ಕೋಲ್ಕತಾ:” ನಾನು ಇಲ್ಲಿರುವವರೆಗೆ, ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲಾಗುವುದಿಲ್ಲ. ನಾನು ಇರುವವರೆಗೂ ಯಾರೂ SC, ST ಮತ್ತು OBC ಮೀಸಲಾತಿಯನ್ನು ಕಿತ್ತು ಹಾಕಲು ಸಾಧ್ಯವಿಲ್ಲ, ನಾನು ಇಲ್ಲಿ ಇರುವವರೆಗೂ ನೀವು ಭಗವಾನ್ ರಾಮನನ್ನು ಪೂಜಿಸುವುದನ್ನು ಮತ್ತು ರಾಮನವಮಿಯನ್ನು ಆಚರಿಸುವುದನ್ನು ಯಾರೂ ತಡೆಯಲಾರರು, ರಾಮ ಮಂದಿರದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ, ಸಿಎಎ ರದ್ದುಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ನನ್ನ ಐದು ಗ್ಯಾರಂಟಿಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಶ್ಚಿಮ ಬಂಗಾಳದಲ್ಲಿ ಗುಡುಗಿದ್ದಾರೆ.
ಬ್ಯಾರಕ್‌ಪೋರ್, ಹೂಗ್ಲಿಯಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ” ಬಂಗಾಳದಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ ಎಂದು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
”ಬರೆದಿಟ್ಟುಕೊಳ್ಳಿ, ಕಾಂಗ್ರೆಸ್‌ನ ‘ಶೆಹಜಾದಾ’ ನ ವಯಸ್ಸಿಗಿಂತ ಕಡಿಮೆ ಸ್ಥಾನಗಳನ್ನು ಕಾಂಗ್ರೆಸ್ ಈ ಬಾರಿ ಪಡೆಯುತ್ತದೆ” ಎಂದು ರಾಹುಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
‘ಪಾಶ್ಚಿಮಾತ್ಯ ಜನರು ಈ ದಿನವನ್ನು ತಾಯಂದಿರ ದಿನವೆಂದು ಆಚರಿಸುತ್ತಾರೆ, ಆದರೆ ಭಾರತದಲ್ಲಿ ನಾವು ನಮ್ಮ ತಾಯಿ, ಮಾ ದುರ್ಗ, ಮಾ ಕಾಳಿ ಮತ್ತು ಭಾರತ ಮಾತೆಯನ್ನು ವರ್ಷದ 365 ದಿನಗಳ ಕಾಲವೂ ಪೂಜಿಸುತ್ತೇವೆ” ಎಂದರು.
ಬಿಜೆಪಿಯ ಅಭಿವೃದ್ಧಿಯ ಪ್ರಯತ್ನಗಳ ನಡುವೆ, ಟಿಎಂಸಿ ತನ್ನದೇ ಆದ ಕೆಲಸದಲ್ಲಿ ನಿರತವಾಗಿದೆ. ಟಿಎಂಸಿ ಮತ್ತು ಅದರ ನಾಯಕರ ಕೆಲಸವೇನು? ‘ಇಲ್ಲಿ ಮಾಫಿಯಾ ರಾಜ್ ನಡೆಯುತ್ತಿದೆ . ಮೋದಿ ಹರ್ ಘರ್ ಜಲ್ ಎಂದರೆ ಟಿಎಂಸಿ ಹರ್ ಘರ್ ಬಾಂಬ್” ಎನ್ನುತ್ತಿದೆ ಎಂದು ಕಿಡಿ ಕಾರಿದರು.