Advertisement
ಕರಾವಳಿ ಪ್ರದೇಶದ ಪ್ರಮುಖ ಬೆಳೆಯಾಗಿರುವ ಅಡಿಕೆಗೆ ಹಿಂಗಾರು ಮಳೆ ಪೂರಕವಾಗಿದ್ದು ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ. ಭಾರತೀಯ ಹವಾಮಾನ ಇಲಾಖೆಯ ವಾಡಿಕೆಯಂತೆ ಅಕ್ಟೋಬರ್ 1ರಿಂದ ಹಿಂಗಾರು ಆರಂಭಗೊಂಡಿದ್ದರೂ ಅಕ್ಟೋಬರ್ ಕೊನೆಯ ವಾರದಲ್ಲಿ ಹಿಂಗಾರು ಮಾರುತ ಅಪ್ಪಳಿಸಿದೆ. ಮುಂದಿನ ಕೆಲವು ದಿನಗಳವರೆಗೆ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಕಳೆದ ಒಂದು ತಿಂಗಳಿನಿಂದ ಕರಾವಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 271 ಮಿ.ಮೀ. ವಾಡಿಕೆ ಮಳೆಯಲ್ಲಿ 497 ಮಿ.ಮೀ. ಮಳೆಯಾಗಿ ಶೇ. 83, ಉಡುಪಿ ಜಿಲ್ಲೆಯಲ್ಲಿ 227 ಮಿ.ಮೀ. ವಾಡಿಕೆ ಮಳೆಯಲ್ಲಿ 398 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ. 75 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 144 ಮಿ.ಮೀ. ವಾಡಿಕೆ ಮಳೆಯಲ್ಲಿ 196 ಮಿ.ಮೀ. ಮಳೆಯಾಗಿ ಶೇ. 36 ಹೆಚ್ಚು ಮಳೆಯಾಗಿದೆ. ಇನ್ನು ಒಟ್ಟಾರೆ ಕರಾವಳಿ ವಿಭಾಗದಲ್ಲಿ 193 ಮಿ.ಮೀ. ವಾಡಿಕೆ ಮಳೆಯಲ್ಲಿ 310 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ. 61ರಷ್ಟು ಹೆಚ್ಚು ಮಳೆ ಯಾಗಿದೆ. ವಾಡಿಕೆಯಂತೆ ಮಳೆ: ಮುನ್ಸೂಚನೆ
ರಾಜ್ಯ ಕರಾವಳಿ ಭಾಗದಲ್ಲಿ ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಕೃಷಿಕರಿಗೆ ಆಶಾದಾಯಕ ಬೆಳವಣಿಗೆಯಾಗಿದೆ.
Related Articles
Advertisement
ಕಳೆದ ಎರಡು ವರ್ಷ ಹಿಂಗಾರು ಅವಧಿಯಲ್ಲಿ ರಾಜ್ಯದಲ್ಲಿಯೇ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. 2016ರಿಂದ 2018ರವರೆಗೆ ಸತತ ನಾಲ್ಕು ವರ್ಷ ಹಿಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ ಕಳೆದ ವರ್ಷ ವಾಡಿಕೆಗಿಂತ ಶೇ.27ರಷ್ಟು ಹೆಚ್ಚು ಮಳೆ ಯಾಗಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರಾವಳಿ ಭಾಗದಲ್ಲಿ ಮಾತ್ರ ಅತ್ಯಧಿಕ ಮಳೆಯಾಗಿತ್ತು.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಅಕ್ಟೋಬರ್ ಕೊನೆಯ ವಾರದಲ್ಲಿ ರಾಜ್ಯಕ್ಕೆ ಹಿಂಗಾರು ಅಪ್ಪಳಿಸಿದೆ. ರಾಜ್ಯದಲ್ಲಿ ಈ ಬಾರಿಯ ಮುಂಗಾರು ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ ಹಿಂಗಾರು ವೇಳೆ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಮುಂದಿನ ಕೆಲ ದಿನಗಳಲ್ಲಿ ಕರಾವಳಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.– ಸುನಿಲ್ ಗವಾಸ್ಕರ್,
ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ