Advertisement
ಶಾಂತವಾಗಿದ್ದ ಕುಮಟಾದಲ್ಲಿ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪತ್ತೆಯಾದ ಪರೇಶ್ ಮೇಸ್ತ ಎಂಬ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣ ಕೋಮು ಸೌಹಾರ್ದತೆ ಕದಡಿದೆ. ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಕುಮಟಾ ಬಂದ್‌ನಲ್ಲಿ ನಡೆದ ಘಟನಾವಳಿಗಳು ಕರಾವಳಿಯನ್ನು ಇನ್ನಷ್ಟು ಉದ್ವಿಗ್ನ ಸ್ಥಿತಿಗೆ ತಂದು ನಿಲ್ಲಿಸಿದೆ.
Related Articles
Advertisement
ಐದನೇ ದಿನವೂ ಹೊನ್ನಾವರ ಬಂದ್ಐದನೇ ದಿನವೂ ತಾಲೂಕಿನಲ್ಲಿ ಅಘೋಷಿತ ಬಂದ್ ನಡೆದಿದೆ. ಹಳ್ಳಿಗಳಲ್ಲಿ ಚಿಕ್ಕಪುಟ್ಟ ಘರ್ಷಣೆ ಹೊರತುಪಡಿಸಿ ಪರಿಸ್ಥಿತಿ ಶಾಂತವಾಗಿದೆ. ಜಿಲ್ಲಾಧಿಕಾರಿ ಆದೇಶದ ಪ್ರಕಾರ ಸೋಮವಾರ ಬೆಳಗ್ಗೆ ಬಸ್‌ಗೆ ಬಂದ ಜನ ಏಕಾಏಕಿ ಬಸ್ ಸಂಚಾರ ನಿಲ್ಲಿಸಿದ್ದರಿಂದ ಮನೆಗೆ ಹೋಗಲು ಪರದಾಡಿದರು. ಭದ್ರತೆ ನೀಡುವುದಾಗಿ ಪೊಲೀಸರು ಹೇಳಿದ್ದರಿಂದ ಬಾಗಿಲು ತೆಗೆದ ಅಂಗಡಿಕಾರರನ್ನು ಬೆದರಿಸಿ, ಮುಚ್ಚಿಸಲಾಯಿತು. ಕುಮಟಾದಲ್ಲಿ ಬಂದ್ ನಡೆದ ಕಾರಣ ಪೊಲೀಸ್ ಅಧಿ ಕಾರಿಗಳು ಮತ್ತು ಮೀಸಲು ಪಡೆ ಅತ್ತ ತೆರಳಿದೆ. ಜನರಲ್ಲಿ ವಾಟ್ಸಆ್ಯಪ್, ಫೇಸ್‌ಬುಕ್ ಮುಖಾಂತರ ಬೆದರಿಕೆ ಹಾಕಲಾಗುತ್ತಿದೆ. ಮೀನುಗಾರಿಕೆ ಸಹಿತ ಎಲ್ಲ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಅಪಾರ ನಷ್ಟವಾಗಿದೆ. ಜಿಲ್ಲಾದ್ಯಂತ ಮೂರು ದಿನ ನಿಷೇಧಾಜ್ಞೆ
ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ಉತ್ತರ ಕನ್ನಡ ಜಿಲ್ಲಾದ್ಯಂತ ಡಿ.12ರಿಂದ 14ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ ಹೊರತುಪಡಿಸಿ ಜಿಲ್ಲಾದ್ಯಂತ 11 ತಾಲೂಕುಗಳಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆ, ಬೈಕ್ ರ್ಯಾಲಿ ನಿಷೇಧಿಸಲಾಗಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1953 ಕಲಂ 35ರಡಿಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಪ್ರದತ್ತವಾದ ಅಧಿಕಾರ ಬಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ. 15 ಮಂದಿ ವಶಕ್ಕೆ
ಕುಮಟಾದಲ್ಲಿ ಪ್ರತಿಭಟನೆ ವೇಳೆ ಪಶ್ಚಿಮ ವಲಯ ಐಜಿಪಿ ಹೇಮಂತ ನಿಂಬಾಳ್ಕರ್ ಅವರ ಇನ್ನೋವಾ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 15 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಆದರೆ, ವಿಚಾರಣೆಗಾಗಿ ಹತ್ತು ಜನರನ್ನು ಮಾತ್ರ ವಶಕ್ಕೆ ಪಡೆಯಲಾಗಿದ್ದು, ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು
ಸ್ಪಷ್ಟಪಡಿಸಿವೆ. ಐಜಿಪಿ ಕಾರು ಚಾಲಕ ಕಲ್ಲು ತೂರಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆಲ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿವಿಧೆಡೆ ಪ್ರತಿಭಟನೆ
ಕಾರವಾರ: ಹತ್ಯೆ ಖಂಡಿಸಿ ಹೊನ್ನಾವರ, ಕುಮಟಾದಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಮುಂಡಗೋಡದಲ್ಲೂ ಸೋಮವಾರ ಬಂದ್ ಕರೆ ನೀಡಲಾಗಿತ್ತು. ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅರ್ಧಗಂಟೆಗೂ ಹೆಚ್ಚು ಸಮಯ ಹೆದ್ದಾರಿ ಬಂದ್ ಮಾಡಿ, ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಾಸಕಿ ಶಾರದಾ ಶೆಟ್ಟಿ ಅವರ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಶಿರಸಿ ಬಂದ್‌ಗೆ ಕರೆ ನೀಡಿವೆ. ರಾಜ್ಯ ಸರ್ಕಾರದಿಂದ ಹೋರಾಟ ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುವ ಅವಶ್ಯಕತೆ ಏನಿತ್ತು? ಇದನ್ನು ಖಂಡಿಸಿ ಮಂಗಳವಾರ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕುಮಟಾದಲ್ಲಿ ಪ್ರತಿಭಟನೆ ಮಾಡುತ್ತೇವೆ. ರಾಜ್ಯಪಾಲರು ಮತ್ತು ಕೇಂದ್ರ ಗೃಹ ಖಾತೆ ಸಚಿವರನ್ನು ಭೇಟಿ ಮಾಡುತ್ತೇವೆ.
– ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ಸತ್ತ ಹೆಣದ ಮೇಲೆ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ಅವರಿಗೆ ರಾಜಕೀಯ ಸಂಸ್ಕೃತಿ ಇಲ್ಲ. ಪರೇಶ್ ಸಾವಿನ ಪೋಸ್ಟ್ ಮಾರ್ಟಂ ವರದಿ ಬರುವ ಮೊದಲೇ ಬಿಜೆಪಿಯವರು ಅವನ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿಜೆಪಿಯವರು ಡಾಕ್ಟರ್‌ಗಳಿದ್ದಂತೆ. ಅವರು ಹೆಣದ ಬಾಡಿ ನೋಡಿದ ತಕ್ಷಣ ಎಲ್ಲವೂ ಗೊತ್ತಾಗಿ ಬಿಡುತ್ತದೆ. ಐಜಿಪಿ ಹೇಮಂತ ನಿಂಬಾಳ್ಕರ್ ನಾಲ್ಕು ದಿನದಿಂದ ಅಲ್ಲಿಯೇ ಇದ್ದಾರೆ.
– ರಾಮಲಿಂಗಾರೆಡ್ಡಿ,ಗೃಹ ಸಚಿವ ಹೊನ್ನಾವರದಲ್ಲಿ ನಡೆದ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಸಿಬಿಐ ಮೂಲಕ ನಡೆಸುವ ಕುರಿತು
ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ