Advertisement

ಇನ್ನು ಫೇರ್ ಆ್ಯಂಡ್ ಲವ್ಲೀಯಲ್ಲಿ ‘ಫೇರ್’ ಇರುವುದಿಲ್ಲ! – ಕಾರಣ ಇಲ್ಲಿದೆ

11:46 PM Jun 25, 2020 | Hari Prasad |

ಮುಂಬಯಿ: ಸೌಂದರ್ಯ ವರ್ಧಕ ಸಾಧನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯು ತನ್ನ ಜನಪ್ರಿಯ ಸೌಂದರ್ಯ ವರ್ಧಕ ಉತ್ಪನ್ನ ‘ಫೇರ್ ಆ್ಯಂಡ್ ಲವ್ಲೀ’ಯ ಹೆಸರನ್ನು ಬದಲಾಯಿಸಲು ಉದ್ದೇಶಿಸಿದೆ.

Advertisement

ಸೌಂದರ್ಯಕ್ಕೆ ಹೊಸ ವ್ಯಾಖ್ಯಾನವನ್ನು ನೀಡುವುದು ಹಾಗೂ ತಮ್ಮ ಈ ಉತ್ಪನ್ನವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂಬ ಕಾರಣವನ್ನು ಯೂನಿಲಿವರ್ ನೀಡಿದೆ.

ಆದರೆ ಇತ್ತೀಚೆಗೆ ಅಮೆರಿಕಾದಲ್ಲಿ ಹುಟ್ಟಿಕೊಂಡ ಮತ್ತು ಆ ಬಳಿಕ ವಿಶ್ವದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿದ ‘ಬ್ಲ್ಯಾಕ್ ಲೈವ್ ಮ್ಯಾಟರ್ಸ್’ ಅಭಿಯಾನದಿಂದ ತಮ್ಮ ಈ ಉತ್ಪನ್ನಕ್ಕೆ ಆಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮವನ್ನು ಮನಗಂಡು ‘ಫೇರ್ ಆ್ಯಂಡ್ ಲವ್ಲೀ’ ಹೆಸರು ಬದಲಾಯಿಸುವ ಸಾಹಸಕ್ಕೆ ಕಂಪೆನಿ ಕೈ ಹಾಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಜನಪ್ರಿಯ ಸೌಂದರ್ಯವರ್ಧಕ ಉತ್ಪನ್ನದ ಹೊಸ ಹೆಸರನ್ನು ಶೀ‍ಘ್ರವೇ ಘೋಷಿಸಲಾಗುವುದು ಮತ್ತು ಹೊಸ ಹೆಸರಿಗೆ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂಬ ಮಾಹಿತಿಯನ್ನು ಕಂಪೆನಿ ನೀಡಿದೆ.

ಜನಾಂಗೀಯ ತಾರತಮ್ಯ ಹಾಗೂ ನಿಂದನೆಗೆ ಅಂತ್ಯಹಾಡುವ ನಿಟ್ಟಿನಲ್ಲಿ ವಿದೇಶಗಳಲ್ಲಿ ವ್ಯಾಪಿಸಿರುವ ಈ ಅಭಿಯಾನವು ಬಿಳಿ ತ್ವಚೆ ಹಾಗೂ ಬಿಳಿ ಬಣ್ಣದ ಪ್ರಚಾರ ಮಾಡುವ ಹಲವು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡಿದ್ದವು.

Advertisement

ಫೇರ್ ಆ್ಯಂಡ್ ಲವ್ಲೀ ಸಹಿತ ಇನ್ನೂ ಕೆಲವು ಸೌಂದರ್ಯವರ್ಧಕ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ಆನ್ ಲೈನ್ ಅಭಿಯಾನ ಜೋರಾಗಿಯೇ ನಡೆಯುತ್ತಿದೆ ಮತ್ತು ದೇಹದ ಬಣ್ಣದ ಹೆಸರಿನಲ್ಲಿ ಸೌಂದರ್ಯವರ್ಧನೆಯ ಪ್ರಚಾರವನ್ನು ಮಾಡುತ್ತಿರುವ ಹಾಗೂ ಆ ಮೂಲಕ ಜನಾಂಗೀಯ ನಿಂದನೆಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿವೆ ಎಂದು ಆರೋಪಿಸಿ ಈ ಉತ್ಪನ್ನಗಳ ವಿರುದ್ಧ ಆನ್ ಲೈನ್ ದೂರುಗಳನ್ನು ಸಂಗ್ರಹಿಸುವ ಕೆಲಸಗಳೂ ನಡೆಯುತ್ತಿವೆ.

ಇನ್ನು ಆನ್ ಲೈನ್ ದೂರು ದಾಖಲು ಪ್ಲ್ಯಾಟ್ ಫಾರಂಗಳಲ್ಲಿ ಒಂದಾಗಿರುವ ಚೇಂಜ್.ಆರ್ಗ್ ನಲ್ಲಿ ದಾಖಲಾಗಿರುವ ಒಂದು ದೂರಿನಲ್ಲಿ ‘ಫೇರ್ ಆ್ಯಂಡ್ ಲವ್ಲೀ’ ಉತ್ಪನ್ನವು ತ್ವಚೆ ಬಣ್ಣ ಹಾಗೂ ಕಪ್ಪು ವರ್ಣ ವಿರೋಧಿ’ ಅಂಶವನ್ನು ಪ್ರಚಾರ ಮಾಡುವುದರಿಂದ ಹೆಚ್.ಯು.ಎಲ್. ಇದರ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಈ ದೂರಿನಲ್ಲಿ ಆಗ್ರಹಿಸಲಾಗಿದೆ.

ಇದೆಲ್ಲವನ್ನೂ ಮನಗಂಡಿರುವ ಯುನಿಲಿವರ್ ಕಂಪೆನಿ ಈ ಅಭಿಯಾನದಿಂದ ತನ್ನ ಜನಪ್ರಿಯ ಉತ್ಪನ್ನದ ಮೇಲೆ ಭವಿಷ್ಯದಲ್ಲಿ ಉಂಟಾಗಬಹುದಾದ ಮಾರುಕಟ್ಟೆ ತೊಂದರೆಯನ್ನು ಊಹಿಸಿ ಈ ಉತ್ಪನ್ನದ ಹೆಸರು ಬದಲಾಯಿಸುವ ನಿರ್ಧಾರಕ್ಕೆ ಬಂದಿರುವುದು ಈ ಎಲ್ಲಾ ಬೆಳವಣಿಗೆಗಳಿಂದ ನಮಗೆ ಖಚಿತವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next