ಬೆಂಗಳೂರು: ಭ್ರೂಣಹತ್ಯೆ ನಡೆಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನ್ಯಾಯಲಯದಲ್ಲಿ ಸಾಕ್ಷಿ ಹೇಳಲು ಯಾರೂ ಮುಂದೆ ಬಾರದ ಕಾರಣ ಎಷ್ಟೋ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತೆ ಶಾಲಿನಿ ರಜನೀಶ್ ಬೇಸರ ವಕ್ಯಪಡಿಸಿದರು.
“ಸುಮಾರು 32 ಪ್ರಕರಣಗಳಲ್ಲಿ ಈಗಾಗಲೇ ಆರೋಪಿಗಳಿಗೆ ಶಿಕ್ಷೆಯಾಗಿದೆ. ಆದರೆ ಅದಕ್ಕೂ ಹೆಚ್ಚು ಪ್ರಕರಣಗಳು ಸಾಕ್ಷಿಗಳಿಲ್ಲದೆ ರದ್ದಾಗಿವೆ. ಭ್ರೂಣಹತ್ಯೆ ತಡೆಯುವಲ್ಲಿ ಸಾರ್ವಜನಿಕರ ಹೊಣೆ ಕೂಡ ದೊಡ್ಡದಿದ್ದು, ಇದನ್ನು ಅರಿತು ಭ್ರೂಣಹತ್ಯಾ ಕೇಂದ್ರಗಳ ಬಗ್ಗೆ ಜನತೆ ಸುಳಿವು ನೀಡಬೇಕು. ಹೀಗೆ ಮಾಹಿತಿ ನೀಡಿದವರ ವಿವರಗಳನ್ನು ಸರ್ಕಾರ ಗುಪ್ತವಾಗಿಡಲಿದೆ,’ ಎಂದು ಹೇಳಿದರು.
ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಮದರ್ ಹುಡ್ ಸಂಸ್ಥೆ ಹಮ್ಮಿಕೊಂಡಿದ್ದ “ಜನ ಜಾಗೃತಿ ನಡಿಗೆ’ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಭ್ರೂಣ ಹತ್ಯೆ ಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರ್ಕಾರ ಅವರನ್ನು ಮಟ್ಟಹಾಕದೆ ಬಿಡುವುದಿಲ್ಲ,’ ಎಂದರು.
ಬೆಳಗ್ಗೆ 7.30ಕ್ಕೆ ಕಬ್ಬನ್ ಪಾರ್ಕ್‌ನಲ್ಲಿ ಆರಂಭವಾದ ಜನ ಜಾಗೃತಿ ನಡಿಗೆ ಜಾಥಾ, ವಿಧಾನ ಸೌಧ ಹಾಗೂ ಕೆ.ಆರ್ ಸರ್ಕಲ್ ಮೂಲಕ ಮತ್ತೆ ಕಬ್ಬನ್ ಪಾರ್ಕ್ ಪ್ರವೇಶಿಸಿ ಸಮಾಪ್ತಿಯಾಯಿತು. ರೇವಾ ಮತ್ತು ಜೈನ್ ಕಾಲೇಜು ಸೇರಿದಂತೆ ನಗರದ ಹಲವು ವಿದ್ಯಾಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.
“ಬೇಟಿ ಬಚಾವೋ, ಬೇಟಿ ಪಡಾವೋ’ ಮತ್ತು “ಹೆಣ್ಣು ಮಗಳು ಅತ್ಯಮೂಲ್ಯ’ ಎಂಬ ನಾಮಫಲಕಗಳು ರಾರಾಜಿಸಿದವು. ಮದರ್ ಹುಡ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಜಯರತ್ನ ಹಾಗೂ ಇತರರು ಉಪಸ್ಥಿತರಿದ್ದರು.