Advertisement

ಹಿಂದೂಗಳಿಗೂ ಬೇಕು ಸಮಾನ ಹಕ್ಕು

12:06 PM Oct 29, 2018 | Team Udayavani |

ಬೆಂಗಳೂರು: ದೇಶದಲ್ಲಿ ಇತರೆ ಧರ್ಮದವರಂತೆ ಬಹುಸಂಖ್ಯಾತರಾದ ಹಿಂದೂಗಳಿಗೂ ಸಮಾನ ಹಕ್ಕುಗಳು, ಸೌಲಭ್ಯಗಳು ದೊರೆಯಬೇಕೆಂಬ ಒತ್ತಾಯಗಳು ಕೇಳಿಬರುತ್ತಿದ್ದು, ದೇಶದ ಸುಮಾರು 17 ರಾಜ್ಯಗಳಲ್ಲಿನ ನೂರಾರು ಹಿಂದೂ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು “ಹಿಂದೂ ಚಾರ್ಟರ್‌’ ರಚಿಸಿಕೊಂಡಿವೆ.

Advertisement

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಿಂದೂಗಳಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ಕೋರುವ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಮಾತನಾಡಿದ ಲೇಖಕ ಸಂಕ್ರಾಂತ್‌ ಸಾನು, ಅಕ್ಟೋಬರ್‌ 22ರಂದು ದೆಹಲಿಯಲ್ಲಿ 17 ರಾಜ್ಯಗಳ 100ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಸಭೆ ನಡೆಸಿದ್ದು,

ಇತರೆ ಧರ್ಮಗಳಿಗೆ ಇರುವಂತೆ ಹಿಂದೂಗಳಿಗೂ ಸಮಾನ ಹಕ್ಕುಗಳು ದೊರೆಯಲು ಕೇಂದ್ರಕ್ಕೆ ಮನವಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿವೆ. ಅದರಂತೆ 8 ಪ್ರಮುಖ ಬೇಡಿಕೆಗಳ ಪಟ್ಟಿ ಮಾಡಿದ್ದು, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.

ಹಿಂದೂಗಳಿಗೆ ಸಮಾನ ಹಕ್ಕು ಹಾಗೂ ಸೌಲಭ್ಯಗಳು ದೊರೆಯಬೇಕೆಂದು ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಅವರು 2016ರಲ್ಲಿಯೇ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಸರ್ಕಾರದ ಹಸ್ತಕ್ಷೇಪವಿಲ್ಲದೆ ನಡೆಸುವ ಸ್ವಾತಂತ್ರ್ಯ, ವಿದ್ಯಾರ್ಥಿ ವೇತನ, ಸರ್ಕಾರಿ ಯೋಜನೆಗಳು ಹಾಗೂ ಇತರೆ ಹಣಕಾಸು ಸಂಬಂಧಿತ ಯೋಜನೆಗಳು ಹಿಂದೂಗಳಿಗೂ ನೀಡುವುದು ಸೇರಿ ಹಲವಾರು ಅಂಶಗಳನ್ನು ಉಲ್ಲೇಖೀಸಿದ್ದು, ಮಸೂದೆ ಅಂಗೀಕಾರಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.

ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮಾತನಾಡಿ, ಬಹುಸಂಖ್ಯಾತ ಹಿಂದೂಗಳಿಗೆ ಸಮಾನ ಹಕ್ಕುಗಳು ಹಾಗೂ ಸೌಲಭ್ಯಗಳು ದೊರೆಯಬೇಕೆಂಬ ಅಭಿಯಾನ 1995ರಲ್ಲಿ ಆರಂಭವಾಗಿದ್ದು, ಇದೀಗ ಅದನ್ನು ಚುರುಕುಗೊಳಿಸಲಾಗಿದೆ.

Advertisement

ರಾಜಕೀಯ ಪಕ್ಷಗಳಿಂದಾಗಿ ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ಕಂದರ ಹೆಚ್ಚಾಗುತ್ತಿದ್ದು, ಅಸಮತೋಲನದ ವಾತಾವರಣ ಸೃಷ್ಟಿಯಾಗುತ್ತಿದೆ. ಸಮಾಜದ ಬೆಳವಣಿಗೆ ಹಾಗೂ ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿಯಾಗಿದ್ದು, ಎಲ್ಲರನ್ನೂ ಸಮನಾಗಿ ಕಾಣುವ ಹಾಗೂ ಸಮಾನ ಅವಕಾಶಗಳು ದೊರೆಯಬೇಕಿದೆ ಎಂದು ಹೇಳಿದರು.

ಸಂವಿಧಾನ ಹಿಂದೂ ವಿರೋಧಿ: ಹಿಂದೂಸ್ತಾನದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅವರ ವಿರುದ್ಧದ ನಿರ್ಣಯಗಳೇ ಹೆಚ್ಚಾಗಿ ಹೊರಬಿದ್ದಿವೆ. ಶಬರಿಮಲೆ ಪ್ರಕರಣದಲ್ಲಿನ ತೀರ್ಪು ಇದಕ್ಕೆ ಉದಾಹರಣೆಯಾಗಿದ್ದು, ಬಹುಸಂಖ್ಯಾತರ ವಿರುದ್ಧವಾಗಿಯೇ ನ್ಯಾಯಾಲಯದ ತೀರ್ಪುಗಳು ಬರುತ್ತಿರುವುದರಿಂದ ಸಂವಿಧಾನವೇ ಹಿಂದೂಗಳ ವಿರುದ್ಧವಾಗಿದೆ ಎಂಬ ಭಾವನೆ ಜನರಲ್ಲಿ ಹರಡುತ್ತಿದೆ ಎಂದು ದೆಹಲಿಯ “ಆಪ್‌’ ಶಾಸಕ ಕಪಿಲ್‌ ಮಿಶ್ರಾ ದೂರಿದರು. 

ಸಂವಿಧಾನದ ಪರಿಚ್ಛೇಧ 26ರಿಂದ 31ರವರೆಗೆ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಅದೇ ರೀತಿಯ ಸಮಾನ ಹಕ್ಕುಗಳನ್ನು ಹಿಂದೂಗಳಿಗೂ ನೀಡಬೇಕಿದೆ. ಸರ್ಕಾರ ಹಿಂದೂಗಳ ದೇವಾಲಯಗಳನ್ನು ತನ್ನ ಆಧೀನಕ್ಕೆ ಪಡೆಯುತ್ತದೆ. ಆದರೆ, ಇತರೆ ಧರ್ಮಿಯ ಮಂದಿರಗಳಲ್ಲಿ ಭಯೋತ್ಪಾಕರು ಸಿಕ್ಕರೂ ಅವುಗಳನ್ನು ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ ಎಂದು ಟೀಕಿಸಿದರು. 

ಸುದ್ದಿಗೋಷ್ಠಿಗೆ ಗೈರಾಗಿದ್ದ ಚಕ್ರವರ್ತಿ ಸೂಲಿಬೆಲೆ ಅವರು ವಿಡಿಯೋ ಮೂಲಕ ತನ್ನ ಬೆಂಬಲ ತಿಳಿಸಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್‌ನ ಗಿರೀಶ್‌ ಭಾರಧ್ವಾಜ್‌, ಚೆನ್ನೈನ ಸುರೇಂದ್ರನಾಥ ಇದ್ದರು. 

ಹಿಂದೂ ಚಾರ್ಟರ್‌ನ ಪ್ರಮುಖ ಬೇಡಿಕೆಗಳು
* ಸತ್ಯಪಾಲ್‌ ಸಿಂಗ್‌ ಅವರ ಖಾಸಗಿ ಮಸೂದೆ ಮಂಡನೆ.

* ಎಫ್ಆರ್‌ಸಿಎ ಕಾನೂನುಗಳನ್ನು ನಿಷೇಧಿಸುವುದು, ಒಸಿಐ ಪ್ರಜೆಗಳನ್ನು ಬಿಟ್ಟು ಬೇರೆಯವರಿಂದ ಹಣ ತರಲು ಅವಕಾಶ ನೀಡಬಾರದು.

* ಧರ್ಮ ಸ್ವಾತಂತ್ರ್ಯ ಕಾನೂನನ್ನು ಜಾರಿಗೆ ತರಬೇಕು.

* ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆಯಬೇಕು. ಜತೆಗೆ 35ಎ ವಿಧಿ ಸಹ ಹಿಂಪಡೆದು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಎಂದು ತ್ರಿವಳಿ ರಾಜ್ಯ ರಚಿಸಬೇಕು.

* ದೇಶದಿಂದ ಮಾಂಸ ಮತ್ತು ಗೋಮಾಂಸ ರಫ‌¤ನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

* ಹೈಂದವ ಸಂಸ್ಕೃತಿ ಜೀರ್ಣೋದ್ಧಾರ ನಿಗಮ ಸ್ಥಾಪಿಸಿ, ಪ್ರಾರಂಭದಲ್ಲಿಯೇ ನಿಗಮಕ್ಕೆ 10 ಸಾವಿರ ಕೋಟಿ ರೂ. ಬಂಡವಾಳ ಒದಗಿಸಬೇಕು. 

* ಪ್ರಸ್ತುತ ನಾಗರಿಕ ಕಾಯ್ದೆಗೆ ತಿದ್ದುಪಡಿ ತಂದು, ಇತರೆ ದೇಶಗಳಲ್ಲಿ ಹಿಂಸೆಗೆ ಒಳಗಾಗುತ್ತಿರುವ ಹಿಂದೂ, ಸಿಖ್‌, ಜೈನ್‌ ಮತ್ತು ಬೌದ್ಧರಿಗೆ ಭಾರತದಲ್ಲಿ ಆಶ್ರಯ ಸಿಗುವುದಕ್ಕೆ ಪೂರಕವಾಗಿ ಹೊಸ ಕಾನೂನು ತರಬೇಕು.

* ಎಲ್ಲ ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ನೀಡಿ, ದೇಶೀಯ ಭಾಷೆಗಳ ಮೂಲಕ ಭಾರತ ಮತ್ತು ಹಿಂದೂ ಧರ್ಮದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನಃಚೇತನದ ಕಾರ್ಯಕ್ಕೆ ಚಾಲನೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next