ ಮಂಗಿಲಾರು ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ಕುಡಿಯುವ ನೀರಿನ ಸಂಕಷ್ಟವಿದೆ. ಈ ಭಾಗಕ್ಕೆ 2 ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ.

ಜಲಮೂಲ ಅಭಿವೃದ್ಧಿಯಾಗಿಲ್ಲ
ಹಿರ್ಗಾನದ ದುಗ್ಗಣ್ಣರಾಯ ವಠಾರದಲ್ಲಿ 1 ಎಕ್ರೆಯಷ್ಟು ವಿಶಾಲ ಜಾಗದಲ್ಲಿ ಪ್ರಾಚೀನ ಹರಿಯಪ್ಪ ಕೆರೆ ಇದ್ದು ಸೂಕ್ತ ನಿರ್ವಹಣೆ ಇಲ್ಲದೆ ಹೂಳು ತುಂಬಿ ನೀರೇ ಇಲ್ಲದಂತಾಗಿದೆ.
ಹಿಂದೆ ಕೃಷಿ ಭೂಮಿಗೆ ನೀರು ಒದಗಿ ಸುತ್ತಿದ್ದ ಈ ಕೆರೆಯು ಈಗ ಸುಮಾರು 20 ಅಡಿಗಳಷ್ಟು ಹೂಳು ತುಂಬಿದೆ. ಈ ಕೆರೆ ಅಭಿವೃದ್ಧಿಗೊಂಡಲ್ಲಿ ಹಿರ್ಗಾನ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವಾರ್ಡ್‌ನವರ ಬೇಡಿಕೆ
– ಮೈತ್ರಿ ನಗರ ಪ್ರದೇಶಕ್ಕೆ ತುರ್ತಾಗಿ ಟ್ಯಾಂಕರ್‌ ನೀರು ಸರಬರಾಜು.
– ಅಗತ್ಯವಿರುವವರಿಗೆ ನಳ್ಳಿ ನೀರಿನ ಸಂಪರ್ಕ.
– ಪಂಚಾಯತ್‌ ವ್ಯಾಪ್ತಿಯ ಜಲ ಮೂಲಗಳಾದ ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸುವುದು.
– ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ

ಸಮಸ್ಯೆ ಪರಿಹಾರವಾಗಿಲ್ಲ
ಕಳೆದ 2 ತಿಂಗಳಿನಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ. ನೀರು ಪೂರೈಕೆ ಮಾಡುವಂತೆ ಪಂಚಾಯತ್‌ ಗಮನಕ್ಕೆ ತರಲಾಗಿದೆ. ಆದರೆ ಈ ವರೆಗೆ ಈ ಪ್ರದೇಶದ ಸಮಸ್ಯೆ ಪರಿಹಾರ ಕಂಡಿಲ್ಲ.
-ಸಂಧ್ಯಾ ಜಿ. ನಾಯ್ಕ,
ಮೈತ್ರಿ ನಗರ ನಿವಾಸಿ

ಒತ್ತಡ ತರುತ್ತೇವೆ
ನೀರಿನ ಸಮಸ್ಯೆ ಇರುವಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸೂಕ್ತ ನೀರಾವರಿ ಯೋಜನೆಯ ಅಗತ್ಯವಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ. ಹೆಚ್ಚಿನ ಒತ್ತಡ ತರಲಾಗುವುದು.
ಸಂತೋಷ್‌ ಕುಮಾರ್‌ ಶೆಟ್ಟಿ,
ಅಧ್ಯಕ್ಷರು, ಗ್ರಾ.ಪಂ. ಹಿರ್ಗಾನ

ಉದಯವಾಣಿ ಆಗ್ರಹ
ಸಮಸ್ಯೆ ಇರುವಲ್ಲಿಗೆ ಕೂಡಲೇ ಆದ್ಯತೆ ಮೇರೆಗೆ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕು. ಶಾಶ್ವತ ಪರಿಹಾರ ಕಲ್ಪಿಸಲು ತ್ವರಿತವಾಗಿ ಯೋಜನೆ ಅನುಷ್ಠಾನಿಸಬೇಕು.

ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

– ಜಗದೀಶ್‌ ರಾವ್‌, ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next