ಯುನೈಟೆಡ್ ಕಿಂಗ್ ಡಮ್: ಬ್ರಿಟನ್ ನ ಲೀಸೆಸ್ಟೆರ್ ನಲ್ಲಿ ಹಿಂದೂ ದೇವಾಲಯ ಗುರಿಯಾಗಿರಿಸಿ ದಾಳಿ ನಡೆಸಿ, ಹಿಂಸಾಚಾರ ಎಸಗಿರುವ ಘಟನೆ ವಿರುದ್ಧ ಲಂಡನ್ ನಲ್ಲಿರುವ ಭಾರತೀಯ ಹೈ ಕಮಿಷನ್ ತೀವ್ರವಾಗಿ ಖಂಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:‘ಲಂಕೆ’ಯಲ್ಲಿ ವರ್ಷದ ಹರ್ಷ!; ಸಂಚಾರಿ ವಿಜಯ್ ಗೆ ಗೆಲುವು ಅರ್ಪಣೆ
ಈ ದಾಳಿಯಲ್ಲಿ ಶಾಮೀಲಾದವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಪೂರ್ವ ಲೀಸೆಸ್ಟೆರ್ ನಲ್ಲಿರುವ ಹಿಂದೂ ದೇವಾಲಯವನ್ನು ಗುರಿಯಾಗಿರಿಸಿ ದಾಳಿ ನಡೆಸಿ, ಕೇಸರಿ ಧ್ವಜವನ್ನು ಎಳೆದು ಕೆಳಗೆ ಹಾಕಿದ ಘಟನೆ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇತ್ತೀಚೆಗೆ ನಡೆದ ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆದ ನಂತರ ಯುನೈಟೆಡ್ ಕಿಂಗ್ ಡಮ್ ನಲ್ಲಿ ಹಿಂದೂ ಮತ್ತು ಮುಸ್ಲಿಮ್ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಯುಕೆ ಪೊಲೀಸರ ಸಮ್ಮುಖದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಿಂದೂ ದೇವಾಲಯದ ಆವರಣ ಹತ್ತಿ, ಕೇಸರಿ ಧ್ವಜವನ್ನು ಕಿತ್ತೆಸೆದ ಘಟನೆ ವಿಡಿಯೋದಲ್ಲಿ ದಾಖಲಾಗಿದೆ.
ಘರ್ಷಣೆ ಸಂಭವಿಸಿದ ನಂತರ ಲೀಸೆಸ್ಟರ್ ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹಿಂಸಾಚಾರ ನಡೆಸಲು ಸಂಚು ನಡೆಸಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಯುಕೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.