Advertisement

ಹಿಂದುತ್ವ ಭಾಷಣದ ಸಲಕರಣೆಯಲ್ಲ; ಅನಂತ ಕುಮಾರ್‌ ಹೆಗಡೆ

04:42 PM Jan 13, 2023 | Team Udayavani |

ಪುತ್ತೂರು: ಜಗತ್ತಿನ ಶ್ರೇಷ್ಠ ವಿಚಾರಗಳನ್ನು ಸ್ವಾಗತಿಸುವ ಸಂಪ್ರದಾಯ ಹಿಂದೂ ಧರ್ಮದ್ದು. ಇಲ್ಲಿ ನಾವು ಸತ್ಯದ ಇತಿಹಾಸಕ್ಕೆ ಬೆಲೆ ಕೊಡುತ್ತೇವೆ. ಅದಕ್ಕಾಗಿ ಬದುಕಿನಲ್ಲಿ ಉದಾತ್ತ ಚಿಂತನೆಗಳನ್ನು ಪಾಲಿಸಿಕೊಂಡು ದೇಶ, ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಮಹಾಪುರುಷರ ಹುಟ್ಟನ್ನು ಸ್ಮತಿಯಲ್ಲಿ ಇಟ್ಟುಕೊಂಡು ಆ ದಿನವನ್ನು ವಿಶೇಷವಾಗಿ ಆಚರಿಸುತ್ತೇವೆ. ಹಿಂದುತ್ವವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಹಿಂದುತ್ವ ಭಾಷಣದ ಸಲಕರಣೆಯಲ್ಲ. ಶರೀರ ಬುದ್ಧಿ ಮತ್ತು ಆತ್ಮದ ಜೀವಂತಿಕೆ ಇರುವುದು ನಮ್ಮ ಸಂಪ್ರದಾಯದ ಪಾಲನೆಯಲ್ಲಿ. ನಾವು ಯೋಗ್ಯತೆಯಲ್ಲಿ ಹಿಂದೂಗಳಾಗಬೇಕು. ಬದುಕಿನ ಓಘ ಮತ್ತು ಶೈಲಿ ಯೋಗ್ಯವಾಗಿದ್ದಾಗ ಕನಸು ಕಾಣಲು ಅರ್ಹರಾಗಿರುತ್ತೇವೆ ಎಂದು ಭಾರತ ಸರಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವ, ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ್‌ ಹೆಗಡೆ ಹೇಳಿದರು.

Advertisement

ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ “ಹಿಂದುತ್ವ- ರಾಷ್ಟ್ರೀಯತೆ’ ಎಂಬ ಸಂಕಲ್ಪದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿವೇಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು ವಿವೇಕಾನಂದರು ಓಜಸ್ವಿಯಾದಂತಹ ಶಬ್ದಗಳಿಗೆ ಅನುಸಾರವಾಗಿ ಬದುಕಿದವರು. ಆದ್ದರಿಂದಲೇ ಜಗತ್ತು ಅವರನ್ನು ಸ್ವೀಕರಿಸಿತು. ಅವರ ಬದುಕು ಯುವ ಸಮುದಾಯಕ್ಕೆ ದಾರಿ ದೀಪ. ಭಾರತೀಯರಾದ ನಾವು ಜಗತ್ತಿನ ನಿರೀಕ್ಷೆಗೆ ತಕ್ಕಂತೆ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ವೋದ್ಯೋಗಿಗಳಾಗುವಂತೆ ಮತ್ತು ಶಿಷ್ಯ ವೃಂದವನ್ನು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುವಂತೆ ಪ್ರೇರೇಪಿಸಬೇಕು ಎಂದರು.

ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಸ್ವಾಗತಿಸಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಪಿ. ಸತೀಶ್‌ ರಾವ್‌ ವಂದಿಸಿದರು. ಉಪನ್ಯಾಸಕಿ ಕವಿತಾ ನಿರೂಪಿಸಿದರು.

ವಿವೇಕಾನಂದ ಸ್ವಾಯತ್ತ ಕಾಲೇಜಿನ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ವಿಕಸನ ಪತ್ರಿಕೆ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿಶೇಷ ಸಂಚಿಕೆಗಳನ್ನು ಅನಾವರಣಗೊಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next