Advertisement

ಪೊಡವಿಗೊಡೆಯನ ನಾಡಿನಲ್ಲಿ ಹಿಂದೂ ದಿಗ್ದರ್ಶನ…!

08:13 AM Nov 25, 2017 | |

ಉಡುಪಿ: ಮೂಡಣದಲ್ಲಿ ಸೂರ್ಯನ ಬಾಲಕಿರಣಗಳು ಭುವಿಯನ್ನು ಸ್ಪರ್ಶಿಸುವ ಶುಭ ಘಳಿಗೆಯಲ್ಲಿ  ಪೊಡವಿಗೊಡೆಯ ಶ್ರೀಕೃಷ್ಣನ ನಾಡಿನಲ್ಲಿ ಹಿಂದೂ ಧರ್ಮ ದಿಗ್ದರ್ಶನದ ಭವ್ಯ ಕಲಾಪ “ಧರ್ಮ ಸಂಸದ್‌’ ಐತಿಹಾಸಿಕ ಅಧಿವೇಶನ ಪ್ರಾರಂಭವಾಗಿ ಹಿಂದೂ ಧರ್ಮ ಜಾಗೃತಿಯ ಮಹಾನ್‌ ಸಂಕಲ್ಪಕ್ಕೆ ಮುನ್ನುಡಿ ಬರೆಯಿತು. ಉಡುಪಿ ನಗರ ಸಾಧು ಸಂತರ ತಪೋವನವಾಗಿ ಪರಿವರ್ತಿತವಾಯಿತು.

Advertisement

ಕಾರ್ಯಕರ್ತರ ತ್ರಿಸ್ತರ ಪರಿಶ್ರಮ: ಮೂರು ದಿನಗಳ ಪರ್ಯಂತ ಆಯೋಜಿತವಾಗಿರುವ ಐತಿಹಾಸಿಕ ಅಧಿವೇಶನದ ಯಶಸ್ಸಿಗಾಗಿ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳ ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಶ್ರಮಿಸಿವೆ. ಸಾಧು ಸಂತರ ಸಂಪರ್ಕಕ್ಕಾಗಿ ಸುಮಾರು ಒಂದು ನೂರು ಮಂದಿ ಪ್ರಮುಖ ಕಾರ್ಯಕರ್ತರು ಎಡೆಬಿಡದೆ ಓಡಾಡಿದ್ದಾರೆ. ಅಯೋಧ್ಯೆ, ಹರಿದ್ವಾರ, ಪೀಠಕಾಳಿ, ಕುರುಕ್ಷೇತ್ರ, ಹೃಷಿಕೇಶ, ಬೃಂದಾವನ, ದಿಲ್ಲಿ ಸಹಿತ ದೇಶದ ಮೂಲೆ ಮೂಲೆಗಳಿಗೆ ತೆರಳಿ, ಸಾಧು ಸಂತರನ್ನು ಸಂಪರ್ಕಿಸಿ ಧರ್ಮ ಸಂಸದ್‌ನಲ್ಲಿ ಭಾಗವಹಿಸಲು ಕೋರಲಾಗಿದೆ. ರವಿವಾರ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ವಿವಿಧ ಸಮಾಜಗಳ ಮುಖಂಡರು ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಶ್ರಮಿಸಿದ್ದಾರೆ. ರವಿವಾರದ ಹಿಂದೂ ಸಮಾಜೋತ್ಸವ ಸಂಪೂರ್ಣ ಯಶಸ್ವಿಯಾಗಬೇಕು ಎಂಬ ಆಶಯದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮನೆ ಮನೆ ಸಂಪರ್ಕ ಮಾಡಲಾಗಿದೆ. 

ಸಾವಿರ ಕಾರ್ಯಕರ್ತರು
ಹಿಂದೂ ಸಂಘಟನೆಯ 1,000ಕ್ಕೂ ಅಧಿಕ ಕಾರ್ಯಕರ್ತರು ಕಳೆದ ಹಲವು ದಿನಗಳಿಂದ ರಾತ್ರಿ-ಹಗಲು ಬೇರೆ ಬೇರೆ ರೀತಿಯಲ್ಲಿ ಶ್ರಮಿಸಿದ್ದಾರೆ. ಭೋಜನ- ಸ್ವತ್ಛತೆ ಸಹಿತ ಎಲ್ಲ ವಿಭಾಗಗಳಲ್ಲೂ ಊನವಿಲ್ಲದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ತಂಡಗಳು ಶ್ರಮವಹಿಸಿವೆ. ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಸ್ವಾಮೀಜಿಗಳಿಗೆ ಅತ್ಯಂತ ಅಗತ್ಯವಿರುವ ಪೂಜಾ ಸಾಮಗ್ರಿಗಳು, ನಿತ್ಯಾನುಷ್ಠಾನ ಕೈಗೊಳ್ಳುವ ಸಂದರ್ಭದಲ್ಲಿ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಸಂಘಟಕರ ನೆಲೆಯಲ್ಲಿಯೇ ಒದಗಿಸಲಾಯಿತು.

60 ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ
ಸಾಧು ಸಂತರಿಗೆ 60 ಕೇಂದ್ರಗಳನ್ನು ವಸತಿ ವ್ಯವಸ್ಥೆಗೆಂದು ಮೀಸಲಿಡಲಾಗಿದೆ. ಪ್ರತೀ ಕೇಂದ್ರಕ್ಕೆ ತಲಾ ಐವರಂತೆ ಪ್ರಮುಖ ಕಾರ್ಯಕರ್ತರನ್ನು ಸಿದ್ಧಗೊಳಿಸ ಲಾಗಿದೆ. ಸಂತರನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕರೆತರುವ ವ್ಯವಸ್ಥೆ ಕಾರ್ಯಕರ್ತರು ಮಾಡಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಬಜರಂಗದಳ ಪ್ರಮುಖ ಶರಣ್‌ ಪಂಪ್‌ವೆಲ್‌, ಸುನಿಲ್‌ ಕೆ.ಆರ್‌.

ಧರ್ಮ ಕಾರ್ಯದ ಜತೆಗೆ “ಸ್ವಚ್ಛ ಸಂಕಲ್ಪ’
ಮೂರು ವಿಶೇಷ ತಂಡಗಳು ಸ್ವತ್ಛತೆಗೆ ಪ್ರಾಧಾನ್ಯ ನೀಡಿವೆ. ಶುಕ್ರವಾರ ಮೆರವಣಿಗೆ ಸಾಗಿ ಬಂದ ಅರೆ ಘಳಿಗೆಯಲ್ಲಿ ರಸ್ತೆ ಸ್ವತ್ಛಗೊಳಿಸಿದ್ದು ವಿಶೇಷ. ಸಭಾಂಗಣ ಮತ್ತು ಸುತ್ತಮುತ್ತ, ಭೋಜನಶಾಲೆ ಯಲ್ಲೂ  ಸ್ವತ್ಛತೆ ಕಾಪಿಡುವ ನೆಲೆ ಯಲ್ಲಿ ಪ್ರತ್ಯೇಕ ತಂಡ ಕೆಲಸ ಮಾಡಿದೆ. ಸರ್ವತ್ರ ನೈರ್ಮಲ್ಯ ಕಾಯ್ದುಕೊಳ್ಳುವ ಬಗ್ಗೆ ಕಾರ್ಯಕರ್ತರ ತಂಡ ಶ್ರಮಿಸಿದೆ. ಶೌಚಾಲಯಗಳನ್ನೂ ವ್ಯವಸ್ಥೆ ಮಾಡಲಾಗಿತ್ತು.

Advertisement

ಪರಿಸರಸ್ನೇಹಿ ಸಂದೇಶ
ನಗರವಿಡೀ ಭಗವಾಧ್ವಜಗಳು ಪಟಪಟಿಸುತ್ತ  ಶೃಂಗಾರಗೊಂಡಿವೆ. ಸುಮಾರು 20,000ದಷ್ಟು ಕೇಸರಿ ಧ್ವಜಗಳನ್ನು ಅಳಡವಡಿಸಲಾಗಿದೆ. ಸುಮಾರು 3,000 ಕೆ.ಜಿ. ತೂಕದಷ್ಟು ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ. 4,000ಕ್ಕೂ ಅಧಿಕ ಫ್ಲೆಕ್ಸ್‌ಗಳು ಗಮನಸೆಳೆಯು ತ್ತಿವೆ. ಪ್ಲಾಸ್ಟಿಕ್‌ ಮುಕ್ತವಾಗಿಯೇ ಈ ಎಲ್ಲ  ಪ್ರಚಾರ ಸಾಮಗ್ರಿಗಳನ್ನು ಬಳಸಿಕೊಂಡು ಪರಿಸರಸ್ನೇಹಿ ಸಂದೇಶ ನೀಡಲಾಗಿದೆ.

ಭದ್ರತೆಗೆ 3,400 ಪೊಲೀಸರ ನಿಯೋಜನೆ
ಧರ್ಮಸಂಸದ್‌, ನ.26ರ ಹಿಂದೂ ಸಮಾಜೋತ್ಸವದ ಭದ್ರತೆಗೆ ಒಟ್ಟು 3,400 ಪೊಲೀಸರನ್ನು ನಿಯೋಜಿಸಲಾ ಗಿದೆ. ನಾಲ್ವರು ಎಎಸ್‌ಪಿ, 12 ಡಿವೈಎಸ್‌ಪಿ, 105 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿದ್ದು, ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತುಕಡಿಗಳನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಉಡುಪಿ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ಸ್ವತಃ ಭದ್ರತಾ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದರು. 

ಪೊಲೀಸ್‌ – ಜಂಟಿ ಶ್ರಮ
ಕಲ್ಸಂಕ ಜಂಕ್ಷನ್‌ ಸಹಿತ ಬೇರೆ ಬೇರೆ ಕಡೆಗಳಲ್ಲಿ ವಾಹನ ದಟ್ಟಣೆ ಆಗದಂತೆ ಎಚ್ಚರಿಕೆ ವಹಿಸುವ ಹಿನ್ನೆಲೆಯಲ್ಲಿ ಪೊಲೀಸರ ಜತೆಗೆ ಸ್ವಯಂಸೇವಕರು ಕೂಡ ಶ್ರಮಿಸಿದರು. ವಿಐಪಿ ವಾಹನ ಗಳಿಗೆ ಮಾತ್ರ ಸಂತ ಸಮಾವೇಶ ನಡೆಯುವ ಸ್ಥಳದ ಮುಂಭಾಗ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಬಸ್ಸಿನಲ್ಲಿ ಬಂದವರು ಕಲ್ಸಂಕ ರೋಯಲ್‌ ಗಾರ್ಡನ್‌ ನಿಲ್ದಾಣದಲ್ಲಿ ಇಳಿದು ಬಂದರೆ, ಉಡುಪಿ ಸಿಟಿ/ಸರ್ವೀಸ್‌ ಬಸ್‌ ನಿಲ್ದಾಣದಿಂದ ಕಾಲ್ನಡಿಗೆಯನ್ನು ಆಶ್ರಯಿಸಿದವರು ಸುಮಾರು 10 ನಿಮಿಷಗಳಲ್ಲಿ ಅಧಿವೇಶನ ಸ್ಥಳಕ್ಕೆ ಬಂದರು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next