ನವದೆಹಲಿ: ದಿಲ್ಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ (ಜೆಎನ್ ಯು) ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ಮುಸುಕುಧಾರಿ ಅನಾಮಧೇಯ ವ್ಯಕ್ತಿಗಳು ನಡೆಸಿದ ದಾಳಿ ಪ್ರಕರಣದ ಹೊಣೆಯನ್ನು ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಹೊತ್ತುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
“ಜೆಎನ್ ಯು ದೇಶ ವಿರೋಧಿ ಚಟುವಟಿಕೆಗಳ ತಾಣವಾಗಿದೆ. ನಾವು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೆಎನ್ ಯು ಮೇಲೆ ನಡೆದ ದಾಳಿಯ ಪೂರ್ಣ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಅಂದು ದಾಳಿ ನಡೆಸಿದವರು ನಮ್ಮ ಕಾರ್ಯಕರ್ತರು” ಎಂದು ಚೌಧರಿ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಜೆಎನ್ ಯು ಹಿಂಸಾಚಾರ ಸಂಬಂಧ ಸೋಮವಾರ ಕೆಲ ವಿಡಿಯೋ ಮತ್ತು ಫೋಟೋಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಈ ಘಟನೆ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಮುಸುಕುಧಾರಿಗಳಾಗಿ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರು ಎಬಿವಿಪಿಗೆ ಸಂಬಂಧಿಸಿದವರು ಎಂಬಂತೆ ಕಂಡು ಬರುತ್ತಿದೆ ಎಂದು ಆರೋಪಿಸಲಾಗಿತ್ತು.
ಮುಸುಕುಧಾರಿ ವ್ಯಕ್ತಿಗಳು ಹರಿತವಾದ ಆಯುಧ, ಹ್ಯಾಮರ್ ಹಿಡಿದು ಜೆಎನ್ ಯು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದರು. ದಿಲ್ಲಿ ಪೊಲೀಸರು ಕೂಡಾ ಮುಖದ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನ ಬಳಸಿ ಮುಸುಕುಧಾರಿಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ತಿಳಿಸಿದ್ದರು.
ಭಾನುವಾರ ರಾತ್ರಿ ನಡೆದ ದಾಳಿಯ ಹಿಂದೆ ಎಬಿವಿಪಿ ಮುಖಂಡರ ಕೈವಾಡ ಇದ್ದಿರುವುದಾಗಿ ಜೆಎನ್ ಯು ವಿದ್ಯಾರ್ಥಿ ಒಕ್ಕೂಟದ ಮುಖಂಡ ಐಶೆ ಘೋಷ್ ಆರೋಪಿಸಿದ್ದು, ಇದನ್ನು ಎಬಿವಿಪಿ ತಳ್ಳಿಹಾಕಿ, ದಾಳಿ ಹಿಂದೆ ಎಡಪಂಥೀಯ ಸಂಘಟನೆ ಇದ್ದಿರುವುದಾಗಿ ದೂರಿತ್ತು ಎಂದು ವರದಿ ತಿಳಿಸಿದೆ.
ಭೂಪೇಂದ್ರ ಟೋಮರ್ ಅಲಿಯಾಸ್ ಪಿಂಕಿ ಚೌಧರಿ:
ಹಿಂದೂ ರಕ್ಷಾ ದಳದ ಭೂಪೇಂದ್ರ ಟೋಮರ್ ಅಲಿಯಾಸ್ ಪಿಂಕಿ ಚೌಧರಿ ಈ ಸಂಘಟನೆಯ ಮುಖ್ಯಸ್ಥ. ಪಿಂಕಿ ಭಯ್ಯಾ ಎಂದೇ ಜನಪ್ರಿಯ ಆಗಿರುವ ಟೋಮರ್ ಈಗ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.