ನವದೆಹಲಿ: ಇಡೀ ಜಗತ್ತಿನಲ್ಲಿಯೇ ಹಿಂದೂಗಳು ಹೆಚ್ಚು ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರಾಗಿದ್ದಾರೆ ಎಂದು ಬಾಲಿವುಡ್ ನ ಹಿರಿಯ ಗೀತ ರಚನೆಕಾರ, ಸಾಹಿತಿ ಜಾವೇದ್ ಅಖ್ತರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಪಘಾತದಲ್ಲಿ ಮೆದುಳು ನಿಷ್ಕ್ರಿಯ; ಪುತ್ರಿಯ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು
ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಅಖ್ತರ್ ಬರೆದಿರುವ ಲೇಖನದಲ್ಲಿ, ಭಾರತವನ್ನು ಎಂದಿಗೂ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತೀಯರು ಸ್ವಭಾವತಃ ಸಹಿಷ್ಣುತೆ ಹೊಂದಿದವರಾಗಿದ್ದಾರೆ.
ವಾಸ್ತವವಾಗಿ ನಾನು ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿದ್ದೆ, ಹಿಂದೂಗಳು ಇಡೀ ಜಗತ್ತಿನಲ್ಲಿಯೇ ತುಂಬಾ ಶಿಸ್ತಿನ ಮತ್ತು ಸಹಿಷ್ಣುತೆ ಹೊಂದಿರುವ ಬಹುಸಂಖ್ಯಾತರು ಎಂಬುದಾಗಿ. ಈಗಲೂ ನಾನು ಆ ಮಾತನ್ನು ಪುನರಾವರ್ತಿಸುತ್ತೇನೆ. ಭಾರತ ಎಂದಿಗೂ ಅಫ್ಘಾನಿಸ್ತಾನದಂತೆ ಆಗಲು ಸಾಧ್ಯವಿಲ್ಲ. ಯಾಕೆಂದರೆ ಭಾರತೀಯರು ಸ್ವಭಾವತಃ ಉಗ್ರವಾದ ಹೊಂದಿಲ್ಲ. ಭಾರತೀಯರು ಸೌಮ್ಯವಾಗಿರುವುದು ಅವರ ಡಿಎನ್ ಎನಲ್ಲೇ ಇದೆ ಎಂದು ಅಖ್ತರ್ ಸಾಮ್ನಾದಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಜಾವೇದ್ ಅಖ್ತರ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರ ಅಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ತಾಲಿಬಾನ್ ಮನಸ್ಥಿತಿಯನ್ನು ಭಾರತದ ಆರ್ ಎಸ್ ಎಸ್ ಗೆ ಹೋಲಿಕೆ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದಲ್ಲದೇ, ಅಖ್ತರ್ ಕ್ಷಮೆಯಾಚಿಸುವವರೆಗೂ ಅವರ ಸಿನಿಮಾಗಳನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿದ್ದವು.