ಬೆಂಗಳೂರು: ಕೇಸರಿ ಬಣ್ಣದ ಧ್ವಜಕ್ಕೆ ವಿಶೇಷ ಪೂಜೆ, ಖಡ್ಗ ಹಿಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮನ ವೇಷ ಧರಿಸಿದ ಯುವತಿಯರ ವಿಶೇಷ ಆಕರ್ಷಣೆಯೊಂದಿಗೆ ಹಿಂದು ಐಕ್ಯತಾ ಮೆರವಣಿಗೆ ವಿಜಯನಗರದಿಂದ ಹಂಪಿ ನಗರದವರೆಗೆ ನಡೆಯಿತು.
ಸನಾತನ ಸಂಸ್ಥೆ ಸಂಸ್ಥಾಪಕ ಡಾ. ಜಯಂತ ಬಾಳಾಜಿ ಆಠವಲೆ ಅವರ 77ನೇ ಜನ್ಮ ದಿನಾಚರಣೆಯ ಪ್ರಮುಕ್ತ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದು ಐಕ್ಯತಾ ರ್ಯಾಲಿಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಜಯನಗರದ ಆದಿಚುಂಚನಗಿರಿ ಮಠದಿಂದ ಧರ್ಮ ಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಮೆರವಣಿಗೆಯು ವಿಜಯನಗರ ವಿವಿಧ ಮಾರ್ಗವಾಗಿ ಹಂಪಿ ನಗರದ ಸಂಕಷ್ಟ ಗಣಪತಿ ದೇವಾಸ್ಥಾನದಲ್ಲಿ ಸಮಾರೂಪಗೊಂಡಿತು.
ಮೆರವಣಿಗೆಯ ಆರಂಭದಲ್ಲಿ ಸನಾತನ ಸಂಸ್ಥೆಯ ಧರ್ಮ ಧ್ವಜವಾದ ಕೇಸರಿ ಬಣ್ಣದ ಧ್ವಜವನ್ನು ವಿಧಿವಿಧಾನವನ್ನು ಆರೋಹಣ ಮಾಡಿ, ಪೂಜೆ ಸಲ್ಲಿಸಲಾಯಿತು. ನಂತರ ಆದಿಚುಂಚನಗಿರಿ ಮಹಾಸಂಸ್ಥಾನದ ಪೂಜ್ಯ ಸೌಮ್ಯನಾಥ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ರಣರಾಗಿಣಿ ಶಾಖೆಯ ಯುವತಿಯರು ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೀರ ವನಿತೆಯರ ವೇಷ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು, ತಲೆಗೆ ಕೇಸರಿ ಬಣ್ಣದ ಮುಂಡಾಸು ಕಟ್ಟಿಕೊಂಡು ತೆರೆದ ಜೀಪಿನಲ್ಲಿ ಸಾಗಿಬಂದ ದೃಶ್ಯ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ. ಉಮೇಶ ಶರ್ಮಾ ಗುರೂಜಿ, ಡಾ. ಆಠವಲೆಯವರು ಹಿಂದೂ ಧರ್ಮದ ರಕ್ಷಣೆಗಾಗಿ ಶ್ರಮಿಸಿದ್ದರು. ಅವರ ಮಾರ್ಗದರ್ಶದಡಿ ಧರ್ಮ ಸಂಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಮೋಹನ ಗೌಡ, ಮಾರುತಿ ಮೆಡಿಕಲ್ ಮಾಲೀಕ ಮಹೇಂದ್ರ ಮನ್ಹೊತ್ರ, ಗೋ ರಕ್ಷಕ ರಾಘವೇಂದ್ರ, ಮಾನವ ಹಕ್ಕುಗಳ ಸಂಘದ ಪ್ರದೀಪ, ವಿಜಯ ವಿವೇಕ ಪ್ರತಿಷ್ಠಾನದ ಶಕಿಲಾ ಶೆಟ್ಟಿ, ರಣರಾಗಿಣಿ ಶಾಖೆಯ ಭವ್ಯ ಗೌಡ ಸೇರಿ ನೂರಾರು ಅನೇಕರು ಉಪಸ್ಥಿತರಿದ್ದರು.