ಗ್ವಾಲಿಯರ್: ಹಿಂದೂ ಸಮಾಜದ ನಂಬಿಕೆಗಳು ಹಾಗೂ ಸಂಪ್ರದಾಯವನ್ನು ರಕ್ಷಿಸುವ ಅಗತ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಒತ್ತು ನೀಡಲಾಗಿದೆ.
ಗ್ವಾಲಿಯರ್‌ನಲ್ಲಿ ನಡೆದ ಮೂರು ದಿನಗಳ ಸಭೆಯಲ್ಲಿ ಈ ಮಹತ್ವದ ನಿಲುವಳಿ ಮಂಡಿಸಲಾಗಿದೆ. ಅಷ್ಟೇ ಅಲ್ಲ, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ ಎಂದು ನಿಲುವಳಿಯಲ್ಲಿ ಹೇಳಲಾಗಿದೆ. ಸಂಪ್ರದಾಯವನ್ನು ಗಣನೆಗೆ ತೆಗೆದುಕೊಳ್ಳದೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಘಾಸಿಗೊಳಿಸುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ. ಇದನ್ನು ದೇಶದ ಹೊರಗಿನ ಹಿತಾಸಕ್ತಿಗೆ ಅನುಗುಣವಾಗಿ ಮಾಡಲಾಗುತ್ತಿದೆ. ಶಬರಿಮಲೆ ಪ್ರಕರಣ ಈ ನಿಟ್ಟಿನಲ್ಲಿ ಇತ್ತೀಚಿನ ಉದಾಹರಣೆ ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ.
ಧಾರ್ಮಿಕ ಮುಖಂಡರ ಅಭಿಪ್ರಾಯಗಳನ್ನು ಹಾಗೂ ಮಹಿಳಾ ಭಕ್ತರ ಭಾವನೆಗಳನ್ನೂ ಈ ತೀರ್ಪು ನೀಡುವಾಗ ಪರಿಗಣಿಸಲಾಗಿಲ್ಲ. ಮರುಪರಿಶೀಲನೆ ಹಾಗೂ ಇತರ ದಾವೆಗಳ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಎಲ್ಲರ ಅಭಿಪ್ರಾಯ, ಭಾವನೆಗಳನ್ನೂ ಪರಿಗಣಿಸುತ್ತದೆ ಎಂದು ಪ್ರತಿನಿಧಿ ಸಭೆ ಆಶಾಭಾವ ಹೊಂದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ಭಕ್ತರ ಭಾವನೆಗಳಿಗೆ ಘಾಸಿ ಉಂಟಾಗಿದೆ ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ.
ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ: ಇದೇ ವೇಳೆ, ಸಿದ್ಧ ಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸ್ವಾಮಿ ಜಗದಾತ್ಮಾನಂದ, ಕೇಂದ್ರ ಸಚಿವ ಅನಂತ್‌ಕುಮಾರ್, ಸಿ.ಕೆ. ಜಾಫರ್ ಷರೀಫ್, ಅಂಬರೀಷ್, ಜಾರ್ಜ್ ಫೆರ್ನಾಂಡಿಸ್‌ಸೇರಿ ಇತ್ತೀಚೆಗೆ ಅಗಲಿದ ಪ್ರಮುಖ ಗಣ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 1400ಕ್ಕೂ ಹೆಚ್ಚು ಕಾರ್ಯಕರ್ತರು, ಆರೆಸ್ಸೆಸ್‌ನ ಹಲವು ಮುಖಂಡರು ಈ ಸಭೆಗೆ ಹಾಜರಾಗಿದ್ದರು. ಶುಕ್ರವಾರ ಆರಂಭವಾದ 3 ದಿನಗಳ ಸಭೆ ಭಾನುವಾರ ಮುಕ್ತಾಯ ಕಂಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ಈ ಮಹತ್ವದ ಸಭೆ ನಡೆದಿದ್ದು, 2014ರ ಲೋಕಸಭೆ ಚುನಾವಣೆಗಿಂತ ಹೆಚ್ಚಿನ ಮತದಾರರನ್ನು ಬಿಜೆಪಿ ಯತ್ತ ಸೆಳೆಯಲು ಅಗತ್ಯ ಸಹಕಾರವನ್ನು ಸಂಘ ನೀಡಲು ಯೋಜಿಸಿದೆ ಎಂದೂ ಹೇಳಲಾಗಿದೆ.ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪ್ರತಿನಿಧಿ ಸಭೆಗೆ ಹಾಜರಾಗಿದ್ದರು. ಸಂಘದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು ಎಂದು ಹೇಳಲಾಗಿದೆ. ಆದರೆ ಪ್ರತಿನಿಧಿ ಸಭೆಯು ಯಾವುದೇ ರಾಜಕೀಯ ವಿಚಾರಗಳ ಚರ್ಚೆ ನಡೆಸಿಲ್ಲ ಎಂದು ಆರೆಸ್ಸೆಸ್ ಮುಖಂಡರು ಹೇಳಿದ್ದಾರೆ.