ವಿಜಯಪುರ: ರೈತರೊಬ್ಬರು ಪ್ರೀತಿಯಿಂದ ಸಾಕಿದ್ದ ಒಂದೇ ಎತ್ತು 18.1 ಲಕ್ಷ ರೂ. ಭಾರಿ ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರೈತ ರಾಮನಗೌಡ ಪಾಟೀಲ ಸಾಕಿದ್ದ ಎತ್ತು 18 ಲಕ್ಷ 1 ಸಾವಿರ ರೂ.ಗೆ ಮಾರಾಟವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಡಾಂಗೆ ಎಂಬ ರೈತ ಭಾರಿ ಮೊತ್ತದ ಎತ್ತು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
ರಾಮನಗೌಡ ಪಾಟೀಲ ಸಾಕಿದ್ದ ಎತ್ತು ಸುಮಾರು 5 ವರೆ ಅಡಿ ಎತ್ತರವಿದ್ದು, ಬಲಿಷ್ಠವಾದ ಮೈಕಟ್ಟು ಹೊಂದಿದೆ. ತೆರಬಂಡಿ ಸ್ಪರ್ಧಾವೀರ ಎಂದೇ ಖ್ಯಾತನಾಮ ಪಡೆದಿದ್ದ ಈ ಎತ್ತಿಗೆ ನಿತ್ಯವೂ ವೈವಿಧ್ಯಮಯ ಕಾಳು, ಹಿಂಡಿ, ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ನೀಡಿ ಬಲಿಷ್ಠವಾಗಿ ಬೆಳೆಸಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿರೈತರ ಗ್ರಾಮೀಣ ಸಾಹಸ ಕ್ರೀಡೆ ತೆರಬಂಡಿ ಎಳೆಯುವ ಹತ್ತಾರು ಸ್ಪರ್ಧೆಗಳಲ್ಲಿ ಬಹುಮಾನ ಬಾಚಿರುವ ಎತ್ತು ರೈತರಿಂದ ಹಿಂದುಸ್ತಾನ್ ಎಚ್.ಪಿ. ಎಂದೇ ಅಭಿದಾನ ಹೊಂದಿದೆ.
ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾಗವಿಸಿದ್ದ ರಾಮನಗೌಡ ಸಾಕಿದ್ದ ಎತ್ತು 4 ಬೈಕ್, 40 ಗ್ರಾಂ ಚಿನ್ನ, 2 ಎರಡು ಬೆಳ್ಳಿ ಗದೆಗಳನ್ನು ಗೆದ್ದಿರುವ ಶೂರ ಎತ್ತು ಎಂಬ ಕೀರ್ತಿ ಸಂಪಾದಿಸಿದೆ.
ಹೀಗಾಗಿ ತೆರಬಂಡಿ ಎಳೆಯುವ ಸ್ಪರ್ಧಾ ವೀರ ಎತ್ತು ಭಾರಿ ಮೊತ್ತಕ್ಕೆ ಮಾರಾಟ ಆಗಿರುವುದು ಭಾರಿ ಚರ್ಚೆಗೂ ಕಾರಣವಾಗಿದೆ.